ಪುತ್ತೂರು: ನಿತಿನ್ ರೈ ಕುಕ್ಕುವಳ್ಳಿರವರು ಗಡಿನಾಡ ಧ್ವನಿ ಕಲಾಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪಾಣಾಜೆ ಆರ್ಲಪದವು ಗಡಿನಾಡ ಧ್ವನಿ, ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ವತಿಯಿಂದ ಫೆ.25ರಂದು ಗಡಿನಾಡು ಪ್ರದೇಶದ ಒಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಿರಿಯ ವಿದ್ವಾಂಸರು, ಸಾಹಿತಿ, ಕವಿಗಳೂ ಆಗಿರುವ ಮಲಾರು ಜಯರಾಮ ರೈಯವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಆರನೇ ಗಡಿನಾಡ ಸಮ್ಮೇಳನದಲ್ಲಿ ಯುವ ಚಿತ್ರನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿರವರಿಗೆ ಗಡಿನಾಡ ಧ್ವನಿ ಕಲಾಭೂಷಣ ರಾಜ್ಯಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ಗಡಿನಾಡ ಧ್ವನಿ, ಗಡಿನಾಡ ನಾಡ ಶ್ರೇಯೋಭಿವೃದ್ಧಿ ಆರ್ಲಪದವು ಪಾಣಾಜೆ ಇದರ ಅಧ್ಯಕ್ಷ, ಸಂಚಾಲಕ ಡಾ|ಹಾಜಿ ಯಸ್.ಅಬ್ಬೂಬಕರ್ ಆರ್ಲಪದವು ಮತ್ತು ಕಾರ್ಯದರ್ಶಿ, ಕಾರ್ಯಕ್ರಮ ಸಂಯೋಜಕ ಕೆ.ಈಶ್ವರ ಭಟ್ಟ್ ಕಡಂದೇಲು ತಿಳಿಸಿದ್ದಾರೆ.
ಗಡಿನಾಡು ಪ್ರದೇಶವಾಗಿರುವ ಮುಂಡೂರು-1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಮೂಲ ವಿದ್ಯಾಭ್ಯಾಸ ಮಾಡಿರುವ ಕುಕ್ಕುವಳ್ಳಿಯವರು ಬಾಲ್ಯದಲ್ಲೇ ಕ್ರೀಡೆ, ಬರವಣಿಗೆ, ಅಭಿನಯ, ನಾಟಕ, ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು. ಮುಂದೆ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲ ಅಭ್ಯಾಸ ಮಾಡುತ್ತಿರುವಾಗ ಎನ್.ಎಸ್.ಎಸ್, ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡ ಇವರು ಬೆಂಗಳೂರಿನ ಆದರ್ಶ ಫಿಲಂ ಇನ್ಸ್ಟಿಟ್ಯೂಷನ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು, ಖ್ಯಾತ ನಿರ್ದೇಶಕ, ನಿರ್ಮಾಪಕ, ಸಾಹಿತಿ, ನಟರಾಗಿರುವ ಟಿ.ಎನ್.ಸೀತಾರಾಮ್ ರವರ ನಿರ್ದೇಶನದಲ್ಲಿ 2009ರಲ್ಲಿ ETVಯಲ್ಲಿ ಪ್ರಸಾರವಾಗುತ್ತಿದ್ದ “ಮಿಂಚು” ಧಾರಾವಾಹಿಯಲ್ಲಿ ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಸುಮಾರು ಹನ್ನೊಂದು ವರ್ಷಗಳ ಕಾಲ ಸೌದಿಅರೇಬಿಯಾದಲ್ಲಿ ಬದುಕನ್ನು ಕಟ್ಟಿಕೊಂಡ ನಿತಿನ್ ಅಲ್ಲಿರುವಾಗಲೇ ಅನೇಕ ಕಥೆ, ಲೇಖನಗಳನ್ನು ಬರೆದು, ಕೆಲವು ಕಾರ್ಯಕ್ರಮಗಳ ನಿರ್ವಹಣೆ ಮಾಡಿ ಗುರುತಿಸಿಕೊಂಡವರು. ನಂತರ ಊರಿಗೆ ಬಂದ ಇವರು ತನ್ನ ಸ್ವಂತ ವ್ಯವಹಾರದ ಜೊತೆ ಕಲಾಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡರು. ತಾನೇ ಬರೆದ “ಧರ್ಮದೈವ” ಕಥೆಯನ್ನಾಧರಿಸಿ, ನಿರ್ಮಾಪಕ ಸುಧಾಕರ್ ಪಡೀಲ್ ಅವರ ಸೋನ್ ಕ್ರಿಯೇಷನ್ ಮತ್ತು ಹಮೀದ್ ಕೂರ್ನಡ್ಕ ಅವರ ಕಥಾ ಸಂಭಾಷಣೆಯೊಂದಿಗೆ, ಕಲಾವಿದರ, ತಂತ್ರಜ್ಞ ಮಿತ್ರರ ಸಹಕಾರದಲ್ಲಿ “ಧರ್ಮದೈವ ಭಾಗ:1, ಧರ್ಮದೈವ ಭಾಗ:2 “ಕಿರುಚಿತ್ರ ಮಾಡಿ ಅನೇಕ ಹಿರಿಯ ಕಲಾವಿದರ, ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಸಂತೋಷ ಶೆಟ್ಟಿ ಅಂಗಡಿಗುತ್ತು ಇವರ ನಿರ್ಮಾಣದ, ನಿತಿನ್ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶಿಸಿದ “ಆಕೆ ಮೋಹಿನಿ” ಕಿರುಚಿತ್ರವೂ ಬಿಡುಗಡೆಗೊಂಡು ಅಪಾರ ಜನಮೆಚ್ಚುಗೆ ಗಳಿಸಿತು. ಹೀಗೇ ಒಂದೇ ವರ್ಷ 2022ರಲ್ಲಿ ತ್ರಿವಳಿ ನಿರ್ದೇಶನ ಮಾಡಿದ ಕೀರ್ತಿಗೆ ಭಾಜನರಾದ ಕುಕ್ಕುವಳ್ಳಿಯವರ ಈ ಮೂರು ಕಿರುಚಿತ್ರಗಳು “ಅಂತಾರಾಷ್ಟ್ರೀಯ ಕರ್ನಾಟಕ ಚಲನಚಿತ್ರೋತ್ಸವ:2022″ರಲ್ಲಿ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ “ಧರ್ಮದೈವ ಭಾಗ:2″ಕಿರುಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹಾಗೂ ಇವರೇ ಕಥೆ ಬರೆದು ನಿರ್ದೇಶಿಸಿದ “ಆಕೆ ಮೋಹಿನಿ”ಕಿರುಚಿತ್ರಕ್ಕೆ “ಬೆಸ್ಟ್ ಹಾರರ್” ಚಿತ್ರಪ್ರಶಸ್ತಿ ಲಭಿಸಿರುವುದು ಒಂದು ಯುವ ಸಾಧನೆಯೇ ಸರಿ. ಡಾ.ಎಂ.ಎ ಮುಮ್ಮಿಗಟ್ಟಿ ಅಧ್ಯಕ್ಷತೆಯಲ್ಲಿ ನವಕರ್ನಾಟಕ ಫಿಲಂ ಅಕಾಡೆಮಿ ನಡೆಸಿದ ಎರಡನೇ ವರ್ಷದ ನವಕರ್ನಾಟಕ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ:22ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.10ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದು, ಬಸವರಾಜ ಹೊರಟ್ಟಿ, ಪ್ರಿಯಾಂಕ ಉಪೇಂದ್ರ, ಹಿರಿಯ ನಟಿ ಭವ್ಯ, ಸುನಿಲ್ ಪುರಾಣಿಕ್ ಮೊದಲಾದವರು ಪ್ರಶಸ್ತಿ ಪ್ರದಾನ ಮಾಡಿದರು.
ಇದೀಗ ದೊಡ್ಡ ಪರದೆಯಲ್ಲಿ “ಧರ್ಮದೈವ” ಪೂರ್ಣ ಚಿತ್ರವನ್ನು ತರುವ ಕನಸನ್ನು ಹೊಂದಿರುವ ಇವರ ತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಮಂಗಳೂರಿನ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ದೇರಳಕಟ್ಟೆ ಇಲ್ಲಿ ನಡೆದ ನಾಡು,ನುಡಿ ವೈಭವದ “ರತ್ನೋತ್ಸವ:22” ದಶಮ ಸಂಭ್ರಮದಲ್ಲಿ ರತ್ನ ಎಜ್ಯುಕೇಷನ್ ಟ್ರಸ್ಟ್(ರಿ) ದೇರಳಕಟ್ಟೆ ಇದರ ಅಧ್ಯಕ್ಷರಾಗಿರುವ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ನಿತಿನ್ ರೈ ಕುಕ್ಕುವಳ್ಳಿ ಅವರಿಗೆ ಶಾಲುಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸರ್ವ ಸಮ್ಮೇಳನಾಧ್ಯಕ್ಷತೆ ವಹಿಸಿರುವ ಖ್ಯಾತ ಯಕ್ಷಗಾನ ವಿದ್ವಾಂಸ, ವಾಗ್ಮಿ ಡಾ.ಪ್ರಭಾಕರ ಜೋಶಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ “ಭಾಷೆಯ ಮೂಲಕ ಮನಸ್ಸಿನ ವಿಕಾಸವನ್ನು ಸಾಧಿಸುವ ಸಾಂಸ್ಕೃತಿಕ ಸಿರಿವಂತಿಕೆ ಸ್ವಾಭಾವಿಕವಾಗಿಯೇ ನಮ್ಮ ಜಿಲ್ಲೆಗಿದೆ. ಆದ್ದರಿಂದಲೇ ಇಲ್ಲಿನ ಸಾಂಸ್ಕೃತಿಕವಾದ ಒಂದು ಅಂಶವನ್ನು ಹಿಡಿದು ಕೊಂಡು ನಿತಿನ್ ರೈ ಕುಕ್ಕುವಳ್ಳಿ, “ಧರ್ಮದೈವ”ಎಂಬ ಕಿರುಚಿತ್ರವನ್ನು ಮಾಡಿ ಇಷ್ಟು ಸಣ್ಣ ಪ್ರಾಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದಾರೆ..”ಎಂದು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದಾರೆ.
ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮತ್ತು ದಿ.ನಾಗರತ್ನ ಎನ್.ರೈ ನುಳಿಯಾಲು ಇವರ ಪುತ್ರ ನಿತಿನ್, ಪತ್ನಿ ಸಾತ್ವಿಕಾ ನಿತಿನ್ ರೈ ತೋಟ, ಬಾಳಿಲ ಮತ್ತು ಬೇಬಿ ಕೃಶಾನಿ ರೈರವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.