ಪೇರಲ್ತಡ್ಕ ಅಂಗನವಾಡಿಗೆ ಕೊಳೆತ ಮೊಟ್ಟೆಗಳ ಪೂರೈಕೆ

0

ಪುತ್ತೂರು:ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರ ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಸರಕಾರ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ ವಿತರಿಸುತ್ತಿದೆ.ಇರ್ದೆ ಗ್ರಾಮದ ಪೇರಲ್ತಡ್ಕ ಅಂಗನವಾಡಿಗೆ ಕೊಳೆತ ಮೊಟ್ಟೆ ಸರಬರಾಜಾಗಿದ್ದು ದುರ್ವಾಸನೆಯಿಂದಾಗಿ ಅಂಗನವಾಡಿ ಪುಟಾಣಿಗಳು ಮೂಗುಮುಚ್ಚಿ ಕುಳಿತುಕೊಳ್ಳಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ವ್ಯಕ್ತವಾಗಿದೆ.


ಗರ್ಭಿಣಿ, ಬಾಣಂತಿಯವರು ಹಾಗೂ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿಗಳ ಮೂಲಕ ಮೊಟ್ಟೆ ವಿತರಿಸುತ್ತಿದೆ.ಕಳೆದ ಕೆಲವು ವರ್ಷಗಳಿಂದ ಅಂಗನವಾಡಿ ಕೇಂದ್ರದವರೇ ಮೊಟ್ಟೆಗಳನ್ನು ಖರೀದಿ ಮಾಡಿ ವಿತರಿಸಲು ಅವಕಾಶವಿತ್ತು.ಫೆಬ್ರವರಿ ತಿಂಗಳಿಂದ ಇದನ್ನು ಗುತ್ತಿಗೆ ವಹಿಸಿಕೊಡಲಾಗಿದ್ದು ಗುತ್ತಿಗೆ ಪಡೆದುಕೊಂಡವರೇ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುತ್ತಿದ್ದಾರೆ.ಫೆ.೨೪ರಂದು ಇರ್ದೆಯ ಪೇರಲ್ತಡ್ಕ ಅಂಗನವಾಡಿಗೆ ಒಡೆದ, ಕೊಳೆತ ಮೊಟ್ಟೆಗಳನ್ನು ಸರಬರಾಜು ಮಾಡಲಾಗಿದೆ.ಕೊಳೆತ ಮೊಟ್ಟೆಗಳಲ್ಲಿ ಹುಳಗಳು ಸೃಷ್ಟಿಯಾಗಿದ್ದು ಅಂಗನವಾಡಿ ಕೇಂದ್ರದ ನೆಲದಲ್ಲಿ ಹುಳಗಳು ಹರಿದಾಡುತ್ತಿರುವುದು ಕಂಡು ಬಂದಿದೆ.ಕೊಳೆತ ಮೊಟ್ಟೆಗಳ ದುರ್ವಾಸನೆಯಿಂದ ಪುಟಾಣಿಗಳು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಮೂಗುಮುಚ್ಚಿಕೊಂಡೇ ಕೇಂದ್ರದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.


ಅಂಗನವಾಡಿಯಲ್ಲಿ ಒಟ್ಟು 45 ಪುಟಾಣಿಗಳಿದ್ದಾರೆ.ಫೆ.24ರಂದು ಒಟ್ಟು 1060 ಮೊಟ್ಟೆಗಳು ಗುತ್ತಿಗೆದಾರರ ಮೂಲಕ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಆಗಿದೆ.ಮೊಟ್ಟೆ ವಾಹನದಿಂದ ಇಳಿಸುವಾಗಲೇ ವಾಸನೆ ಬರುತ್ತಿದ್ದು ಕೊಳೆತಿರುವ ಬಗ್ಗೆ ಅವರಿಗೆ ತಿಳಿಸಲಾಗಿದೆ.ಆದರೆ ಅವರು ಅದರಲ್ಲಿ ಒಂದು ಮೊಟ್ಟೆ ಒಡೆದಿರಬಹುದು ಎಂದು ಹೇಳಿ ತೆರಳಿದ್ದಾರೆ.ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮೊಟ್ಟೆಯ ಟ್ರೇಯನ್ನು ಪ್ರತ್ಯೇಕಿಸಿ ನೋಡಿದಾಗ ಬಹುತೇಕ ಟ್ರೇಯಲ್ಲಿದ್ದ ಮೊಟ್ಟೆಗಳು ಒಡೆದು ಹೋಗಿದ್ದವು.ಮಾತ್ರವಲ್ಲದೆ ಕೊಳೆತ ಮೊಟ್ಟೆಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದು ಟ್ರೇಯನ್ನು ಬೇರ್ಪಡಿಸಿದ ಸಂದರ್ಭದಲ್ಲಿ ಹುಳಗಳು ನೆಲದಲ್ಲಿ ಹರಿದಾಡಲು ಪ್ರಾರಂಭಿಸಿದ್ದವು ಎಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಾಹಿತಿ ನೀಡಿದ್ದಾರೆ.


ಕೊಳೆತು ವಾಸನೆ ಬರುತ್ತಿರುವುದರಿಂದ ಒಂದು ವೇಳೆ ಮೊಟ್ಟೆಗಳನ್ನು ಕೇಂದ್ರದ ಹೊರಗಡೆಯಿಟ್ಟರೆ ಹಾವುಗಳ ಕಾಟ.ಪುಟಾಣಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೊರಗಡೆ ಇಡುವಂತಿಲ್ಲ.ಒಳಗಡೆಯಿಟ್ಟರೆ ದುರ್ವಾಸನೆಯಿಂದ ಮೂಗು ಮುಚ್ಚಬೇಕಾದ ಪರಿಸ್ಥಿತಿ.ಹೀಗಾಗಿ ಅಂಗನವಾಡಿ ಸಿಬಂದಿಗಳದ್ದು ಅತಂತ್ರ ಸ್ಥಿತಿ.
ಅಂಗನವಾಡಿಗೆ ಕೊಳೆತ ಮೊಟ್ಟೆ ಸರಬರಾಜಾಗಿರುವ ಬಗ್ಗೆ ಮಾಹಿತಿ ತಿಳಿದ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಇಲಾಖೆಯ ಮೇಲ್ವಿಚಾರಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ರಾಜೇಶ್ ರೈ ಪರ್ಪುಂಜ ಹಾಗೂ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಉಪಸ್ಥಿತರಿದ್ದರು.


ಗರ್ಭಿಣಿ,ಬಾಣಂತಿಯರ ಹಾಗೂ ಮಕ್ಕಳ ಪೌಷ್ಠಿಕತೆಗಾಗಿ ಮೊಟ್ಟೆ ವಿತರಿಸಲಾಗುತ್ತಿದ್ದರೂ ಗುತ್ತಿಗೆದಾರರು ಕೊಳೆತ ಮೊಟ್ಟೆಗಳನ್ನು ವಿತರಿಸಿದ್ದು, ಒಂದೊಮ್ಮೆ ಇದೇ ಮೊಟ್ಟೆಗಳನ್ನು ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ನೀಡಿದ್ದೆ ಆದಲ್ಲಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ.ಹೀಗಾಗಿ ಕೊಳೆತ ಮೊಟ್ಟೆ ಸರಬರಾಜು ಮಾಡಿರುವವರ ವಿರುದ್ಧ ಸಂಬಂಧಿಸಿದವರು ಸೂಕ್ತ ಕ್ರಮಕೈಗೊಂಡು ಈ ರೀತಿಯ ಘಟನೆ ಮರುಕಳಿಸದಂತೆ ಮಾಡಬೇಕು ಎಂದು ಮಕ್ಕಳ ಪೋಷಕರ ಸಹಿತ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು
ಅಂಗನವಾಡಿಗಳಿಗೆ ಮೊಟ್ಟೆ ವಿತರಣೆಯನ್ನು ಈ ಬಾರಿ ಟೆಂಡರ್ ಮೂಲಕ ಹೊಸ ರೀತಿಯಲ್ಲಿ ಸರಬರಾಜು ಮಾಡಲಾಗುತ್ತಿದೆ.ಸರಬರಾಜು ಆಗಿರುವ ಮೊಟ್ಟೆಗಳು ಕೊಳೆತುಹೋಗಿದೆ. ಇದು ಟೆಂಡರ್‌ದಾರರ ಬೇಜವಾಬ್ದಾರಿಯಿಂದ ಈ ರೀತಿಯಾಗಿದೆ.ಸಾಗಾಟದ ಸಂದರ್ಭದಲ್ಲಿ ಮೊಟ್ಟೆ ಒಡೆದರೂ ಅದಕ್ಕೆ ಬದಲಿ ಮೊಟ್ಟೆಗಳನ್ನು ನೀಡಬೇಕು.ಆದರೆ ಅವರು ಕೊಳೆತ ಮೊಟ್ಟೆಗಳನ್ನೇ ಡಂಪ್ ಮಾಡಿ ಹೋಗಿದ್ದಾರೆ.ಘಟನೆಯ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಲಾಗಿದೆ
-ಚಂದ್ರಶೇಖರ ರೈ, ಸದಸ್ಯರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್

ಎಲ್ಲಾ ಮೊಟ್ಟೆಗಳನ್ನು ರಿಪ್ಲೇಸ್ ಮಾಡಲಾಗುವುದು
ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜಿಗೆ ಸಿಇಓ ನೇತೃತ್ವದಲ್ಲಿ ಟೆಂಡರ್ ನೀಡಲಾಗಿದೆ.ದೊಡ್ಡ ಪ್ರಮಾಣದಲ್ಲಿ ಮೊಟ್ಟೆ ಸರಬರಾಜು ಮಾಡುವಾಗ ಕೆಲವೊಂದು ಮೊಟ್ಟೆಗಳು ಒಡೆದು ಹೋಗಿರಬಹುದು.ಪೇರಲ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಸರಬರಾಜಾದ ಮೊಟ್ಟೆಗಳು ಒಡೆದಿರುವ ಬಗ್ಗೆ ಸಿಇಓ ಅವರ ಗಮನಕ್ಕೆ ತರಲಾಗಿದೆ.ಅಲ್ಲಿಗೆ ಸರಬರಾಜು ಮಾಡಲಾದ ಎಲ್ಲಾ ಮೊಟ್ಟೆಗಳನ್ನು ಹಿಂಪಡೆದುಕೊಂಡು ಅಲ್ಲಿಗೆ ಬೇರೆ ಮೊಟ್ಟೆಗಳನ್ನು ಕಳುಹಿಸಿಕೊಡಲಾಗುವುದು
-ಶ್ರೀಲತಾ, ಸಿಡಿಪಿಒ ಪುತ್ತೂರು

LEAVE A REPLY

Please enter your comment!
Please enter your name here