ಪೆರುವಾಯಿ: ಸೇತುವೆ ಉದ್ಘಾಟನೆಗೆ ಬಂದಿದ್ದ ಶಾಸಕರ ಎದುರೇ ಕಾರ್ಯಕರ್ತರ ಹೊ ಕೈ ದೈವಸ್ಥಾನದವರೆಗೆ ರಸ್ತೆ ಕಾಮಗಾರಿ ನಡೆಯದ್ದಕ್ಕೆ ಆಕ್ಷೇಪ -ಸ್ವಪಕ್ಷೀಯರಿಂದಲೇ ಮಾತಿನ ಚಕಮಕಿ

0

ವಿಟ್ಲ: ರಸ್ತೆ ಕಾಮಗಾರಿ ನಡೆಯದಿರುವ ಬಗ್ಗೆ ಆಕ್ರೋಶಗೊಂಡ ಸ್ವಪಕ್ಷದ ಕಾರ್ಯಕರ್ತರು ಸೇತುವೆ ಉದ್ಘಾಟನೆಗೆ ಆಗಮಿಸಿದ ಶಾಸಕರ ಎದುರೇ ಆಕ್ರೋಶ ವ್ಯಕ್ತಪಡಿಸಿದ ಹಾಗೂ ಈ ಸಂದರ್ಭ ಕಾರ‍್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ, ಕೈ, ಮಿಲಾಯಿಸಿದ ಘಟನೆ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಮಜಲು ಸೇತುವೆ ಸಮೀಪ ಮಾ.೧ರಂದು ನಡೆದ ಬಗ್ಗೆ ವರದಿಯಾಗಿದೆ. ಶಾಸಕರ ಎದುರಲ್ಲೇ ಸ್ವ ಪಕ್ಷೀಯರ ಘರ್ಷಣೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮಾ.೧ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆ ಬಂದಿದ್ದರು. ಈ ವೇಳೆ ಎಡಮಜಲು ಎಂಬಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯ ಅದರ ಉದ್ಘಾಟನೆಯೂ ನಿಗದಿಯಾಗಿತ್ತು. ಸೇತುವೆಯ ಮುಂದುವರೆದ ಭಾಗದ ರಸ್ತೆ ಕಾಂಕ್ರಿಟೀಕರಣಗೊಳ್ಳಬೇಕಿದ್ದು, ಈಗಾಗಲೇ ೨೦ ಲಕ್ಷ ಅನುದಾನ ಮೀಸಲಾಗಿ, ಮಂಜೂರುಗೊಂಡಿತ್ತು. ಈ ನಡುವೆ ಈ ರಸ್ತೆ ಸಾಗುವ ಮಧ್ಯೆ ಖಾಸಗಿ ವ್ಯಕ್ತಿಯೋರ್ವರ ಜಮೀನು ಇದ್ದು, ತನ್ನ ಜಾಗದ ಮೂಲಕ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ಈ ಜಾಗದ ಮಾಲಕರಾಗಿದ್ದವರು ಸ್ಥಳ ಕೊಡುವುದಾಗಿ ಒಪ್ಪಿದ್ದರು. ಆದರೆ ಈಗ ಜಾಗ ಖರೀದಿಸಿದವರು ರಸ್ತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಹಿನೆಲೆಯಲ್ಲಿ ರಸ್ತೆ ಕಾಮಗರಿ ನಡೆದಿರಲಿಲ್ಲ ಎನ್ನಲಾಗಿದೆ. ಇದು ಬಣ ರಾಜಕೀಯಕ್ಕೆ ಕಾರಣವಾಗಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಪಂಗಡದ ಬಿಜೆಪಿ ಕಾರ್ಯಕರ್ತರು ಎಡಮಜಲು ಸೇತುವೆ ಉದ್ಘಾಟನೆಗೆ ಬಂದಿದ್ದ ಶಾಸಕರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವಸ್ಥಾನದವರೆಗೆ ರಸ್ತೆ ನಿರ್ಮಾಣ ಮಾಡಿದ ಬಳಿಕವೇ ಸೇತುವೆ ಉದ್ಘಾಟಿಸುವಂತೆ ಒತ್ತಾಯಸಿದರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಶಾಸಕರ ಎದುರೇ ಮಾತಿಗೆ ಮಾತು ಬೆಳೆದು ಹೊಕೈ ಹಂತ ತಲುಪಿತು. ಮಧ್ಯಪ್ರವೇಶಿಸಿದ ಶಾಸಕರು ಎರಡೂ ಕಡೆಯವರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದಲ್ಲದೆ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದರು. ಬಳಿಕ ಸೇತುವೆ ಉದ್ಘಾಟನೆಗೊಂಡಿತು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here