ಶೋಭಾ ಕರಂದ್ಲಾಜೆ, ಅರುಣ್ ಸಿಂಗ್ ಅವರಿಂದಲೂ ಕರೆ
ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ-ಪುತ್ತಿಲ ಸ್ಪಷ್ಟನೆ

ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏ.23ರಂದು ಕರೆ ಮಾಡಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು.

ಆದರೆ ಪುತ್ತಿಲ ಅವರು, ಕಾರ್ಯಕರ್ತರ ಒಕ್ಕೊರಳ ತೀರ್ಮಾನದಂತೆ ನಾನು ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಇಲ್ಲಿ ನನ್ನ ತೀರ್ಮಾನವೇನೂ ಇಲ್ಲ ಎಂದು ಹೇಳಿ, ಯಡಿಯೂರಪ್ಪ ಅವರಿಗೆ ಹೇಳಿರುವುದಾಗಿ ವರದಿಯಾಗಿದೆ.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೂ ಪುತ್ತಿಲ ಅವರಿಗೆ ಕರೆ ಮಾಡಿರುವುದಾಗಿ ವರದಿಯಾಗಿದೆ.

ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪಽðಸಲು ಅವಕಾಶ ನೀಡಬೇಕು ಎಂದು ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಆಗ್ರಹಿಸಿದ್ದರು.ಮಾತ್ರವಲ್ಲದೆ ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಪುತ್ತೂರುಗೆ ಪುತ್ತಿಲ ಅಭಿಯಾನವನ್ನೂ ನಡೆಸಿದ್ದರು.

ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಅಭ್ಯರ್ಥಿತನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರ ಹೆಸರೂ ಕೇಳಿ ಬರುತ್ತಿತ್ತಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪುತ್ತಿಲ ಅವರ ಹೆಸರನ್ನು ಪಕ್ಷದ ನಾಯಕರ ಮುಂದೆ ಪ್ರಸ್ತಾಪಿಸಿದ್ದರು.ಎಲ್ಲ ರಾಜಕೀಯ ಬೆಳವಣಿಗೆಗಳ ಬಳಿಕ ಪಕ್ಷವು ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು.

ಈ ಬೆಳವಣಿಗೆ ಬಳಿಕ ಪುತ್ತಿಲ ಅವರ ಅಭಿಮಾನಿಗಳು ಆಕ್ರೋಶಿತರಾಗಿ ತುರ್ತು ಸಮಾವೇಶ ನಡೆಸಿ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲೆಬೇಕು ಎಂದು ಒಕ್ಕೊರಳಿನಿಂದ ಆಗ್ರಹಿಸಿದ್ದರು.ಅದರಂತೆ ಅರುಣ್ ಕುಮಾರ್ ಪುತ್ತಿಲ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದಾರೆ.ನಾಮಪತ್ರ ಹಿಂತೆಗೆಯುವ ಕಡೆ ದಿನದ ಒಂದು ದಿನದ ಹಿಂದೆ ಅಂದರೆ ಏ.23ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರುಣ್ ಕುಮಾರ್ ಪುತ್ತಿಲ ಅವರಿಗೆ ದೂರವಾಣಿ ಕರೆ ಮಾಡಿ,ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರಲ್ಲದೆ, ಪಕ್ಷದಲ್ಲಿ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಹೇಳಿ,ಭಿನ್ನಾಭಿಪ್ರಾಯಗಳೆಲ್ಲವನ್ನೂ ಬಿಟ್ಟು ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡೋಣ ಎಂದು ಹೇಳಿದ್ದರು.

ತಾನು ನನ್ನ ಅಭಿಮಾನಿ, ಬೆಂಬಲಿಗ ಕಾರ್ಯಕರ್ತರ ಒಕ್ಕೊರಳ ಅಪೇಕ್ಷೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಇಲ್ಲಿ ನನ್ನೊಬ್ಬನ ತೀರ್ಮಾನವೇನೂ ಇಲ್ಲ,ಕಾರ್ಯಕರ್ತರ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದ್ದ ಅರುಣ್ ಕುಮಾರ್ ಪುತ್ತಿಲ ಅವರು, ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದರು.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೂ ಪುತ್ತಿಲ ಅವರಿಗೆ ಕರೆ ಮಾಡಿದ್ದು ಅವರಿಗೂ ಪುತ್ತಿಲ ಇದೇ ಮಾತನ್ನು ಹೇಳಿದ್ದರು ಎಂದು ಹೇಳಲಾಗಿದೆ.

ಭಾಸ್ಕರ ಆಚಾರ್ ಅವರಿಗೂ ಕರೆ:

ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾತ್ರವಲ್ಲದೆ ಅವರೊಂದಿಗೆ ಸಕ್ರಿಯರಾಗಿ ಗುರುತಿಸಿಕೊಂಡಿರುವ ಭಾಸ್ಕರ ಆಚಾರ್ ಹಿಂದಾರು ಅವರಿಗೂ ಕೆಲವು ಪ್ರಮುಖರು ಕರೆ ಮಾಡಿ, ಹೇಗಾದರೂ ಮಾಡಿ ಪುತ್ತಿಲ ಅವರೊಂದಿಗೆ ಮಾತನಾಡಿ ಅವರು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿ ಎಂದು ಸಲಹೆ ನೀಡಿದ್ದರು. ಅರುಣ್ ಪುತ್ತಿಲ ಅವರಿಗೆ ಸಾವಿರ ಕಾರ್ಯಕರ್ತರು ಬಂದು ಹೇಳಿದರೆ ಕೇಳಬಹುದು ಹೊರತು ಬೇರೆಯವರು ಹೇಳಿದರೆ ಕೇಳುವುದು ಸಂಶಯ ಎಂದು ಭಾಸ್ಕರ ಆಚಾರ್ ಅವರು ಕರೆ ಮಾಡಿರುವ ಪ್ರಮುಖರಿಗೆ ತಿಳಿಸಿದ್ದರು ಎಂದೂ ಹೇಳಲಾಗುತ್ತಿದೆ. ಪುತ್ತಿಲರಿಗೆ ಯಡಿಯೂರಪ್ಪ ಸಹಿತ ಬಿಜೆಪಿ ನಾಯಕರು ಕರೆಮಾಡಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿಯಾಗಿದೆ.


ಏ.28ರಂದು ಮಹಿಳಾ ಸಮಾವೇಶ:

ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಅರುಣ್ ಕುಮಾರ್ ಅವರ ಪರವಾಗಿ ಬೆಂಬಲಿಗರು ಏ.28ರಂದು ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.ಆ ದಿನ ಸಂಜೆ 4 ಗಂಟೆಗೆ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here