ಉಪ್ಪಿನಂಗಡಿ: ಗ್ರಾಹಕನ ಸೋಗಿನಲ್ಲಿ ಬಂದು ಕ್ಯಾಶ್ ಕೌಂಟರ್‌ನಲ್ಲಿದ್ದ 7500 ರೂಪಾಯಿ ಹಾಗೂ ದಾಖಲೆಪತ್ರಗಳಿದ್ದ ಪರ್ಸ್ ನ್ನು ಎಗರಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿನ ಮಡಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗೆ ಬಂದ ಸುಮಾರು 60 ರ ವಯೋಮಾನದ ವ್ಯಕ್ತಿ ಹತ್ತು ರೂಪಾಯಿ ಮೌಲ್ಯದ ಪಾನೀಯವನ್ನು ಖರೀದಿಸಿ, ಅಂಗಡಿ ಮಾಲಕ ಅನ್ಯ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವ ವೇಳೆ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ ಪರ್ಸನ್ನೇ ಎಗರಿಸಿ ಪರಾರಿಯಾಗಿರುತ್ತಾನೆ.
7500 ರೂ ನಗದು ಹಾಗೂ ಇನ್ನಿತರ ಪ್ರಮುಖ ದಾಖಲೆ ಪತ್ರಗಳಿದ್ದ ಪರ್ಸನ್ನು ಎಗರಿಸಿದ ಕಳ್ಳ ಅಟೋ ರಿಕ್ಷಾವೊಂದರಲ್ಲಿ ನೆಕ್ಕಿಲಾಡಿವರೆಗೆ ಪ್ರಯಾಣಿ ಅಲ್ಲಿಂದ ಮರೆಯಾಗಿರುತ್ತಾನೆ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲವಾದರೂ, ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ನಡೆಸುವವರ ಬಗ್ಗೆ ಎಚ್ಚರ ವಹಿಸಬೇಕಾದ ಕಾರಣಕ್ಕೆ ಉಪ್ಪಿನಂಗಡಿ ವರ್ತಕ ಸಂಘದ ಸದಸ್ಯರು ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹರಿಯಬಿಟ್ಟಿದ್ದಾರೆ.
ಪೊಲೀಸರಿಗೆ ದೂರು ಸಲ್ಲಿಸುವುದು ವ್ಯರ್ಥ ಕಸರತ್ತು ಇಲ್ಲಿ . . . . :
ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲ ತಿಂಗಳಲ್ಲಿ ಹಲವಾರು ಕಳ್ಳತನದ ಪ್ರಕರಣಗಳು ನಡೆದಿದ್ದರೂ ಯಾವೊಂದೂ ಪ್ರಕರಣಗಳಲ್ಲಿಯೂ ತನಿಖಾ ಪ್ರಗತಿ ಸಾಧಿಸದಿರುವ ಉಪ್ಪಿನಂಗಡಿ ಪೊಲೀಸರ ಬಗ್ಗೆ ಸಾರ್ವಜನಿಕರ ವಿಶ್ವಾಸವೇ ಕುಸಿದಿದ್ದು, ಒರ್ವ ವೃತ್ತ ನಿರೀಕ್ಷಕ, ಮೂವರು ಎಸೈಗಳನ್ನು ಹಲವು ಎಎಸೈಗಳನ್ನು ಹೊಂದಿರುವ ಪೊಲೀಸ್ ಠಾಣೆ ಸಾರ್ವಜನಿಕರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆಪಾದನೆಗೆ ತುತ್ತಾಗಿದೆ. ಈ ಹಿನ್ನೆಲೆಯಿಂದ ಯಾವುದೇ ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ಸಲ್ಲಿಸುವುದು ಎಂದರೆ ವ್ಯರ್ಥ ಕಸರತ್ತು ಎಂದು ಭಾವಿಸಿ ಜನತೆ ಮೌನವಾಗಿದ್ದಾರೆ. ತತ್ ಪರಿಣಾಮ ಉಪ್ಪಿನಂಗಡಿ ಪರಿಸರದಲ್ಲಿ ಕಳವು, ವಂಚನೆ ಪ್ರಕರಣಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತಾಗಿದೆ.