ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

0

ಪುತ್ತೂರು: ಪ್ರಜೆಗಳನ್ನು ಒಂದು ಗೂಡಿಸುವುದೇ ಧರ್ಮ. ದೇವಸ್ಥಾನಗಳಲ್ಲಿ ಎಲ್ಲಾ ಭಕ್ತಾದಿಗಳು, ಬಾಂಧವರು ಒಟ್ಟು ಸೇರಿಕೊಂಡು ಯಾವುದೇ ದ್ವೇಷ, ವೈರಾಗ್ಯವಿಲ್ಲದೆ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದಕ್ಕಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಉನ್ನತಿಯಾಗಬೇಕು. ಅಲ್ಲಿ ನಿತ್ಯ ನೈಮಿತ್ತಿಗಳು ನಡೆಯಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹೇಳಿದರು.

ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.30ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀವರ್ಚನ ನೀಡಿದರು. ನಮ್ಮ ಭಾವನೆಗಳಿಗೆ ತಕ್ಕಂತೆ ಪೂಜಿಸಲು ಪೂರ್ವಜರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳೆಲ್ಲವೂ ಭಕ್ತರ ಅನುಕೂಲತೆಗಾಗಿರುತ್ತದೆ. ದೇವಸ್ಥಾನಗಳ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು, ಧರ್ಮದ ಉತ್ಥಾನಕ್ಕಾಗಿ ಶ್ರದ್ಧಾ ಕೇಂದ್ರಗಳು ಸುಸ್ಥಿತಿಯಲ್ಲಿರಬೇಕು. ಅಲ್ಲಿ ದೇವರಿಗೆ ಸೇವೆಗಳು ಹಾಗೂ ಧರ್ಮದ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವ ನಂತರವೂ ನಿರಂತವಾಗಿ ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸನ್ಮಂಗಳ ಉಂಟಾಗಲು ಸಾಧ್ಯ ಎಂದ ಅವರು ಬಹಳಷ್ಟು ಸುಂದರವಾಗಿ ನಿರ್ಮಾಣಗೊಂಡಿರುವ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ಎಂ.ಆರ್.ಪಿ.ಎಲ್‌ನ ಸೀತಾರಾಮ ರೈ ಕೈಕಾರ ಮಾತನಾಡಿ, ಪ್ರತಿದಿನ ಮನದಲ್ಲಿ ದೇವರ ಆರಾಧನೆ ಮಾಡಿದರೆ ದೊಡ್ಡ ಬ್ರಹ್ಮಕಲಶ. ನಾವು ಗಳಿಸುವ ಸಂಪತ್ತು ಹರಿಯುವ ನೀರಿನಂತೆ ಪರಿಶುದ್ಧವಾಗಿರಬೇಕು. ಗಳಿಸಿದ ಸಂಪತ್ತಿನ ಒಂದಂಶವನ್ನು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ತೃಪ್ತಿ ದೊರೆಯುವುದಲ್ಲದೆ ಊರು ದೇಶ ಉದ್ಧಾರವಾಗಲು ಸಾಧ್ಯ. ಸಮಾಜದಲ್ಲಿರುವ ಅಶಕ್ತರಿಗೆ, ನೊಂದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವುದೇ ದೊಡ್ಡ ದೇವರ ಸೇವೆಯಾಗಿದೆ ಎಂದರು.

ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ ಮಾತನಾಡಿ, ಹಸಿರು ಇರುವಲ್ಲಿ ಭಕ್ತಿ ವೃದ್ಧಿಸುತ್ತಿದ್ದು ಮಜಲುಮಾರು ಉಮಾಮಹೇಶ್ವರ ಕ್ಷೇತ್ರವು ಅದಕ್ಕೆ ಪೂರಕವಾಗಿದೆ. ಉತ್ತಮ ಪರಿಸರದಲ್ಲಿ ಕ್ಷೇತ್ರವು ಕಂಗೊಳಿಸುವ ಮೂಲಕ ಭಕ್ತರನ್ನು ಆಕರ್ಷಿಸುತ್ತದೆ ಎಂದರು.

ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಆದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ನರಿಮೊಗರು ಗ್ರಾಮವೇ ಉದಾಹರಣೆಯಾಗಿದೆ. ನಗರ ಭಜನೆ ಮೂಲಕ ಮನೆ ಮನೆ ತೆರಳುವಾಗ ಹಿಂದಿಗಿಂತ ಅಭಿವೃದ್ಧಿಯಾಗಿರುವುದನ್ನು ಕಂಡಿದ್ದೇವೆ. ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಆಗಿದ್ದು ಫಲಾಪೇಕ್ಷೆಯಿಲ್ಲದ ಭಕ್ತಾದಿಗಳ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯು ಎಲ್ಲಾ ಕಾರ್ಯಗಳಲ್ಲಿಯು ಒಗ್ಗಟ್ಟಿನಿಂದ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಮಾತನಾಡಿ, ಕ್ಷೇತ್ರದಲ್ಲಿ ಎರಡನೇ ಬಾರಿಗೆ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆತಿದೆ. ಪದಾಧಿಕಾರಿಗಳು ಕಾರಣ ಮಾತ್ರ. ಭಕ್ತರು ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಇಲ್ಲಿ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನವೀನ್ ರೈ ಶಿಬರ ಪ್ರಾಸ್ತಾವಿಕವಾಗಿ ಮಾತನಾಡಿ, ಭಗವದ್ಭಕ್ತರ ಸಹಕಾರದಿಂದ ಅದ್ಬುತ ರೀರಿಯಲ್ಲಿ ನಡೆಯುತ್ತಿದೆ. 3 ತಿಂಗಳಿನಿಂದ ಸಿದ್ದತೆಗಳು ಕಾರ್ಯಕರ್ತರ ಸಹಯೋಗದಲ್ಲಿ ನಡೆದಿರುತ್ತದೆ. ಮೂರು ತಿಂಗಳಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ಪೂರ್ಣಗೊಂಡಿರುತ್ತದೆ. ಪುಷ್ಪರಥಕ್ಕೆ 16 ಮಂದಿ ದಾನಿಗಳು ಮರವನ್ನು ದಾನವಾಗಿ ನೀಡಿರುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ್ದಾರೆ. ಊರ, ಪರವೂರು ಭಕ್ತರ ಉದಾರ ದೇಣಿಗೆ, ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ ಎಂದರು.

ಮಜಲುಮಾರು ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಪುಷ್ಪರಥದ ಶಿಲ್ಪಿ ಹರೀಶ್ ಆಚಾರ್ಯ ಕಲ್ಲಮುಂಡ್ಕೂರು, ಮರದ ದೇಣಿಗೆ ನೀಡಿದ ಶ್ರೀವಲ್ಲಭ ಹೆಬ್ಬಾರ್ ಪುತ್ತಿಲ, ಮೋನಪ್ಪ ಕರ್ಕೇರ ಹಡೀಲು, ಕೋಟೆಕಲ್ ಆರ್ಯವೈದ್ಯ ಶಾಲಾ ಡಾ.ಪ್ರದೀಪ್ ಕುಮಾರ್, ಕೆ.ವೆಂಕಟರಮಣ ಭಟ್ ಮಾಡತ್ತಾರು, ಸರೋಜಿನಿ ನಾಯಕ್ ಇಂದಿರಾನಗರ, ಕಿಶೋರ್ ಎ. ಹಲಂಗ, ಗಂಗಾಧರ ಆಚಾರ್ಯ, ರಾಜೇಂದ್ರ ಭಟ್, ಪ್ರಶಾಂತ್ ನಾಯಕ್ ಚಂದ್ರಮ್‌ಸಾಗ್, ರುಕ್ಮಯ್ಯ ಗೌಡ ಮಜಲು ಆನಡ್ಕ, ಯತೀಶ್ ಆಚಾರ್ಯ ಪುರುಷರಕಟ್ಟೆ, ತಿಮ್ಮಪ್ಪ, ರಾಮಚಂದ್ರ ಭಟ್, ಉದಯ ತಂತ್ರಿ ಕೆಮ್ಮಿಂಜೆ, ಕೃಷ್ಣಪ್ಪ ಗೌಡ ದೋಳ್ತಟ್ಟ, ಹರೀಶ್ ಪೂಜಾರಿ ಮರಕ್ಕೂರು, ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ. ಹಾಗೂ ಉಮಾಮಹೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಶರಣ್ಯ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಕೋಶಾಧಿಕಾರಿ ನವೀನ್ ರೈ ಶಿಬರ ಸ್ವಾಗತಿಸಿದರು. ಸತೀಶ್ ಪ್ರಭು ಮಣಿಯ, ಕೃಷ್ಣಪ್ಪ ಪೂಜಾರಿ ಮುಕ್ವೆ, ಸುಧೀರ್ ಹೆಬ್ಬಾರ್, ಬೆಳಿಯಪ್ಪ ಗೌಡ, ನಿತ್ಯಾನಂದ ಆಚಾರ್ಯ, ಜಯರಾಮ ಪೂಜಾರಿ ಒತ್ತೆಮುಂಡೂರು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ, ಶಿಕ್ಷಕರಾದ ರಮೇಶ್ ಉಳಯ ಹಾಗೂ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿ, ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸದಸ್ಯ ಸುಜಯ್ ತಂತ್ರಿ ವಂದಿಸಿದರು.‌

ಸುದ್ದಿಯಲ್ಲಿ ನೇರಪ್ರಸಾರ
ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದರು.

LEAVE A REPLY

Please enter your comment!
Please enter your name here