ಉಪ್ಪಿನಂಗಡಿ: ಜೀವನದಿಯಾಗಿದ್ದ ನೇತ್ರಾವತಿ ನದಿಯು ಉಪ್ಪಿನಂಗಡಿಯಲ್ಲಿ ಬತ್ತಿ ಹೋಗಿ ಕರುಣಾಜನಕ ಸ್ಥಿತಿಗೆ ತಲುಪಿದ್ದು, ಜಿಲ್ಲೆಯ ಜೀವ ನದಿಗಳನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಭಾನುವಾರದಂದು ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಎನ್‌ಇಸಿಎಫ್ ಸಂಸ್ಥೆಯ ವತಿಯಿಂದ ಎತ್ತಿನಹೊಳೆ ಪ್ರೀಮಿಯರ್ ಲೀಗ್ ಎಂಬ ಅಣಕು ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಯಿತು.
ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರು ಅನಾವಶ್ಯಕ ಕಡಲು ಸೇರುತ್ತಿದೆ ಎಂದು ಪ್ರತಿಪಾದಿಸಿ ವೀರಪ್ಪ ಮೊಯ್ಲಿ ಹಾಗೂ ಡಿ.ವಿ. ಸದಾನಂದ ಗೌಡರ ಮುಖ್ಯಮಂತ್ರಿ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಮಂಜೂರುಗೊಳಿಸಿದ್ದರು. ಪ್ರಸಕ್ತ ೩೫ ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಿ ವಿಫಲ ಯೋಜನೆಯನ್ನು ನಾಡಿಗೆ ನೀಡುವ ಮೂಲಕ ಸರಕಾರಿ ಬೊಕ್ಕಸವನ್ನು ಕಬಳಿಸಿ, ಪ್ರಕೃತಿಯ ಮೇಲೂ ಸವಾರಿ ನಡೆಸಿದ ಅನ್ಯಾಯದ ಕಾರ್ಯ ಮಾಡಲಾಗಿದೆ. ಬುದ್ದಿವಂತ ಜನರೆಂಬ ಹೆಗ್ಗಳಿಕೆ ಪಡೆದ ದ.ಕ ಜಿಲ್ಲೆಯ ಜನತೆ ಇದನ್ನು ಮೌನವಾಗಿ ಸಹಿಸಿಕೊಂಡಿರುವುದು ಆಶ್ಚರ್ಯಕಾರಿ ವಿದ್ಯಾಮಾನವಾಗಿದೆ . ನಮ್ಮ ಮುಂದಿನ ಸಂತತಿಗಾದರೂ ಪ್ರಕೃತಿಯನ್ನು ಉಳಿಸುವ ಕಾರ್ಯದತ್ತ ನಮ್ಮ ಚಿಂತನೆ ಹರಿಯದಿದ್ದರೆ, ಭವಿಷ್ಯ ಕರಾಳವಾದೀತೆಂದು ನ್ಯಾಷನಲ್ ಎನ್ವ್ಯಾರ್ಮೆಂಟ್ ಕೇರ್ ಫೆಡರೇಷನ್ ಸಂಸ್ಥೆಯ ಮುಖ್ಯಸ್ಥ ದಿನೇಶ್ ಹೊಳ್ಳ ಎಚ್ಚರಿಸಿದರು.
ಸಂಸ್ಥೆಯ ಶಶಿಧರ್ ಶೆಟ್ಟಿ ಮಾತನಾಡಿ, ಪ್ರಾಕೃತಿಕವಾಗಿ ದೊರೆಯುವ ಶುದ್ದ ಕುಡಿಯುವ ನೀರಿನ ನೆಲೆಗಳನ್ನು ಕೊಳಚೆಗ್ರಸ್ತಗೊಳಿಸಿ , ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸಿ ಕುಡಿಯುವ ದುಬಾರಿ ಯೋಜನೆಯ ಬಗ್ಗೆ ಸರಕಾರಕ್ಕೆ ಆಸಕ್ತಿ ಮೂಡಿರುವುದು ವಿಪರ್ಯಾಸವಾಗಿದೆ. ಜೀವ ನದಿಯಾಗಿರುವ ನೇತ್ರಾವತಿ ಈ ಪರಿಯಲ್ಲಿ ಬರಡಾಗಲು ಕಾರಣವಾದ ಆಡಳಿತದ ತಪ್ಪುಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಈ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದರು.
ಮುಖ್ಯವಾಗಿ ಎತ್ತಿನಹೊಳೆ ಯೋಜನೆಯನ್ನು ನಾಡಿಗೆ ಪರಿಚಯಿಸಿದ ವೀರಪ್ಪ ಮೊಯ್ಲಿ ಹಾಗೂ ಡಿ ವಿ ಸದಾನಂದ ಗೌಡ ರವರನ್ನು ಅಣಕಿಸುವಂತೆ ವೀರಪ್ಪ ಸದಾನಂದ ಕ್ರೀಡಾಂಗಣವೆಂದು ಬರಡಾದ ನದಿಯ ಒಡಲಿಗೆ ನಾಮಕರಣ ಮಾಡಿ, ಎಲ್ಲಾ ಪಕ್ಷಗಳ ವಿವಿಧ ರಾಜಕಾರಣಿಗಳ ಮುಖವಾಡವನ್ನು ಧರಿಸಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಸಂಸ್ಥೆಯ ಕಾರ್ಯಕರ್ತರು ಬಹುಮಾನವಾಗಿ ಬಕೆಟ್ ನೀರನ್ನು ವಿತರಿಸಿದರು.
ಸರಕಾರದ ತಪ್ಪು ಯೋಜನೆಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಭುವನ್, ಬೆನೆಡಿಕ್ಟ್ ಫೆರ್ನಾಂಡೀಸ್ , ಜೀತ್ ಮಿಲನ್ ರೋಚ್, ನಾಗರಾಜ್, ಸೆಲ್ಮಾ, ಜಯಪ್ರಕಾಶ್, ಮಧುಸೂಧನ್, ಹರೀಶ್ ರಾಜ್ ಕುಮಾರ್, ಅವಿನಾಶ್ ಬಿಡೆ, ಇರ್ಷಾದ್ ಯು.ಟಿ. ಮತ್ತಿತರರು ಭಾಗವಹಿಸಿದ್ದರು.