ಪುತ್ತೂರು: ಪುತ್ತೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಯಾಗಿದ್ದ ಶುಭಕರರವರು ನ. 30 ರಂದು ಸೇವಾ ನಿವೃತ್ತಿ ಹೊಂದಿದ್ದು, ಇವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಪುತ್ತೂರು ದರ್ಬೆಯ ಕೃಷಿ ಇಲಾಖೆಯ ಕಚೇರಿಯಲ್ಲಿ ಜರಗಿತು.
ಪ್ರಾಮಾಣಿಕ ಸೇವೆ- ಶಿವಶಂಕರ್
ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್‌ರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಶುಭಕರ್‌ರವರು ಒಟ್ಟು 33 ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆಯಲ್ಲಿ ಜನ ಮೆಚ್ಚುಗೆ ಪಡೆದಿದ್ದಾರೆ ಎಂದರು.
ಗೌರವಕ್ಕೆ ಪಾತ್ರರಾಗಿದ್ದಾರೆ- ಯಶಸ್ ಮಂಜುನಾಥ್
ಪುತ್ತೂರು ಕೃಷಿ ಇಲಾಖೆಯ ಸಹಾಯಕ ಪ್ರಭಾರ ಕೃಷಿ ನಿರ್ದೆಶಕ ಯಶಸ್ ಮಂಜುನಾಥ್‌ರವರು ಮಾತನಾಡಿ ಸರಳ ವ್ಯಕ್ತಿತ್ವದ ಮೂಲಕ ಶುಭಕರ್‌ರವರು ಉತ್ತಮ ಅಧಿಕಾರಿಯಾಗಿ ಇಲಾಖೆಗೆ ಗೌರವ ತಂದಿದ್ದಾರೆ ಎಂದರು.
ಎಲ್ಲರ ಸಹಕಾರ ದೊರೆತಿದೆ- ಶುಭಕರ
ಸನ್ಮಾನ ಸ್ವೀಕರಿಸಿದ ಶುಭಕರರವರು ಮಾತನಾಡಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲರ ಸಹಕಾರ ದೊರೆತಿದೆ, ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ವರ್ಗದವರಿಗೆ ಹಾಗೂ ಕೃಷಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪುತ್ತೂರು ಕೃಷಿ ಇಲಾಖೆಯ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ, ನಿವೃತ್ತ ಅಧಿಕಾರಿಗಳಾದ ವಿಠಲ ರೈ, ಜತ್ತಪ್ಪ ಗೌಡ, ಕೃಷಿ ಇಲಾಖೆಯ ಅಧಿಕಾರಿಗಳಾದ ಅಭಿಷೇಕ್, ವಂದನಾ, ನಿತೇಶ್‌ರವರು ಸಂದಭೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ಕೃಷಿ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಶುಭಕರರವರ ಪತ್ನಿ ಅನುರಾಧ ಕೆ.ಆರ್, ಪುತ್ರಿ ಡಾ.ಸುನಿಧಿ ಎಸ್‌ರವರುಗಳು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಕಚೇರಿ ಅಧೀಕ್ಷಕ ಕೃಷ್ಣಪ್ರಸಾದ್ ಭಂಡಾರಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು.