ಸರಕಾರಿ ಶಾಲೆಗಳು ಜನಾಕರ್ಷಣೆಯ ಶಿಕ್ಷಣ ಕೇಂದ್ರಗಳಾಗುತ್ತಿರುವುದು ಸಂತಸದ ವಿಚಾರ: ಮಠಂದೂರು
ಪುತ್ತೂರು: ಸರಕಾರಿ ಶಾಲೆಗಳು ಯಾವುದಕ್ಕೂ ಕಮ್ಮಿಯಿಲ್ಲ, ಯಾವುದರಲ್ಲೂ ಕಮ್ಮಿಯಿಲ್ಲ ಖಾಸಗಿ ಶಾಲೆಗಳಿಗೂ ಪೈಪೋಟಿ ಕೊಡುವ ಹಂತಕ್ಕೆ ಬಂದು ತಲುಪಿದ್ದು , ಸರಕಾರಿ ಶಾಲೆಗಳು ಜನಾಕರ್ಷಣೆಯ ಶಿಕ್ಷಣ ಕೇಂದ್ರಗಳಾಗಿ ಬದಲಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಕಾವು ಸರಕಾರು ಉ ಹಿ ಪ್ರಾ ಶಾಲೆಯಲ್ಲಿ ನಡೆದ ಮಕ್ಕಳ ಬಣ್ಣದ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳು ಇದಕ್ಕಾಗಿ ಸಜ್ಜಾಗಬೇಕಿದೆ. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಯಾವುದೇ ಕೊರತೆಯಾಗದಂತೆ ಸರಕಾರ ನೋಡಿಕೊಳ್ಳುತ್ತಿದೆ. ಪುತ್ತೂರು ವಿಧಾನಸಭಾ ಬಹುತೇಕ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಪೋಷಕರು ಶಾಲೆಯತ್ತ ತಮ್ಮ ಚಿತ್ತವನ್ನು ಹರಿಸಬೇಕು, ಸರಕಾರಿ ಶಾಲೆಗಳು ಉಳಿಯಬೇಕಾದರೆ ಪೋಷಕರ , ಗ್ರಾಮದ ಜನತೆಯ ಸಹಕಾರ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ಕಾವು ಶಾಲೆಯನ್ನು ಹೇಮನಾಥ ಶೆಟ್ಟಿಯವರು ದತ್ತು ತೆಗೆದುಕೊಂಡಿದ್ದಾರೆ. ಶಾಲೆಯನ್ನು ದತ್ತು ತೆಗೆದುಕೊಂಡ ಬಳಿಕ ಇಲ್ಲಿ ಅನೇಕ ಅಭಿವೃದ್ದಿ ಕೆಲಸ ಹಾಗೂ ಬದಲಾವಣೆಗಳು ಉಂಟಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ತಾಲೂಕಿನ ಏಳೆಂಟು ಶಾಲೆಗಳನ್ನು ವಿವಿಧ ವ್ಯಕ್ತಿಗಳು ದತ್ತು ತೆಗೆದುಕೊಂಡಿದ್ದಾರೆ . ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಶಾಲೆಗಳ ಉಳಿವಿಗೆ, ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದ ಅವರು ಕಾವು ಶಾಲೆಯಲ್ಲಿ ಇಂದು ನಡೆದ ಮಕ್ಕಳ ಬಣ್ಣದ ಹಬ್ಬ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಎಲ್ಲವೂ ಹಳದಿ ಬಣ್ಣದಿಂದ ಕಂಗೊಳಿಸುತ್ತಿದೆ. ಬಣ್ಣಕ್ಕೂ ಒಂದು ಶಕ್ತಿ ಇದೆ ಎಂಬುದನ್ನು ಇಲ್ಲಿ ವಿದ್ಯಾರ್ಥಿಗಳ ಮೂಲಕ ತಿಳಿಯಪಡಿಸಲಾಗಿದೆ ಇಂಥಹ ಕಾರ್ಯಕ್ರಮಗಳು ಎಲ್ಲಾ ಸರಕಾರಿ ಶಾಲೆಗಳಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.
ಬಣ್ಣದ ಹಬ್ಬ ಊರಿಗೇ ಹಬ್ಬದಂತಾಗಿದೆ: ಹೇಮನಾಥ ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯನ್ನು ದತ್ತುಪಡೆದಿರುವ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಕಾವು ಶಾಲೆ ಎಲ್ಲದರಲ್ಲೂ ಒಂದು ವಿಶೇಷತೆಯನ್ನು ಹೊಂದಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಯನ್ನು ಆರಂಭ ಮಾಡುವ ಮೂಲಕ ಬಡವರ ಮಕ್ಕಳಿಗೂ ಯಾವುದೇ ಡೊನೇಶನ್ ಇಲ್ಲದೆ ಕಲಿಕೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಆ ಬಳಿಕ ಸರಕಾರವೇ ಕೆಪಿಎಸ್ ಶಿಕ್ಷಣ ನೀತಿಯನ್ನು ಜಾರಿಗೆ ಮಾಡಿ ಕೆಲವೊಂದು ಶಾಲೆಗಳಲ್ಲಿ ಆಂಗ್ಲ ಮಾದ್ಯಮ ತರಗತಿಗಳನ್ನು ಪ್ರಾರಂಭ ಮಾಡಿದೆ. ಸರಕಾರಿ ಶಾಲೆಗಳು ಉಳಿಯಬೇಕು ಇದಕ್ಕಾಗಿ ಊರಿನ ಎಲ್ಲರೂ ಸಹಕಾರ ಮಾಡಬೇಕಿದೆ. ಕಾವು ಶಾಲೆಯಲ್ಲಿ ಇಂದು 400 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಈಗಿನಿಂದಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ. ಕಾವಿನಲ್ಲಿ ಪ್ರೌಢ ಶಾಲೆ ಆರಂಭ ಮಾಡುವಂತೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಇಂದು ನಡೆಯುವ ಬಣ್ಣದ ಕಲರವಕ್ಕೆ ಎಲ್ಲಾ ಮಕ್ಕಳೂ ಹಳದಿ ಬಣ್ಣದ ಬಟ್ಟೆಯನ್ನೇ ಧರಿಸಿದ್ದು ಮಾತ್ರವಲ್ಲದೆ ಪೋಷಕರೂ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದಾರೆ ಇದು ಉತ್ತಮ ವಿಚಾರವಾಗಿದೆ. ಮಕ್ಕಳ ಜೊತೆ ನಾವು ಸೇರಿಕೊಂಡಾಗ ಅದು ಅವರ ವಿದ್ಯೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ಕಾವು ಶಾಲೆಯಲ್ಲಿ ಕಲಿತ ಪ್ರತೀಯೊಂದು ಮಗು ಉನ್ನತ ಪ್ರಜೆಯಾಗಿ ರೂಪುಗೊಳ್ಳಬೇಕೆಂಬುದೇ ನನ್ನ ಕನಸಾಗಿದೆ ಎಂದು ಹೇಳಿದರು.
ಚಿಂತಕ ಇಕ್ಬಾಲ್ ಬಾಳಿಲರವರು ಶೈಕ್ಷಣಿಕ ಉಪನ್ಯಾಸ ನೀಡಿ ಮಾತನಾಡಿ ಆಧುನಿಕ ಮಕ್ಕಳು ಶಿಕ್ಷಕರಿಗಿಂತ ಕೆಲವೊಮ್ಮೆ ಬುದ್ದಿವಂತರಾಗುತ್ತಿದ್ದಾರೆ. ಮಕ್ಕಳಿಗೆ ಹೇಗೆ ಶಿಕ್ಷಣವನ್ನು ಕಲಿಸಬೇಕು ಎಂಬುದರ ಬಗ್ಗೆ ವಿವರಣೆ ನೀಡಿದರು. ಮಕ್ಕಳಲ್ಲಿ ಶೈಕ್ಷಣಿಕ ಪ್ರಬುದ್ದತೆಯ ಬಗ್ಗೆಯೂ ನೀತಿಪಾಠ ಹೇಳಿದರು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ ಮಾತನಾಡಿ ಸರಕಾರಿ ಶಾಲೆಯಲ್ಲಿ ಇಂಥಹದೊಂದು ಹಬ್ಬದ ವಾತಾವರಣ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ . ಪೋಷಕರು ಸದಾ ಶಾಲೆಯ ಜೊತೆ ಸಂಪರ್ಕ ಇರಿಸುವ ಮೂಲಕ ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು ಎಂದು ಹೇಳಿದರು.
ಅರಿಯಡ್ಕ ಗ್ರಾಪಂ ಸದಸ್ಯ ದಿವ್ಯನಾಥ ಶೆಟ್ಟಿ ಕಾವು ಮಾತನಾಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಇಬ್ರಾಹಿಂ ಮಂಜಕೊಟ್ಯ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಜಿಪಂ ನಿಕಟಪೂರ್ವ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಅರಿಯಡ್ಕ ಗ್ರಾಪಂ ಸದಸ್ಯ ಅಬ್ದುಲ್ ರಹಿಮಾನ್, ಕಾವು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯತೀಶ್‌ಪೂಜಾರಿ, ಶಿಕ್ಷಕ ಭಾಸ್ಕರ್ ಉಪಸ್ತಿತರಿದ್ದರು. ಮುಖ್ಯ ಶಿಕ್ಷಕಿ ಸವಿತಾಕುಮಾರಿ ಸ್ವಾಗತಿಸಿದರು.ಶಿಕ್ಷಕಿ ಶಮೀಮಾ ವಂದಿಸಿದರು. ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.
ಎಲ್ಲವೂ ಹಳದಿ ಬಣ್ಣ…!
ಶಾಲೆಯಲ್ಲಿ ಹಳದಿ ಹಬ್ಬಕ್ಕೆ ಭರ್ಜರಿ ಸಿದ್ದತೆಯನ್ನೇ ಮಾಡಿದ್ದರು. ಮಕ್ಕಳು, ಪೋಷಕರು ಧರಿಸಿರುವ ಬಟ್ಟೆ, ಬೆಳಗ್ಗಿನ ಉಪಹಾರದ ಬಣ್ಣವೂ ಹಳದಿ. ಜೊತೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲು ಬಂದಿರುವ ಶಾಸಕರೂ ಹಳದಿ ಬಣ್ಣದ ಶರ್ಟ್ ಧರಿಸಿದ್ದು ವಿಶೇಷವಾಗಿತ್ತು. ಉಳಿದಂತೆ ಕಾರ್ಯಕ್ರಮದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಅತಿಥಿಗಳೂ, ಶಿಕ್ಷಕರೂ ಎಲ್ಲರೂ ಹಳದಿ ಬಣ್ಣ ಬಟ್ಟೆಯನ್ನೇ ತೊಟ್ಟಿದ್ದರು. ಮಧ್ಯಾಹ್ನದ ಊಟಕ್ಕೂ ವಿವಿಧ ಖಾದ್ಯಗಳನ್ನು ತಯಾರಿಸಲಾಗಿದ್ದು ಅವ ಎಲ್ಲವೂ ಹಳದಿ ಬಣ್ಣದಿಂದಲೇ ಕೂಡಿದ್ದು ವಿಶೇಷವಾಗಿದ್ದು ಒಟ್ಟಿನಲ್ಲಿ ಕಾವು ಸರಕಾರಿ ಶಾಲೆಯ ಆವರಣ ಪೂರ್ತಿಯಾಗಿ ಹಳದಿಯೇ ಆಗಿತ್ತು.