ಮಂಗಳೂರು ಹೊರವಲಯ ಸುರತ್ಕಲ್‌ನ ಕೃಷ್ಣಾಪುರದಲ್ಲಿ ನಡೆದ ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿ ಲಭ್ಯವಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ನೀಡಿದ್ದಾರೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಡಿ.25ರಂದು ಮೂಡಬಿದ್ರೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸೇರಿದಂತೆ ಮೊಯ್ದೀನ್ ಬಾವಾ, ಶಾಹುಲ್ ಹಮೀದ್, ಮೊದಲಾದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸುರತ್ಕಲ್ ಭಾಗದಲ್ಲಿ ನಡೆಯುತ್ತಿರುವ ಹತ್ಯೆ, ನೈತಿಕ ಪೊಲೀಸ್‌ಗಿರಿ ಬಗ್ಗೆ ಮನವರಿಕೆ ಮಾಡಿಕೊಟ್ಟು ಘಟನೆ ಬಗ್ಗೆ ವಿವರಿಸಿದ್ದಲ್ಲದೆ ಸರಕಾರ ತಾರತಮ್ಮಯ ಮಾಡದೆ ಮೃತ ಅಮಾಯಕರ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಮತ್ತು ತಪ್ಪಿತಸ್ಥರನ್ನು ಬಂಧಿಸುವಂತೆ ಮನವಿ ಸಲ್ಲಿಸಿದೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಶಾಸಕ ಮೊಯ್ದೀನ್ ಬಾವಾ, ಮುಖ್ಯಮಂತ್ರಿಗಳು ನ್ಯಾಯನೀತಿ ಧರ್ಮ ಪಾಲಿಸುತ್ತಾರೆಂಬ ನಂಬಿಕೆ ನಮಗಿದ್ದು ನ್ಯಾಯದ ನಿರೀಕ್ಷೆಯಲ್ಲಿದ್ದೇವೆ. ಅವರು ಬೆಳಗಾವಿ ಅಧಿವೇಶನದಲ್ಲಿ ಪರಿಹಾರ ಘೋಷಿಸಬಹುದೆಂಬ ವಿಶ್ವಸವೂ ಇದೆ. ಆದರೆ ಈ ಭಾಗದ ಆರ್.ಎಸ್.ಎಸ್ ನಾಯಕರು ಪರಿಹಾರ ನೀಡದಂತೆ ತಡೆದರೆ ನಾವೇನೂ ಮಾಡಕ್ಕಾಗಲ್ಲ. ಚುನಾವಣೆ ಬರ್ತಾ ಇದೆ. 3 ತಿಂಗಳಲ್ಲಿ ಮತ್ತೊಂದು ಮರ್ಡರ್ ಆಗಬಹುದು. ಚುನಾವಣೆಯ ಸಂದರ್ಭದಲ್ಲಿ ಇದು ಸರ್ವೇ ಸಾಮಾನ್ಯ. ಒಟ್ಟಿನಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಸರಕಾರ ಮತ್ತು ಪೊಲೀಸ್ ಇಲಾಖೆ ಮಾಡಬೇಕಿದೆ ಎಂದವರು ಹೇಳಿದ್ದಾರೆ.