ಎಸೆಸೆಲ್ಸಿ ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳಿಗೆ 15 ನಿಮಿಷ ಮುಂಚಿತ ಪ್ರವೇಶಕ್ಕೆ ಅವಕಾಶ

0

ಮಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷಾ ಕೇಂದ್ರದೊಳಗೆ 15 ನಿಮಿಷ ಮುಂಚಿತವಾಗಿ ಪ್ರವೇಶಾವಕಾಶ ಲಭಿಸಲಿದೆ. ಈ ಹಿಂದೆ ಪರೀಕ್ಷೆ ಆರಂಭವಾಗುವ ಕೇವಲ ಐದು ನಿಮಿಷಗಳ ಮೊದಲಷ್ಟೇ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶವಿತ್ತು. ಆದರೆ ಈ ಬಾರಿ 15 ನಿಮಿಷಗಳ ಮೊದಲೇ ಕೇಂದ್ರದೊಳಗೆ ಕೂರುವ ಅವಕಾಶ ಸಿಗಲಿದೆ.

ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಈ ಬಾರಿ ಕೆಲವು ವಿಶೇಷವಾದ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಶ್ನೆಪತ್ರಿಕೆಯ ಸುರಕ್ಷತೆ ಹಾಗೂ ಕೇಂದ್ರಗಳ ಕುರಿತು ನಿಗಾ ವಹಿಸುವ ಸಲುವಾಗಿ ಉನ್ನತ ಮಟ್ಟದ ಸಭೆಯಲ್ಲದೆ ಶಿಕ್ಷಣ ಸಚಿವರ ಜತೆಗೂ ಚರ್ಚೆಗಳನ್ನು ನಡೆಸಲಾಗಿದೆ. ಮುಖ್ಯವಾಗಿ ಪರೀಕ್ಷಾ ಕೇಂದ್ರದೊಳಗೆ ಈ ಮೊದಲು ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುವ ಐದು ನಿಮಿಷದ ಮೊದಲಷ್ಟೇ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡ ಸೇರಿದಂತೆ ಹೊಸ ಪರೀಕ್ಷಾ ಕೇಂದ್ರದಲ್ಲಿ ಕೂರುವಾಗ ಅವರನ್ನು ಕಾಡುವ ಭಯದ ಕುರಿತಾಗಿ ವಿಶೇಷವಾದ ಚರ್ಚೆಗಳು ನಡೆದಿತ್ತು. ಕೊನೆಯದಾಗಿ ಈ ಅವಧಿಯನ್ನು 15 ನಿಮಿಷಗಳಿಗೆ ಏರಿಸಲು ನಿರ್ಧಸಲಾಗಿದೆ ಎಂದು ತಿಳಿದು ಬಂದಿದೆ.

ದ.ಕ. ಜಿಲ್ಲೆಯ ಎಸೆಸೆಲ್ಸಿ ಪರೀಕ್ಷೆ: ಮಾ.31ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 29,572 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಬಂಟ್ವಾಳ-17, ಬೆಳ್ತಂಗಡಿ-14, ಮಂಗಳೂರು ಉತ್ತರ-19, ಮಂಗಳೂರು ದಕ್ಷಿಣ-22, ಮೂಡುಬಿದಿರೆ-5, ಪುತ್ತೂರು-15 ಹಾಗೂ ಸುಳ್ಯ-6 ಸಹಿತ 98 ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ.

LEAVE A REPLY

Please enter your comment!
Please enter your name here