ಮಾಡನ್ನೂರು ನೂರುಲ್ ಹುದಾ ಸಾಹಿತ್ಯೋತ್ಸವ

0

ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಪ್ರಾತಿನಿಧ್ಯತೆ ಅವಶ್ಯಕ-ರಾ ಚಿಂತನ್

ಪುತ್ತೂರು: ಬಹುತೇಕ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು ಸಮಸ್ಯೆ, ಸಂಕಷ್ಟ, ತೊಂದರೆಗಳನ್ನು ಸವಾಲಾಗಿ ಸ್ವೀಕರಿಸಿ ನಿರ್ಧಿಷ್ಟ ಗುರಿಯೊಂದಿಗೆ ನಾವು ಸಾಗಬೇಕಾಗಿರುವುದು ಕಾಲದ ಅಗತ್ಯತೆ ಮತ್ತು ಅನಿವಾರ್ಯತೆಯಾಗಿದೆ ಎಂದು ಚಿಂತಕ, ಪತ್ರಕರ್ತ ರಾ ಚಿಂತನ್ ಹೇಳಿದರು.

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ ಅಕಾಡೆಮಿಯಲ್ಲಿ ಜರುಗಿದ ಮೂರು ದಿನಗಳ ಸಾಹಿತ್ಯೋತ್ಸವದ ಎರಡನೇ ದಿನವಾದ ಫೆ.2ರಂದು ‘ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಹಾಗೂ ನೈತಿಕ ಪತ್ರಿಕೋದ್ಯಮ’ ಎನ್ನುವ ವಿಷಯದಲ್ಲಿ ಅವರು ಮಾತನಾಡಿದರು.

ಜನಸಂಖ್ಯೆ ಆಧಾರದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾದ ಅವಶ್ಯಕತೆಯಿದ್ದು ದೇಶದಲ್ಲಿ ಮುಸ್ಲಿಂ ರಾಜಕೀಯ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ಮುಸ್ಲಿಂ ಜನಸಂಖ್ಯೆ ಆಧಾರದಲ್ಲಿ ದೇಶದಲ್ಲಿ 77 ಸಂಸದರು ಇರಬೇಕಿತ್ತು, ಆದರೆ ಕೇವಲ 27 ಸಂಸದರು ಮಾತ್ರ ಇದ್ದಾರೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಮುದಾಯದ ಮೇಲೆ ನಿರಂತರ ಅನ್ಯಾಯಗಳಾಗುತ್ತಿದ್ದು ಅವಕಾಶದಿಂದ ವಂಚಿತರನ್ನಾಗಿಸುವ ಷಡ್ಯಂತ್ರವೂ ನಡೆಯುತ್ತಿದೆ. ಈಗ ಇರುವ ಸಮಸ್ಯೆ ಮುಂದಕ್ಕೂ ಮುಂದುವರಿಯಬಾರದು. ಮುಂದಿನ ಕಾಲಕ್ಕೆ ಈಗಿರುವ ಸಮಸ್ಯೆ ಸತ್ತು ಹೋಗಬೇಕು, ಅದಕ್ಕೆ ಅಲ್ಪಸಂಖ್ಯಾತರು ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಸಣ್ಣ ಪುಟ್ಟ ವಿಚಾರಗಳಿಗೆ ದುಡುಕದೆ ನಾವು ಶಾಂತಿ ಕಾಪಾಡಬೇಕು. ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದು ಅದಕ್ಕೆ ಸಮುದಾಯ ಸಿಟ್ಟಾಗಬಾರದು, ಕೋಪಗೊಳ್ಳಬಾರದು ಬದಲಾಗಿ ಯುಕ್ತಿಯಿಂದ, ಪ್ರೌಢಿಮೆಯಿಂದ ಮುಂದಡಿಯಿಡಬೇಕು, ಆಗ ನಮ್ಮಿಂದ ಕೆಟ್ಟ ಪ್ರತಿಕ್ರಿಯೆ ಬಯಸುವವರೂ ಸೋತು ಹೋಗುತ್ತಾರೆ ಎಂದು ಅವರು ಹೇಳಿದರು.

ರಾಜಕೀಯವಾಗಿ ಮುಸ್ಲಿಮರು ಸಬಲೀಕರಣಗೊಳ್ಳಬೇಕಾದರೆ ತಮ್ಮ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಮೊದಲು ಚೆನ್ನಾಗಿ ಅರಿತುಕೊಂಡಿರಬೇಕು. ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ಹಕ್ಕುಗಳನ್ನು ಕೇಳಲು ಸಂಘಟಿತರಾಗಬೇಕು. ದೇಶದ ಸಂವಿಧಾನದಡಿಯಲ್ಲಿ ನಾವು ಹೇಗೆ ಬದುಕಬೇಕೋ ಹಾಗೆಯೇ ಬದುಕಬೇಕು ಎಂದು ಅವರು ಹೇಳಿದರು.

ಕೇವಲ 4% ಇರುವ ಸಮುದಾಯ ದೇಶದ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ತುಳುಕಿದ್ದು 20% ಮೇಲ್ಪಟ್ಟಿರುವ ಮುಸ್ಲಿಂ ಸಮುದಾಯ ತೀರಾ ಹಿಮದುಳಿದಿದೆ, ಇದು ಮುಂದಕ್ಕೂ ಹೀಗೆಯೇ ಮುಂದುವರಿಯಬಾರದು. ಇದನ್ನು ಬದಲಾಯಿಸಬೇಕು. ರಾಜಕೀಯ ಇತಿಹಾಸವನ್ನು ಮಕ್ಕಳು ಹೆಚ್ಚು ಓದಬೇಕು ಎಂದು ರಾ ಚಿಂತನ್ ಹೇಳಿದರು.

ಶಿಕ್ಷಣದ ಮೂಲಕ ಉತ್ತರ ಕೊಡಿ:

ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಮುಂದಕ್ಕೆ ಸಾಧನೆ ಮಾಡಬೇಕು. ಐಎಎಸ್, ಐಪಿಎಸ್ ಆಗಬೇಕು. ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆ ಕಾಲಕಾಲಕ್ಕೂ ಇರಬಾರದು ಎಂದು ಅವರು ಹೇಳಿದರು.

ನೈತಿಕ ಪತ್ರಿಕೋದ್ಯಮ ಹಾಳಾಗಿ ಹೋಗಿದೆ:

ಪತ್ರಿಕೆ, ಚಾನೆಲ್‌ಗಳು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವ ಒಂದು ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಜಾಹೀರಾತು, ಸರ್ಕ್ಯುಲೇಶನ್‌ನಿಂದ ನಡೆಯುತ್ತಿದ್ದ ಬಹುತೇಕ ಮಾಧ್ಯಮ ಈಗ ರಾಜಕೀಯದವರ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ. ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವೀಕರಿಸುವ ಮಾಧ್ಯಮ ಇಂದು ಅಧಿಕವಾಗಿದೆ ಎಂದು ಅವರು ಹೇಳಿದರು.

ಸತ್ಯ ಹೇಳುವವರನ್ನು, ಸತ್ಯ ಬರೆಯುವವರನ್ನು ಬಾಯಿ ಮುಚ್ಚಿಸುವ, ಜೈಲಿಗಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು ಮಾಧ್ಯಮಗಳು ಯಾರದೋ ಹಿತ ಕಾಯುತ್ತಾ ತಮ್ಮ ಕ್ಷೇತ್ರಕ್ಕೆ ದ್ರೋಹ ಬಗೆಯುತ್ತಿದೆ. ನ್ಯಾಯಯುತ ಮಾಧ್ಯಮಗಳು ಕೆಲವೊಂದು ಇದೆಯಾದರೂ ಅವುಗಳಿಗೂ ತೊಂದರೆ ಕೊಡುವ ಕೆಟ್ಟ ಕೆಲಸ ನಡೆಯುತ್ತಿದೆ. ಹಾಗಾಗಿ ನಾವೇ ಮಾಧ್ಯಮವಾಗಿ ಕೆಲಸ ಮಾಡಬೇಕು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಕಟಿಸಬೇಕು. ಸಾಮಾಜಿಕ ಜಾಲ ತಾಣಗಳಲ್ಲಾದರೂ ನಮ್ಮಲ್ಲಿರುವ ಸತ್ಯವನ್ನು ಸಂವಿಧಾನಾತ್ಮಕವಾಗಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ರಾ ಚಿಂತನ್ ಹೇಳಿದರು.

ಇದಕ್ಕೂ ಮೊದಲು ಚಿಂತಕ, ಉಪನ್ಯಾಸಕ ನರೇಂದ್ರ ರೈ ದೇರ್ಲ ಅವರು ಮಗು ಹುಟ್ಟುವಾಗ ಅದಕ್ಕೆ ಜಾತಿ, ಧರ್ಮ ಯಾವುದೂ ಇರುವುದಿಲ್ಲ. ಬೆಳೆಯುತ್ತಾ ಜಾತಿ, ಧರ್ಮ, ಪಂಗಡಗಳು ಹುಟ್ಟಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಇದ್ದ ಸೌಹಾರ್ದತೆ, ಅನ್ಯೋನ್ಯತೆ ಇಂದು ಇಲ್ಲದಾಗಿದೆ ಎಂದು ಅವರು ಹೇಳಿದರು. ಅನಕ್ಷರಸ್ಥರಿಗಿಂತ ಅಕ್ಷರಸ್ಥರಿಂದ ಸಮಾಜದ ನೆಮ್ಮದಿ ಕೆಡುತ್ತಿದ್ದು ಹೆಚ್ಚು ಮೋಸ ಮಾಡುವವರು ಓದಿದವರೇ ಹೊರತು ಅನಕ್ಷರಸ್ಥರಲ್ಲ ಎಂದು ಅವರು ಹೇಳಿದರು.

ನೂರುಲ್ ಹುದಾ ಪ್ರಾಂಶುಪಾಲರಾದ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ಮ್ಯಾನೇಜರ್ ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಉಪಸ್ಥಿತರಿದ್ದರು. ನೂರುಲ್ ಹುದಾದ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here