ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಿಂದ ನಡೆಯುತ್ತಿರುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದ ನಾಲ್ಕನೇ ದಿನವಾದ ಡಿ.1ರಂದು ಶ್ರೀಕೃಷ್ಣ ಜನ್ಮೋತ್ಸವ, ತೊಟ್ಟಿಲುಸೇವೆ ನಡೆಯಿತು.
ಬೆಳಿಗ್ಗೆ ಕಲಶಾರಾಧನೆ, ಶ್ರೀ ಮದ್ಭಾಗವತ ಪಾರಾಯಣ ಆರಂಭ, ಶ್ರೀಕೃಷ್ಣ ಅವಿರ್ಭಾವಪರ್ಯಂತ ನಡೆಯಿತು. ಶ್ರೀ ಗೋಪಾಲಕೃಷ್ಣ ಹವನ, ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶ್ರೀ ಮಾತಾ ಭಜನಾ ಮಂಡಳಿ ಗೋಳಿತ್ತೊಟ್ಟು ಇವರಿಂದ ಭಜನೆ ಸೇವೆ ನಡೆಯಿತು. ಸಂಜೆ ಶ್ರೀ ಮದ್ಭಾಗವತ ಪ್ರವಚನ, ಶ್ರೀಕೃಷ್ಣ ಜನ್ಮೋತ್ಸವ, ತೊಟ್ಟಿಲುಸೇವೆ ನಡೆಯಿತು. ರಾತ್ರಿ ಮಹಾ ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ವೇದಮೂರ್ತಿ ವಿದ್ವಾನ್ ಕೆ.ಕೃಷ್ಣಮೂರ್ತಿ ಕಾರಂತ ಪೆರ್ನೆ ಇವರ ಆಚಾರ್ಯತ್ವದಲ್ಲಿ ವಿದ್ವಾನ್ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ, ಮುರಳಿಕೃಷ್ಣ ಭಟ್ ನಂದಗೋಕುಲ ಆಲಂತಾಯ ಹಾಗೂ ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಕಾಟುಕುಕ್ಕೆರವರು ಪ್ರವಚನ ನೀಡಿದರು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಹರೀಶ್ ಆರಿಕೋಡಿ ಭೇಟಿ:
ಬೆಳ್ತಂಗಡಿ ತಾಲೂಕಿನ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಅವರು ಡಿ.1ರಂದು ಪೆರಣ ಭಂಡಾರ ಮನೆಗೆ ಆಗಮಿಸಿ ಶ್ರೀಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದಲ್ಲಿ ಪಾಲ್ಗೊಂಡಿದ್ದರು. ಧರ್ಮದರ್ಶಿ ಹರೀಶ್ ಆರಿಕೋಡಿ ಅವರನ್ನು ಪೆರಣ ಭಂಡಾರ ಮನೆ ವತಿಯಿಂದ ಮಹಿಳೆಯ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವಯುತವಾಗಿ ಬರಮಾಡಿಕೊಳ್ಳಲಾಯಿತು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಹಾಗೂ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ವತಿಯಿಂದ ಹರೀಶ್ ಆರಿಕೋಡಿ ಅವರನ್ನು ಗೌರವಿಸಲಾಯಿತು.
ಇಂದು ರುಕ್ಮಿಣಿ ಕಲ್ಯಾಣೋತ್ಸವ:
ಶ್ರೀ ಮದ್ಭಾಗವತ ಸಪ್ತಾಹದ ಪಂಚಮ ದಿನವಾದ ಡಿ.2ರಂದು ಬೆಳಿಗ್ಗೆ ಶ್ರೀ ಮದ್ಭಾಗವತ ಪಾರಾಯಣ, ಶ್ರೀ ಲಕ್ಷ್ಮೀನಾರಾಯಣ ಮಂತ್ರಹವನ ನಡೆಯಲಿದೆ. ಮಧ್ಯಾಹ್ನ ರುಕ್ಮಿಣಿಯ ದಿಬ್ಬಣ ಆಗಮನ, 11.47ರ ಕುಂಭ ಲಗ್ನ ಶುಭಮುಹೂರ್ತದಲ್ಲಿ ರುಕ್ಮಿಣಿ ಕಲ್ಯಾಣೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಭಜನೆ, ಸಂಜೆ ಪ್ರವಚನ ನಡೆಯಲಿದೆ.