ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಕಾಮಧೇನು ನವೀನ್‌ರಿಂದ ತಂದೆ, ಪತ್ನಿ, ಅತ್ತೆ, ಮಾವ, ಬಾವ, ಆಸ್ಪತ್ರೆಯವರ ಮೇಲೆ ದೂರು

0

ತಪ್ಪು ಕಲ್ಪನೆಯಿಂದ ಹೀಗೆಲ್ಲ ದೂರು ನೀಡುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿದ್ದೆನೆ: ಮಾಧವ ಗೌಡ

ಸುಳ್ಯ: ಹೈಕೋರ್ಟಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದ ಪರಿಣಾಮವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಬೆಳ್ಳಾರೆಯ ಕಾಮಧೇನು ನವೀನ್ ಗೌಡರು, ಜ.4 ರಂದು ಬೆಂಗಳೂರಿನ ಪುಟ್ಟೇನಹಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿ, ತಂದೆ ಮಾಧವ ಗೌಡ, ಪತ್ನಿ ಸ್ಪಂದನ, ಅತ್ತೆ ದಿವ್ಯಪ್ರಭಾ, ಮಾವ, ಬಾವ ಮತ್ತು ಬೆಂಗಳೂರಿನ ಕ್ಯಾಡಬಮ್ಸ್ ಆಸ್ಪತ್ರೆಯವರು, ಬಲಾತ್ಕಾರವಾಗಿ ಇಂಜಕ್ಷನ್ ಮತ್ತು ಮಾತ್ರೆಗಳನ್ನು ನೀಡಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿಕೊಂಡಿದ್ದಾರೆ.

ಈ ದೂರನ್ನು ಬೆಳ್ಳಾರೆ ಪೋಲೀಸ್ ಠಾಣೆಗೆ ನೀಡುವಂತೆ ಅಲ್ಲಿನ ಎಸ್.ಐ.ಯವರು ಒಮ್ಮೆ ನಿರ್ದೇಶನ ನೀಡಿದ್ದು, ಈಗ ಮತ್ತೆ ಮೇಲಧಿಕಾರಿಗಳ ಎಚ್ಚರಿಕೆಯ ಪರಿಣಾಮವಾಗಿ ಕೇಸು ದಾಖಲಿಸಿಕೊಳ್ಳಲು ಮುಂದಾಗಿರುವುದಾಗಿ ಹೇಳಲಾಗುತ್ತಿದೆ.

ಬೆಳ್ಳಾರೆಯ ಉದ್ಯಮಿ ಕಾಮಧೇನು ಮಾಧವ ಗೌಡರ ಪುತ್ರ, ಉದ್ಯಮಿ ನವೀನ್ ಗೌಡರನ್ನು ದ.19ರಂದು ಕುಡಿತದ ಚಟ ಬಿಡಿಸುವುದಕ್ಕಾಗಿ ಬೆಂಗಳೂರಿನ ಕ್ಯಾಡಬಮ್ಸ್ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ ಅಲ್ಲಿನ ಸಿಬ್ಬಂದಿಗಳ ಮೂಲಕ ಬಲಾತ್ಕಾರವಾಗಿ ಬೆಳ್ಳಾರೆಯ ಮನೆಯಂಗಳದಿಂದ ಕರೆದೊಯ್ಯಲಾಗಿತ್ತು. ಆ ಸಂದರ್ಭ ತಡೆಯ ಬಂದ ತಾಯಿ ನೀರಜಾಕ್ಷಿ, ಅಣ್ಣ ವಿನ್ಯಾಸ್ ಹಾಗೂ ಅತ್ತಿಗೆ ಪ್ರಜ್ಞಾರವರ ಮೇಲೆ ಹಲ್ಲೆ ನಡೆದಿರುವುದಾಗಿ ನೀರಜಾಕ್ಷಿಯವರು ಆಸ್ಪತ್ರೆಗೆ ದಾಖಲಾಗಿ ಪೋಲೀಸರಿಗೆ ದೂರು ನೀಡಿದ್ದರಲ್ಲದೆ, ಅಪಹರಣ ಕೇಸು ದಾಖಲುಗೊಳಿಸಿದರು.

ಬೆಳ್ಳಾರೆಯ ಮನೆಯಿಂದ ನವೀನರನ್ನು ಕರೆದೊಯ್ದ ತಂಡ, ತಂದೆ ಎಂ. ಮಾಧವ ಗೌಡ, ಪತ್ನಿ ಸ್ಪಂದನಾ ಹಾಗೂ ಅತ್ತೆ ದಿವ್ಯಪ್ರಭಾರ ನೇತೃತ್ವದಲ್ಲಿ ಬೆಂಗಳೂರಿನ ಕ್ಯಾಡಬಮ್ಸ್ ಆಸ್ಪತ್ರೆಗೆ ಸೇರಿಸಿದ್ದರು.

ಆ ಬಳಿಕ ನೀರಜಾಕ್ಷಿಯವರು ನ್ಯಾಯವಾದಿ ಪಿ.ಪಿ. ಹೆಗ್ಡೆಯವರ ಮೂಲಕ ಹೈಕೋರ್ಟಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ ಮೇರೆಗೆ 22.12.2023 ರನ್ನು ಹೈ ಕೋರ್ಟು ಆದೇಶದಂತೆ ಕ್ಯಾಡಬಮ್ಸ್ ಆಸ್ಪತ್ರೆಯಿಂದ ನವೀನರನ್ನು ಬಿಡುಗಡೆಗೊಳಿಸಿ ಬೆಂಗಳೂರಿನಲ್ಲೆ ಉಳಿದು ಕೊಳ್ಳಲು ಆದೇಶಿಸಲಾಗಿತ್ತು. ನಂತರ 2.1.2023 ರಂದು ನವೀನರನ್ನು ಸಂಪೂರ್ಣ ಬಂಧ ಮುಕ್ತಗೊಳಿಸಿತು.

ನವೀನ್ ದೂರಿನಲ್ಲಿ ಏನಿದೆ?:
ಕಾಮಧೇನು ನವೀನ್ ರವರು 4.1.2023ರಂದು ಬೆಂಗಳೂರಿನ ಪುಟ್ಟೇನ ಹಳ್ಳಿ ಪೋಲೀಸ್ ಠಾಣೆಗೆ ಹೋಗಿ, ದ.19ರಂದು ನನ್ನನ್ನು ಬಲಾತ್ಕಾರವಾಗಿ ಅಂಬ್ಯುಲೆನ್ಸ್‌ನಲ್ಲಿ ಅಪಹರಣ ಮಾಡಿ ಕೈ ಕಾಲು ಕಟ್ಟಿ, ಕಾಲಿನಿಂದ ತುಳಿದು, ನಿದ್ದೆ ಬರುವ ಇಂಜಕ್ಷನ್ ಚುಚ್ಚಿದರು. ಇದರಿಂದಾಗಿ ನನಗೆ ಕೈಕಾಲುಗಳಲ್ಲಿ ಬಲವೇ ಇಲ್ಲದಂತಾಗಿತ್ತು. ನನ್ನ ಮೊಬೈಲನ್ನು ಹಾಗೂ ವಾಯಿಸ್ ರೆಕಾರ್ಡರನ್ನು ಪ್ಯಾಂಟ್ ಕಿಸೆಯಿಂದ ಕಿತ್ತುಕೊಂಡಿದ್ದಾರಲ್ಲದೆ, 2.50 ಲಕ್ಷ ರೂ. ಹಣ ಹಾಗೂ ಚಿನ್ನ ದರೋಡೆಗೈದಿದ್ದಾರೆ.

ಬೆಂಗಳೂರಿನ ಕ್ಯಾಡಬಮ್ಸ್ ಆಸ್ಪತ್ರೆಗೆ ಮಧ್ಯರಾತ್ರಿ ನನ್ನನ್ನು ಸೇರಿಸಿದ್ದಾರೆ. ಆರೋಪಿಗಳು ವೈದ್ಯರೊಂದಿಗೆ ಶಾಮೀಲಾಗಿ ಮೊದಲೇ ತೀರ್ಮಾನಿಸಿದಂತೆ ನನ್ನನ್ನು ಹುಚ್ಚ ಕುಡುಕ ಎಂದು ಬಿಂಬಿಸುವ ದಾಖಲೆ ಸೃಷ್ಠಿಸಿ ಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲು ಮಾಡುವ ವೇಳೆ ನನ್ನ ಮೇಲಿದ್ದ ಚಿನ್ನದ ಚೈನ, ಇನ್ನೊಂದು ಮೊಬೈಲ್ ಫೋನ್, ಮನೆ ಕೀ ಗಳನ್ನು ದಿವ್ಯಪ್ರಭಾ, ಸ್ಪಂದನಾ, ಮಾಧವ ಗೌಡ, ಪರಶುರಾಮ, ಸ್ಪರ್ಶಿತ್ ಸೇರಿ ನನ್ನಿಂದ ಕಿತ್ತುಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲು ಮಾಡಿ ಬಲಾತ್ಕಾರವಾಗಿ ಇಂಜಕ್ಷನ್ ಮತ್ತು ಮಾತ್ರೆಗಳನ್ನು ನೀಡಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಮೇಲ್ಕಾಣಿಸಿದ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ದ.19ರ ಘಟನೆಗೆ ಮುಂಚಿತವಾಗಿ ಅ.2 ರಂದು ನಡೆದ ಘಟನೆಯ ಬಗ್ಗೆ ಹಾಗೂ ತಂದೆ ಹಾಗೂ ಪತ್ನಿಯ ನಡತೆ ಮತ್ತು ಶೀಲದ ಬಗ್ಗೆ ಅವರು ದೂರು ನೀಡಿದ್ದಾರೆ. ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಎಸ್.ಐ. ಆನಂದರ ಹೆಸರನ್ನೂ ನವೀನ್ ಉಲ್ಲೇಖಿಸಿದ್ದಾರೆ.

ಪುಟ್ಟೇನಹಳ್ಳಿ ಪೋಲೀಸರು ಈ ದೂರನ್ನು ಸ್ವೀಕರಿಸಿ, ಬಳಿಕ, ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಈಗಾಗಲೇ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿರುವುದರಿಂದ ಈ ದೂರನ್ನು ಆ ಪ್ರಕರಣಕ್ಕೆ ಅಳವಡಿಸಿಕೊಳ್ಳಲು ಕೋರಿದೆ ಎಂದು ತಿಳಿಸಿ ಬೆಳ್ಳಾರೆಗೆ ಕಳುಹಿಸಿದ್ದರು.
ಆದರೆ ಪ್ರಕರಣ ದಾಖಲಿಸಿಕೊಳ್ಳದೆ ಬೆಳ್ಳಾರೆಗೆ ಕೊಡಲು ಹೇಳಿರುವ ಬಗ್ಗೆ ಮೇಲಧಿಕಾರಿಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಪುಟ್ಟೇನಹಳ್ಳಿ ಪೋಲೀಸರು ನವೀನ್‌ರಿಗೆ ಫೋನ್ ಮಾಡಿ ಹೇಳಿಕೆ ನೀಡಲು ಬರಬೇಕೆಂದು ಕರೆಯುತ್ತಿದ್ದಾರೆಂದು ತಿಳಿದು ಬಂದಿದೆ.

ಮನೆಗೆ ಬರುವಂತೆ ಕರೆದ ಮಾಧವ ಗೌಡ ಶುಕ್ರವಾರ ಮನೆ ಸೇರಿದ ಸಂಸಾರ
ಜನವರಿ 2 ರಂದು ಹೈಕೋರ್ಟು ಆದೇಶದ ಮೇರೆಗೆ ಪೂರ್ಣಮುಕ್ತರಾಗಿ ಊರಿಗೆ ಬಂದಿದ್ದರೂ, ನೀರಜಾಕ್ಷಿ, ವಿನ್ಯಾಸ್, ಪ್ರಜ್ಞಾ ಮತ್ತು ನವೀನರು ಬೆಳ್ಳಾರೆಯ ತಮ್ಮ ಮನೆಗೆ ಬಂದಿರಲಿಲ್ಲ.

ಆ ಬಳಿಕ ಎಂ.ಮಾಧವ ಗೌಡರು ಮನೆಗೆ ಬರುವಂತೆ ಹೇಳಿ ಕಳುಹಿಸಿದ ಮೇರೆಗೆ ಜ.13 ರಂದು ಬೆಳಗ್ಗೆ ಅವರು ತಮ್ಮ ಮನೆಗೆ ಬಂದಿದ್ದಾರೆ.

ತಂದೆಗೆ ನೀಡಿದ್ದ ಜಿಪಿಎ ರದ್ದು-ಪ್ರಕಟಣೆ
ಈ ನಡುವೆ ತಾನು ತಂದೆ ಮಾಧವ ಗೌಡರಿಗೆ ನೀಡಿರುವ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ)ಯನ್ನು ರದ್ದುಪಡಿಸಿರುವುದಾಗಿ ನವೀನ್ ಎಂ.ಅವರು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ.

ಕಾಮಧೇನು ಗೋಲ್ಡ್ ಪ್ಯಾಲೇಸ್ ಮತ್ತು ಕಲ್ಪವೃಕ್ಷ ಫೈನಾನ್ಸ್ ಸೇರಿದಂತೆ ತನಗೆ ಸೇರಿದ ಯಾವುದೇ ಆಸ್ತಿ, ವ್ಯವಹಾರಗಳಿಗೆ ಸಂಬಂಧಿಸಿ ತಂದೆ ಮಾಧವ ಗೌಡರಿಗೆ ನೀಡಿರುವ ಜಿಪಿಎಯನ್ನು ತಕ್ಷಣದಿಂದಲೇ ರದ್ದುಗೊಳಿಸಿದ್ದು ಇನ್ನು ಮುಂದೆ ತನ್ನ ಆಸ್ತಿಗೆ ಸಂಬಂಧಿಸಿ ವ್ಯವಹರಿಸಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ತಪ್ಪು ಕಲ್ಪನೆಯಿಂದ ದೂರು ನೀಡಿದ್ದಾನೆ : ಮಾಧವ ಗೌಡ

ನವೀನರು ಬೆಂಗಳೂರಿನಲ್ಲಿ ತಮ್ಮ ಮೇಲೆ ದೂರು ನೀಡಿರುವ ಬಗ್ಗೆ ಎಂ. ಮಾಧವ ಗೌಡರನ್ನು ಸಂಪರ್ಕಿಸಿ ವಿಚಾರಿಸಿದಾಗ ಅದು ಒಮ್ಮೆ ಅಪಹರಣ ಕೇಸು ನೀಡಿದ ವಿಚಾರ. ಪುನಃ ನವೀನ ದೂರು ನೀಡಿದ್ದಾನೆ. ಅದರಲ್ಲಿ ಸತ್ಯಾಂಶ ಯಾವುದೂ ಇಲ್ಲ. ಅವನನ್ನು ಆಸ್ಪತ್ರೆಗೇ ಕಳುಹಿಸಬೇಕೆಂದು ನಾವು ಪ್ರಯತ್ನ ಮಾಡಿರುವುದಕ್ಕೆ ಬೇಕಾಗಿ ಅವರು ಆ ರೀತಿ ಸುಳ್ಳು ದೂರು ಕೊಡಿಸಿದ್ದಾರೆ. ಮನೆಯ ವಿಚಾರವನ್ನು ನಾನು ಎಲ್ಲವನ್ನೂ ಹೇಳಲಾಗುವುದಿಲ್ಲ. ತಪ್ಪು ಕಲ್ಪನೆ ಯಿಂದ ಹೀಗೆಲ್ಲ ಮಾಡುತ್ತಿದ್ದಾರೆ. ನಾನು ಇಷ್ಟೆಲ್ಲ ಸಂಪತ್ತು ಮಾಡಿದ್ದನ್ನು ಮಕ್ಕಳಿಗೆ ನೀಡಿದ್ದೆನೆ. ಆದರೆ ನನ್ನ ಬಗ್ಗೆ ಮತ್ತು ಸ್ಪಂದನಾಳ ಬಗ್ಗೆ ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ದೂರು ನೀಡಿದ್ದಾನೆ. ಇವನು ದುರಾಬ್ಯಾಸದಿಂದ ದೂರವಿದ್ದು, ಸರಿಯಾಗಬೇಕೆಂಬ ದೃಷ್ಠಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ. ನನ್ನ ಸೊಸೆ ಕೂಡಾ ಅದೇ ದೃಷ್ಠಿಯಿಂದ ಪ್ರಯತ್ನ ಮಾಡುತ್ತಿದ್ದಾಳೆ. ಅದು ಅವನಿಗೆ ತನ್ನ ವಿರುದ್ಧ ಎಂಬ ಅಭಿಪ್ರಾಯ ಬಂದಿದೆ. ತಂದೆಯಾಗಿ ನಾನು ಹೇಗೆ ಇದನ್ನೆಲ್ಲ ಸಹಿಸಿಕೊಳ್ಳಬೇಕು ಹೇಳಿ. ಸಂಸಾರ ಸರಿಯಾದೀತೆಂಬ ಆಶಾವಾದದಿಂದಿದ್ದೆನೆ ಎಂದು ಹೇಳಿದರು.

ಮಗಳ ಜೀವನ ಸರಿಪಡಿಸ ಹೋಗುವುದು ತಪ್ಪೇ?:ದಿವ್ಯಪ್ರಭಾ

ದಿವ್ಯಪ್ರಭಾ ಚಿಲ್ತಡ್ಕರನ್ನು ಸಂಪರ್ಕಿಸಿ ವಿಚಾರಿಸಿದಾಗ ನನ್ನ ಮಗಳ ಜೀವನಕ್ಕೆ ತೊಂದರೆಯಾಗುತ್ತಿರುವಾಗ ಅದನ್ನು ಸರಿಪಡಿಸಲು ನಾನು ಪ್ರಯತ್ನಿಸುವುದು ತಪ್ಪಾ? ನವೀನ ಕುಡಿತ ಮತ್ತು ಇತರ ಸಹವಾಸದಿಂದ ಹೊರಗೆ ಬರಬೇಕೆಂದು ನಾವು ಪ್ರಯತ್ನಿಸುತ್ತಿದ್ದರೆ, ರಾಜಕೀಯ ಕಾರಣಕ್ಖಾಗಿ ತಪ್ಪು ವಿಚಾರಗಳನ್ನು ಹರಡುವ ಪ್ರಯತ್ನ ನಡೆಯುತ್ತಿದೆ. ಈಗ ಏನು ಅಪಪ್ರಚಾರ ಮಾಡಲಾಗುತ್ತಿಯೋ ಅದು ಸರಿಯಲ್ಲ. ಏನಿದ್ದರೂ ದೇವರಿದ್ದಾರೆ. ಇವತ್ತಲ್ಲ ನಾಳೆ ಜನರಿಗೆ ಸತ್ಯ ಸಂಗತಿ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಫೋನ್, ಲ್ಯಾಪ್‌ಟಾಪ್, ಪೆನ್‌ಡ್ರೈವ್‌ಗಳಿಂದ ವಿಡೀಯೋ ಡಿಲೀಟ್ ಮಾಡಿದ್ದು ಯಾಕೆ? : ನವೀನ್ ಪ್ರಶ್ನೆ

ನವೀನ ಗೌಡರನ್ನು ಸಂಪರ್ಕಿಸಿ ವಿಚಾರಿಸಿದಾಗ ನನ್ನ ತಾಯಿ ನೀರಜಾಕ್ಷಿಯವರು ಅಪಹರಣ ದೂರು ನೀಡಿದ್ದರು. ಆದರೆ ನಾನು ನ್ಯಾಯಾಲಯದ ಆದೇಶದನ್ವಯ ಆಸ್ಪತ್ರೆಯಿಂದ ಹೊರ ಬಂದ ಬಳಿಕ ನಿಜವಾಗಿ ಏನೇನು ಘಟನೆ ನಡೆದಿದೆ ಎಂಬುದನ್ನು ಪುಟ್ಟೇನಹಳ್ಳಿ ಪೋಲೀಸ್ ಠಾಣೆಗೆ ಹೋಗಿ ಲಿಖಿತವಾಗಿ ನೀಡಿದ್ದೆನೆ. ನನ್ನನ್ನು ಕುಡಿತ ಬಿಡಿಸಲು ಕರೆದೊಯ್ಯುವುದಿದ್ದರೆ ಆ ರೀತಿ ಕೈ ಕಾಲು ಕಟ್ಟಿ ಬಲಾತ್ಕಾರವಾಗಿ ಎಳೆದುಕೊಂಡು ಹೋಗಬೇಕಿತ್ತಾ? ನಾನು ಅಷ್ಟು ಹೀನ ಸ್ಥಿತಿಯಲ್ಲಿದ್ದೆನಾ? ನನಗೂ ಘನತೆ ಮರ್ಯಾದೆ ಇಲ್ವಾ?. ನನ್ನ ಫೋನ್, ವಾಯಿಸ್ ರೆಕಾರ್ಡರ್ ಎಳೆದುಕೊಂಡದ್ದು ಯಾಕೆ? ಮನೆಯಲ್ಲಿದ್ದ ನನ್ನ ಲ್ಯಾಪ್‌ಟಾಪ್, ಪೆನ್‌ಡ್ರೈವ್‌ಗಳನ್ನು ಕೊಂಡೊಯ್ದದ್ದು ಯಾಕೆ? ಅದರಲ್ಲಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದು ಯಾಕೆ? ಈ ವಿಚಾರ ತನಿಖೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here