ಪಾಣಾಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

0

ಗ್ರಾಮೋತ್ಥಾನದಿಂದ ರಾಷ್ಟ್ರೋತ್ಥಾನ ಮಾತು ಪಾಣಾಜೆಯಲ್ಲಿ ಅಕ್ಷರಶಃ ನಿಜವಾಗಿದೆ – ಮಠಂದೂರು

ಪಾಣಾಜೆ ಗ್ರಾಮಕ್ಕೆ 17.5 ಕೋಟಿ ರೂ. ಅನುದಾನ
ಶಾಸಕರ 5 ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಒಟ್ಟು 17.5 ಕೋಟಿ‌ ರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಶಾಸಕರು ನೆರವೇರಿಸಿದರು.

ಪಾಣಾಜೆ: ಗ್ರಾಮೋತ್ಹಾನದಿಂದ ರಾಷ್ಟ್ರೊತ್ಹಾನ ಎಂಬ ಮಾತು ಪಾಣಾಜೆ ಗ್ರಾಮದಲ್ಲಿ ಅಕ್ಷರಶಃ ನಿಜವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪಾಣಾಜೆ ಗ್ರಾಮದಲ್ಲಿ ಸುಮಾರು 17.5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮಾ. 22 ರಂದು ನೆರವೇರಿಸಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.

ಒಂದು ಕಾಲದಲ್ಲಿ ಊರಿನ ರಸ್ತೆ ಅಭಿವೃದ್ಧಿ ಮಾಡಿಕೊಡಿ ಎಂದು ಹೇಳುತ್ತಿದ್ದ ಜನ ಇಂದು ನಮ್ಮ ಮನೆಯ ರಸ್ತೆ ಕಾಂಕ್ರೀಟಿಕರಣ ಮಾಡಿಕೊಡಿ‌ ಎನ್ನುವಷ್ಟರ ಮಟ್ಟಿಗೆ ಹಳ್ಳಿಗಳು ಅಭಿವೃದ್ಧಿಯಾಗಿವೆ. ಪಾಣಾಜೆ ಸುಗ್ರಾಮವಾಗಿ ಮೂಡಿಬಂದಿದೆ. ಅದಕ್ಕೆ ಕಾರಣೀಭೂತರಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಶಾಸಕರು ಹೇಳಿದರು.
ಹಸಿದವನು, ದಲಿತ, ದುಃಖಿತ, ಪೀಡಿತ ಜನಾಂಗ, ಹಿಂದುಳಿದವರೂ ಸ್ವಾವಲಂಬಿಯಾಗಬೇಕೆಂಬ ಮೋದಿಯವರ ಪರಿಕಲ್ಪನೆ ಇವತ್ತು ಪಾಣಾಜೆ ಗ್ರಾಮದಲ್ಲಿಯೂ ಈ ಆಶಯ ಈಡೇರುತ್ತಿದೆ. ಸರಕಾರದ ಯೋಜನೆಗಳು ಡೆಲ್ಲಿಯಿಂದ ಹಳ್ಳಿಗೆ ನೂರಕ್ಕೆ ನೂರು ಫಲಾನುಭವಿಗಳಿಗೆ ತಲುಪುತ್ತಿದೆ. ಮಧ್ಯವರ್ತಿಗಳು, ಕಮಿಷನ್‌ದಾರರು ಇಲ್ಲದೇ ಡೈರೆಕ್ಟ್ ಭೆನಿಫಿಟ್ ಟ್ರಾನ್ಸ್‌ಫರ್’ ಸಿಸ್ಟಮ್ ಮೂಲಕ ಕೇಂದ್ರ ರಾಜ್ಯದ ಅನೇಕ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುತ್ತಿರುವುದರ ಹಿಂದೆ ನಮ್ಮ ಡಬಲ್‌ ಇಂಜಿನ್ ಸರಕಾರದ 25 ವರ್ಷಗಳ ದೂರಗಾಮಿ ಯೋಜನೆಯಿದೆ.‌ ಡಬಲ್ ಇಂಜಿನ್ ಸರ್ಕಾರ ಇದ್ದ ಪರಿಣಾಮ ಇಂದು ಹಳ್ಳಿಹಳ್ಳಿಗಳಲ್ಲಿ ನಾವು ಎಣಿಸಿದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಸರಕಾರ ಎಲ್ಲಾ ಪ್ರದೇಶ, ಎಲ್ಲಾ ವ್ಯಕ್ತಿ, ಎಲ್ಲರ ಮನಸ್ಸನ್ನು ತಲುಪುವಂತಹ ಕೆಲಸ ಮಾಡಿದೆ. ಸಂಜೀವ ಮಠಂದೂರು ರಾಜಕಾರಣ ಮಾಡಿಲ್ಲ‌. ಜನಸೇವಕನಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಸರಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಮಾಡಿದ್ದೇನೆ ಎಂದ ಅವರು ‘ಸ್ವಚ್ಛತೆಯಲ್ಲಿ ನಾನು ಶಾಸಕನಾಗುವ ವೇಳೆಗೆ 36 ನೇ ಸ್ಥಾನದಲ್ಲಿದ್ದ ಪುತ್ತೂರು ನಗರಸಭೆ ಇಂದು 3 ನೇ ಸ್ಥಾನಕ್ಕೆ ಬಂದಿದೆ. ಅಂತರ್ಜಲ‌ ಮರುಪೂರಣಕ್ಕಾಗಿ 75 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎಂದರು.

24*7 ಆರೋಗ್ಯ ಸೇವೆ
ಮಲ್ಟಿ ಸ್ಪೆಷಾಲಿಟಿ ಸಮುದಾಯ ಆರೋಗ್ಯ ಕೇಂದ್ರವಾಗಿ ಜನರಿಗೆ ದಿನದ 24 ಗಂಟೆ ಆರೋಗ್ಯ ಸೇವೆ ನೀಡುವ ಸಮುದಾಯ ಆರೋಗ್ಯ ಕೇಂದ್ರ ಪಾಣಾಜೆ ಮಾತ್ರವಲ್ಲದೇ ಇಡೀ ತಾಲೂಕಿನಲ್ಲಿ ಮಹತ್ವಕಾಂಕ್ಷಿ ಯೋಜನೆಯಾಗಿದೆ’ ಎಂದ ಮಠಂದೂರುರವರು ‘ನೀವೆಲ್ಲಾ ಮತ್ತೊಮ್ಮೆ ಆಶೀರ್ವಾದ ಮಾಡಿ. ಜನಸೇವಕನಾಗಿ ಕೆಲಸ ಮಾಡಲು ಬದ್ದನಾಗಿದ್ದೇನೆ ಎಂದರು.

ಶಾಸಕ ಸಂಜೀವ‌ ಮಠಂದೂರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರನ್ನು ಪಾಣಾಜೆ ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇಚ್ಛಾಶಕ್ತಿ ಇದ್ದಾಗ ಜನಪರ ಅಭಿವೃದ್ಧಿ ಕಾರ್ಯ – ಚನಿಲ‌ ತಿಮ್ಮಪ್ಪ‌ ಶೆಟ್ಟಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಚನಿಲ ತಿಮ್ಮಪ್ಪ ಶೆಟ್ಟಿಯವರು ‘ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಇದ್ದಾಗ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಸಂಜೀವ ಮಠಂದೂರು ನಿದರ್ಶನವಾಗಿದ್ದಾರೆ. ದೂರದೃಷ್ಟಿ ಯೋಜನೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರ ಗ್ರಾಮೀಣ ಭಾಗಗಳಿಗೆ, ಹಿಂದುಳಿದ ವರ್ಗಗಳ ಜನರಿಗೆ ನಸೌಕರ್ಯ, ಅನುದಾನಗಳನ್ನು ನೀಡಲಾಗುತ್ತಿದೆ. ಪ್ರಾಧಿಕಾರದ ಮೂಲಕ ಸರಕಾರದಿಂದ ಪುತ್ತೂರು ಕ್ಷೇತ್ರಕ್ಕೆ 4 ಕೋಟಿ ರೂ. ಅನುದಾನ ಬಂದಿದೆ. ಮುಂದೆಯೂ ಸುಮಾರು 4 ಕೋಟಿ ರೂ. ಅನುದಾನ ಬರುವ ನಿರೀಕ್ಷೆ ಇದೆ’ ಎಂದರು.

ಪಾಣಾಜೆ ಅಭಿವೃದ್ಧಿ ಕಂಡಿದೆ – ಭಾರತೀ ಭಟ್
ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್ ರವರು ಮಾತನಾಡಿ ‘ಅಭಿವೃದ್ದಿ ಕಾಣದೇ ಇದ್ದ ಹಲವು ರಸ್ತೆಗಳಿಗೆ ಹಂತ ಹಂತವಾಗಿ ಅನುದಾನವಿಟ್ಟು ಅಭಿವೃದ್ಧಿ ನಡೆದಿದೆ. ಮುಂದೆಯೂ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಪಾಣಾಜೆ ಅಭಿವೃದ್ಧಿಯ ಗ್ರಾಮವಾಗಿ ಬೆಳೆಯುವಲ್ಲಿ ಶಾಸಕರ ಮತುವರ್ಜಿಗೆ ಗ್ರಾಮದ ಪ್ರಥಮ ಪ್ರಜೆಯಾಗಿ ಅಭಿಂದನೆ ಸಲ್ಲಿಸುತ್ತೇನೆ’ ಎಂದರು.

ರಾಜ್ಯದಲ್ಲಿ ಮಾದರಿ ಶಾಸಕ ಸಂಜೀವಣ್ಣ – ಸಾಜ ರಾಧಾಕೃಷ್ಣ ಆಳ್ವ
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ‘5 ವರ್ಷಗಳ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಕ್ಷೇತ್ರದಲ್ಲಿ 1200 ಕೋಟಿ ಅನುದಾನ ನೀಡಿ ಅದರ ಉದ್ಘಾಟನೆ, ಶಂಕುಸ್ಥಾಪನೆ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಪುತ್ತೂರನ್ನು ಕೇಂದ್ರೀಕೃತವಾಗಿರಿಸಿ ಹಲವು ಯೋಜನೆ ಅನುದಾನಗಳನ್ನು ಸಂಯೋಜಿಸುವಲ್ಲಿ ಶಾಸಕರು ಸಫಲರಾಗಿ ಮಾದರಿ ಶಾಸಕರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿರುವ ಸಂಜೀವ ಮಠಂದೂರುರವರು ತಂದಿರುವ ಯೋಜನೆಗಳು ರಾಜ್ಯದಲ್ಲಿ ಮಾದರಿಯಾಗಿವೆ. ಈ ಗ್ರಾಮದಲ್ಲೂ ಶಾಸಕರ ಅಭಿವೃದ್ಧಿ ಕಾರ್ಯಗಳು ನಡೆದು ಪಾಣಾಜೆ ಮಾದರಿಯಾಗಿ ಬೆಳೆಯುತ್ತಿದೆ’ ಎಂದರು.

ಮುಂದಿನ ಬಾರಿಯೂ ಸಂಜೀವ ಮಠಂದೂರು ಶಾಸಕರಾಗಲಿ – ಪದ್ಮನಾಭ ಬೋರ್ಕರ್
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಮಾತನಾಡಿ ’50 ವರ್ಷಗಳ ಹಿಂದೆ ಮಣ್ಣಂಗಳ ಶ್ಯಾಮ್ ಭಟ್ ರವರಂತಹ ಅನೇಕರು ಪಾಣಾಜೆಯಲ್ಲಿ ಅನೇಕ ಮೂಲಭೂತ ಸೌಕರ್ಯ ತಂದು ಪಾಣಾಜೆಯ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದರು. ಆರೋಗ್ಯದ ಕಾಳಜಿಗಾಗಿ ನಾವು ಹೆಮ್ಮೆಪಡಬೇಕಾಗಿದೆ. ದೊಡ್ಡ ದೊಡ್ಡ ಕಾಯಿಲೆ ಬಂದಾಗ ಜನರು ಇವತ್ತು ಉಚಿತವಾಗಿ ಚಿಕಿತ್ಸೆ ಪಡೆಯುವ ಯೋಜನೆ ಇದೆ. ನಮ್ಮ ಶಾಸಕರ ಅವಿರತ ಜನಸೇವೆ ಇಂದು ಹಳ್ಳಿಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೂಲಕ ಕಾಣುತ್ತಿದೆ. ಸಂಜೀವ ಮಠಂದೂರುರವರು ಸಹಕಾರಿ ಕ್ಷೇತ್ರದಲ್ಲಿಯೂ ರಾಜ್ಯದಲ್ಲಿ ಗುರುತಿಸಲ್ಪಟ್ಟ ಓರ್ವ ಶಾಸಕರಾಗಿದ್ದಾರೆ. ಮುಂದಿನ ಬಾರಿಯೂ ಶಾಸಕರಾಗಿ ಸಂಜೀವ ಮಠಂದೂರುರವರು ಬರಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ’ ಎಂದರು.

ವೇದಿಕೆಯಲ್ಲಿ ‌ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌. ಸಿ. ನಾರಾಯಣ, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸದಾಶಿವ ರೈ ಸೂರಂಬೈಲು ಉಪಸ್ಥಿತರಿದ್ದರು.

ಪಾಣಾಜೆಯಲ್ಲಿ ಅಭಿವೃದ್ಧಿಯ ದಾಪುಗಾಲು – ರವೀಂದ್ರ ಭಂಡಾರಿ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ ಪ್ರಸ್ತಾಪಿಸಿ ‘ಕೋಟಿ ಎಣಿಸದ ಪಾಣಾಜೆ ಗ್ರಾಮಕ್ಕೆ ಕೋಟಿ ಕೋಟಿ ಅನುದಾನ ಬಂದಿದೆ. 5 ವರ್ಷ ಅವಧಿಯಲ್ಲಿ 17.5 ಕೋಟಿ ಅನುದಾನ ನಮ್ಮ ಶಾಸಕರು ನೀಡಿದ್ದಾರೆ. ಪಾಣಾಜೆ ಅಭಿವೃದ್ಧಿಯ ದಾಪುಗಾಲು ಇಡುತ್ತಿರಬೇಕಾದರೆ ಶಾಸಕರ ತಂಡದ ಶ್ರಮಕ್ಕೆ ನಾವು ಅಭಿಂದನೆ ಸಲ್ಲಿಸಬೇಕಾಗಿದೆ’ ಎಂದು ಹೇಳಿದರು

ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಆರ್ಲಪದವು ಪೇಟೆಯ ಕೇಂದ್ರ ಭಾಗ, ಸಿಎ ಬ್ಯಾಂಕ್ ಮುಂಭಾಗದಲ್ಲಿ ಬೃಹತ್ ಬ್ಯಾನರ್ ಅಡಿ ತೆಂಗಿನಕಾಯಿ ಒಡೆದು ಶಾಸಕರು ನೆರವೇರಿಸಿದರು. ಈ ವೇಳೆ ಶಾಸಕರನ್ನು ಹೂಮಳೆಗೆರೆದು, ಆರತಿ ಎತ್ತಿ, ಅರಶಿನ ಕುಂಕುಮವಿಟ್ಟು ಸ್ವಾಗತಿಸಲಾಯಿತು. ಗ್ರಾ.ಪಂ. ಸದಸ್ಯೆ ಸುಲೋಚನಾ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here