ಸ್ವಂತ ದುಡ್ಡಿನಿಂದ ಜಾಗ ಖರೀದಿಸಿ ಬಡವರಿಗೆ ಹಂಚುತ್ತೇನೆ: ಅಶೋಕ್ ರೈ

0

ಪುತ್ತೂರು: ತಾನು ಗೆದ್ದು ಶಾಸಕನಾದಲ್ಲಿ ಸ್ವಂತ ದುಡ್ಡಿನಿಂದ ಜಾಗ ಖರೀದಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಕಟ್ಟಲು ಸ್ವಂತ ಜಾಗವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.


ವಿಟ್ಲ ಬೊಳಂತಿಮೊಗರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರ ಕಳೆದ ಐದು ವರ್ಷದಿಂದ ಯಾವುದೇ ಮನೆಗಳನ್ನು ಬಡವರಿಗೆ ವಿತರಣೆ ಮಾಡಿಲ್ಲ. ಮನೆ ಸಿಗ್ತದೆ ಎಂದು ಇದ್ದ ಮನೆಯನ್ನು ಕೆಡವಿದವರು ಪ್ಲಾಸ್ಟಿಕ್ ಚೋಪಡಿಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಿಮಗೆ ಜಾಗ ಕೊಡಲು ಕಂದಾಯ ನಿಮಯಗಳು ಅಡ್ಡಿಯಾದರೆ ನಾನೇ 10 ಎಕ್ರೆ ಜಾಗ ಖರೀದಿಸಿ ಮನೆಯಿಲ್ಲದ ಪ್ರತೀ ಕುಟುಂಬಗಳಿಗೆ 3 ರಿಂದ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡುತ್ತೇನೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ನಾನು 22 ಸಾವಿರ ಕುಟುಂಬಗಳಿಗೆ ಸಹಾಯ ಮಾಡಿದ್ದೇನೆ ಇದರಲ್ಲಿ ಬಹುತೇಕ ಮಂದಿ ಮನೆ ಇಲ್ಲದವರು, ಮನೆ ನಾದುರಸ್ಥಿಯಲ್ಲಿದ್ದವರೇ ಹೆಚ್ಚು. ಎಲ್ಲೆಲ್ಲಿ ಬಡವರು ಮನೆ ಕಟ್ಟಲು ಸ್ವಂತ ಜಾಗವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಮಾಹಿತಿ ನನ್ನಲ್ಲಿದೆ ಅವರೆಲ್ಲರನ್ನೂ ಹುಡುಕಿ ಜಾಗ ಕೊಡಲಿದ್ದೇನೆ ಎಂದು ಹೇಳಿದರು.

ನಾನು ಸುಳ್ಳು ಭರವಸೆಯನ್ನು ಎಂದಿಗೂ ಕೊಡುವುದಿಲ್ಲ ನಾನು ಕೊಟ್ಟ ಮಾತು ಮಾತೇ ಅದರಲ್ಲಿ ಬದಲಾವಣೆಯಿಲ್ಲ ಎಂದು ಹೇಳಿದ ಅಶೋಕ್ ರೈ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಪುತ್ತೂರಿನಲ್ಲಿಯೂ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here