ಉಪ್ಪಿನಂಗಡಿ: ಹೊಸ ನಾಡ ಕಚೇರಿಗೆ ಶೌಚಾಲಯ ಭಾಗ್ಯವಿಲ್ಲ!

0

ಉಪ್ಪಿನಂಗಡಿ: ಇಲ್ಲಿನ ಬಹು ಕಾಲದ ಬೇಡಿಕೆಯಾಗಿದ್ದ ನೂತನ ನಾಡ ಕಛೇರಿ ಕಟ್ಟಡವು ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ದವಾಗಿದ್ದರೂ, ಕಟ್ಟಡದೊಳಗೆ ಮೂಲಭೂತ ಅವಶ್ಯಕತೆಯಾದ ಶೌಚಾಲಯದ ನಿರ್ಮಾಣ ಮಾತ್ರ ಇಲ್ಲಿ ಆಗಿಲ್ಲ.


ಗುಡಿಸಲಿನಂತಿದ್ದ ಕಟ್ಟಡದಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಉಪ್ಪಿನಂಗಡಿಯ ನಾಡಕಚೇರಿಯು ಮಳೆಗಾಲದಲ್ಲಿ ಸೋರಿಕೆಯಾಗಿ ಬಂದಂತಹ ಜನತೆಗೆ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ನಾಡ ಕಚೇರಿಯನ್ನು ಸಮೀಪದ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆರು ತಿಂಗಳಾವಧಿಗೆ ಅವಕಾಶ ಬಯಸಿ ಸ್ಥಳಾಂತರಗೊಂಡ ನಾಡಕಚೇರಿಯು ವರ್ಷಗಳು ಉರುಳಿದರೂ ಸ್ವಂತ ಕಟ್ಟಡ ನಿರ್ಮಾಣವಾಗದ ಕಾರಣ ಪಂಚಾಯತ್ ಕಟ್ಟಡದಲ್ಲೇ ಕಾರ್ಯಚಟುವಟಿಕೆಯನ್ನು ಮುಂದುವರೆಸಿತ್ತು. ಈ ಮಧ್ಯೆ ಗ್ರಾ.ಪಂ. ಆಡಳಿತವು ತಮ್ಮ ಡಿಜಿಟಲ್ ಗ್ರಂಥಾಲಯದ ಕಾರ್ಯಾರಂಭಕ್ಕೆ ನಾಡ ಕಚೇರಿಯು ಕಾರ್ಯ ನಿರ್ವಹಿಸುವ ಕೊಠಡಿಯನ್ನು ಆಪೇಕ್ಷಿಸಿ ಕಂದಾಯ ಇಲಾಖೆಗೆ ಪತ್ರ ರವಾನಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ 20 ಲಕ್ಷ ರೂ. ಮಂಜೂರುಗೊಳಿಸುವ ಮೂಲಕ ಶಾಶ್ವತ ಕಟ್ಟಡ ರಚನೆಗೆ ಅವಕಾಶವನ್ನು ಒದಗಿಸಿದರು. ಈ ಸಂಬಂಧ ಶಿಲಾನ್ಯಾಸವನ್ನು ನೆರವೇರಿಸಿದ ಶಾಸಕ ಸಂಜೀವ ಮಠಂದೂರುರವರು ಉಪ್ಪಿನಂಗಡಿ ನೆರೆ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿ ಮಳೆಗಾಲದಲ್ಲಿ ಕಂದಾಯ ಇಲಾಖಾಧಿಕಾರಿಗಳು ಮೊಕ್ಕಾಂ ಹೂಡಬೇಕಾದ ಅನಿವಾರ್ಯತೆ ಇರುವುದರಿಂದ ನಿರ್ಮಾಣವಾಗಲಿರುವ ನಾಡಕಚೇರಿಯಲ್ಲಿ ಒಂದು ವಿಶ್ರಾಂತಿ ಗೃಹವೂ ರಚನೆಯಾಗಲಿ ಅದಕ್ಕಾಗಿ ತನ್ನ ಶಾಸಕತ್ವದ ನಿಧಿಯಿಂದ 5 ಲಕ್ಷ ರೂ. ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವುದಾಗಿ ತಿಳಿಸಿದ್ದರು.

ಶಾಸಕರು ಹಂಬಲಿಸಿದಂತೆ ವಿಶ್ರಾಂತಿ ಗೃಹದ ನಿರ್ಮಾಣವೂ ಆಗದೆ, ಆದರೆ ಅತ್ತ ಕಟ್ಟಡಕ್ಕೆ ಮೂಲಭೂತವಾಗಿ ಇರಲೇ ಬೇಕಾದ ಶೌಚಾಲಯ ನಿರ್ಮಾಣವಾಗದೆ ಕೇವಲ ಮೂರು ಕೊಠಡಿಗಳನ್ನು ಹೊಂದಿಸಿಕೊಳ್ಳಬಹುದಾದ ಕಟ್ಟಡವನ್ನು ನಿರ್ಮಿಸಿ ಲೋಕಾರ್ಪಣೆಗೆ ಸಿದ್ದಗೊಳಿಸಲಾಗಿದೆ.

ಕಂದಾಯ ಇಲಾಖಾ , ಆಧಾರ್ ಸಂಬಂಧಿತ ಕಾರ್ಯಗಳಿಗಾಗಿ ನಾಡಕಚೇರಿಗೆ ಬರುವಂತಹ ಜನರು ತಮ್ಮ ದೇಹ ಬಾಧೆಯನ್ನು ನಿವಾರಿಸಲು ಎಲ್ಲೆಲ್ಲಿಗೋ ಹೋಗಬೇಕಾದ ಅನಿವಾರ್ಯತೆಯನ್ನು ಈ ಹೊಸದಾದ ಕಟ್ಟಡವು ಮೂಡಿಸಿದೆ. ಮುಖ್ಯವಾಗಿ ದಿನವಿಡೀ ಕಚೇರಿಯಲ್ಲೇ ಕಾರ್ಯ ನಿರತರಾಗಿರುವ ಸಿಬ್ಬಂದಿಗಳೂ ಕೂಡಾ ತಮ್ಮ ಅವಶ್ಯಕತೆಗೆ ಎಲ್ಲೆಲ್ಲಿಗೋ ಅಲೆಯುವಂತೆ ಮಾಡಲಾಗಿದೆ.

ನಿರ್ಮಿತಿ ಕೇಂದ್ರದವರು ಭರವಸೆ ನೀಡಿದ್ದಾರೆ: ತಹಶೀಲ್ದಾರ್ ಈ ಬಗ್ಗೆ ಸ್ಪಷ್ಟನೆ ಬಯಸಿ ಪುತ್ತೂರು ತಾಲೂಕು ತಹಶೀಲ್ದಾರ್ ನಿಸರ್ಗಪ್ರಿಯರವರನ್ನು ಸಂಪರ್ಕಿಸಿದಾಗ, ಸಣ್ಣ ಪುಟ್ಟ ಕಾರ್ಯಗಳನ್ನು ಹೊರತು ಪಡಿಸಿದರೆ ಎಲ್ಲಾ ನಿರ್ಮಾಣ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೆ ನಾಡ ಕಚೇರಿ ಕಟ್ಟಡ ಸಿದ್ದವಾಗಿದೆ. ಕಟ್ಟಡದಲ್ಲಿ ಮೂಲಭೂತ ಅವಶ್ಯಕತೆಯಾದ ಶೌಚಾಲಯ ನಿರ್ಮಾಣವಾಗದಿರುವ ಬಗ್ಗೆ ನಿರ್ಮಿತಿ ಕೇಂದ್ರದವರನ್ನು ಪ್ರಶ್ನಿಸಲಾಗಿದ್ದು, ಶೌಚಾಲಯವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸತ್ಯ ಅನಾವರಣಗೊಂಡು ಶೌಚಾಲಯ ನಿರ್ಮಾಣವಾಗಲಿ: ಸ್ಥಳೀಯರು ಕಟ್ಟಡ ಕಾಮಗಾರಿಯನ್ನು ನಡೆಸಿದವರನ್ನು ಪ್ರಶ್ನಿಸಿದಾಗ ಸರಕಾರದಿಂದ ದೊರೆತ ಅನುದಾನದಲ್ಲಿ ಆಗುವಷ್ಟು ಕೆಲಸ ಮಾಡಲಾಗಿದೆ. ಶೌಚಾಲಯ ಬೇಕಾದಲ್ಲಿ ಹೆಚ್ಚಿನ ಅನುದಾನ ಒದಗಿಸಲಿ. ಶೌಚಾಲಯ ನಿರ್ಮಿಸಿಕೊಡುವೆವು ಎಂದು ಹೇಳಿದ್ದಾರೆಂದು ತಿಳಿದು ಬಂದಿದ್ದು, ಇದರ ಸತ್ಯಾಸತ್ಯತೆಯನ್ನು ತಿಳಿದು ನಾಡಕಚೇರಿಗೆ ಅಗತ್ಯವಾದ ಶೌಚಾಲಯದ ನಿರ್ಮಾಣಕ್ಕೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here