ಉಪ್ಪಿನಂಗಡಿಯಲ್ಲಿ ಅರುಣ್‌ ಪುತ್ತಿಲರಿಂದ ರೋಡ್‌ ಶೋ, ಮತಯಾಚನೆ

0

ಕಾರ್ಯಕರ್ತರು ಜಯಗಳಿಸಿಯಾಗಿದೆ: ಪುತ್ತಿಲ

ಉಪ್ಪಿನಂಗಡಿ: ಅಧಿಕಾರದ ಆಸೆಯಿಂದ ನಾನು ರಾಜಕಾರಣ ಮಾಡಲು ಬಂದಿಲ್ಲ. ಬದಲಾಗಿ ಹಿಂದುತ್ವದ ರಕ್ಷಣೆಗಾಗಿ, ಕಾರ್ಯಕರ್ತರಿಗೆ ನ್ಯಾಯ ಒದಗಿಸಿಕೊಡುವುದಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಚುನಾವಣೆಗೆ ಮೊದಲೇ ಈ ಕ್ಷೇತ್ರದಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿ ಕಾರ್ಯಕರ್ತರು ಜಯಗಳಿಸಿಯಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.


ಉಪ್ಪಿನಂಗಡಿಯ ಗಾಂಧಿಪಾರ್ಕ್‌ನಿಂದ ಆರಂಭಗೊಂಡು ಪೇಟೆಯಿಡೀ ನಡೆದ ಬೃಹತ್ ಸಂಖ್ಯೆಯ ಕಾರ್ಯಕರ್ತರನ್ನೊಳಗೊಂಡ ರೋಡ್ ಷೋ ನಡೆಸಿದ ಅವರು ಬಳಿಕ ಹಳೆ ಬಸ್ ನಿಲ್ದಾಣದಲ್ಲಿ ನಡೆದ ಅಖಂಡ ಭಾರತ ಸಮಾವೇಶದಲ್ಲಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.


ಅಧಿಕಾರ ಶಾಶ್ವತವಾಗಬೇಕೆಂದು ತತ್ವ ಸಿದ್ಧಾಂತವನ್ನು ಬಿಟ್ಟು ಕಾರ್ಯಕರ್ತರಿಗೆ ಬೆಲೆ ನೀಡದೇ, ಅವರನ್ನು ಮೆಟ್ಟಿ ನಿಂತವರನ್ನು ಇಂದು ಕಾರ್ಯಕರ್ತರೇ ಮೆಟ್ಟಿ ನಿಲ್ಲುವ ಕಾರ್ಯ ಮಾಡಿದ್ದಾರೆ. ಕಾರ್ಯಕರ್ತನ ಭಾವನೆಗಳಿಗೆ ಯಾವತ್ತು ಬೆಲೆ ನೀಡುವುದಿಲ್ಲವೋ ಆಗ ಕಾರ್ಯಕರ್ತನೇ ಇಲ್ಲಿ ಆಡಳಿತ ನಡೆಸುತ್ತಾನೆ ಎಂಬುದ್ದಕ್ಕೆ ಪುತ್ತೂರೇ ಸಾಕ್ಷಿ. ಮುಂದಿನ ಐದು ವರ್ಷ ಧರ್ಮದ ರಕ್ಷಣೆಗಾಗಿ ಹೋರಾಟ ಮಾಡುವ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವ ಕೆಲಸಗಳಾದರೆ, ಮಾತೆಯರಿಗೆ ಅನ್ಯಾಯಮಾಡುವ ಕಾರ್ಯ ಮಾಡಿದರೆ ಅವರನ್ನು ನಾನು ಈ ಕ್ಷೇತ್ರದಲ್ಲಿಯೇ ಇರದಂತೆ ಮಾಡುತ್ತೇನೆ. ನಾನು ಪ್ರಣಾಳಿಕೆಯಲ್ಲಿ ಏನು ಹೇಳಿದ್ದೇನೋ ಅದನ್ನು ಮುಂದಿನ ಐದು ವರ್ಷದಲ್ಲಿ ಅನುಷ್ಠಾನ ಮಾಡುತ್ತೇನೆ. ಭ್ರಷ್ಟಾಚಾರ ರಹಿತ ಧರ್ಮಾಧಾರಿತವಾದ ರಾಜಕಾರಣ ನಾನು ಮಾಡುತ್ತೇನೆ ಎಂದು ತಿಳಿಸಿದ ಅವರು, ಚುನಾವಣೆಗೆ ನಿಂತು ಗೆಲ್ಲಬೇಕೆಂದರೆ ಕೋಟಿ ಕೋಟಿ ಹಣ ಬೇಕು. ಆದರೆ ನನಗಿರುವುದು ಕಾರ್ಯಕರ್ತರ ಬಲ ಮಾತ್ರ. ಎರಡು ರಾಷ್ಟ್ರೀಯ ಪಕ್ಷದ ನಡುವೆ ಯಾವುದೇ ಹಣ ಖರ್ಚು ಮಾಡದೇ ಕಾರ್ಯಕರ್ತರ ಬಲದಿಂದಲೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಇಲ್ಲೊಂದು ಹೊಸ ಇತಿಹಾಸ ನಿರ್ಮಾಣವಾಗಲಿದೆ. ನನ್ನ ಬಗ್ಗೆ ಬಹಳಷ್ಟ ಅಪಪ್ರಚಾರಗಳು ನಡೆಯುತ್ತಿವೆ. ಆದರೆ ಅವೆಲ್ಲವನ್ನು ನಾನು ಅವರ ಆಶೀರ್ವಾದವೆಂದು ತಿಳಿದು ಮುಂದೆ ಸಾಗುತ್ತಿದ್ದೇನೆ. ಚುನಾವಣೆಗೆ ಎರಡು ದಿನ ಇರುವ ಈ ಸಂದರ್ಭದಲ್ಲಿ ಅಕ್ರಮವಾಗಿ ಮತದಾರರಿಗೆ ಆಸೆ- ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯುವ ಕೆಲಸಗಳು ನಡೆಯಬಹುದು. ಆದ್ದರಿಂದ ನಮ್ಮ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿಯೂ ದಿನದ 24 ಗಂಟೆಯೂ ಹದ್ದಿನ ಕಣ್ಣಿಡಬೇಕು. ನಾನು ಗೆದ್ದರೆ ಅದು ಕಾರ್ಯಕರ್ತರು ಗೆದ್ದಂತೆ. ಪ್ರೀತಿ ವಿಶ್ವಾಸದ ರಾಜಕಾರಣ ನಡೆಸುತ್ತೇನೆ ಹಾಗೂ ದಿನದ 24 ಗಂಟೆಯೂ ನಿಮ್ಮ ಕಷ್ಟ – ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಮಾತುಕೊಡುತ್ತಿದ್ದೇನೆ. ಆದ್ದರಿಂದ ಎಲ್ಲರೂ ನನಗೆ ಮತ ಚಲಾಯಿಸುವ ಮೂಲಕ ಹಿಂದುತ್ವವನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಎರಡು ರಾಷ್ಟ್ರೀಯ ಪಕ್ಷಗಳ ಎದುರು ಇಂದು ನಮ್ಮದು ವಿಜಯೋತ್ಸವದ ಮೆರವಣಿಗೆಯಂತಾಗಿದೆ. ಇದಕ್ಕೆ ದೇವ ದುರ್ಲಭ ಕಾರ್ಯಕರ್ತರೇ ಕಾರಣ. ನಿಮ್ಮೆಲ್ಲರ ಶಕ್ತಿಗೆ ಈ ಸಮಾವೇಶ ಹೊಸ ಚೈತನ್ಯದ ಟಾನಿಕ್ ನೀಡಿದಂತಾಗಿದೆ. ಅರುಣ್ ಕುಮಾರ್ ಪುತ್ತಿಲರವರಿಗೆ ಈ ರೀತಿಯ ಅಭೂತಪೂರ್ವ ಜನಬೆಂಬಲವನ್ನು ನೋಡಿಯೇ ಅವರ ವಿರುದ್ಧ ಕೆಲವರು ಪ್ರಾಜ್ಞರು, ಹಿರಿಯರು ಅಂತ ಎನಿಸಿಕೊಂಡವರು ಕೂಡಾ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸುಳ್ಳಿನ ಮೂಲಕ ಒಬ್ಬನನ್ನು ಒಂದೆರಡು ಬಾರಿ ಮೋಸ ಮಾಡಬಹುದು. ಆದರೆ ಪದೇ ಪದೇ ಅದೇ ರೀತಿ ಮಾಡಿದರೆ ಏನಾಗಬಹುದಂತ ಅರುಣಣ್ಣನ ಜೊತೆ ಇರುವ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಪಕ್ಷವೊಂದು ಬೆಳೆಯಬೇಕಾದರೆ ಅಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಇರಬೇಕು. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಸಿಗದಿದ್ದಾಗ ಏನಾಗಬಹುದೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಹೋರಾಟ ಏನಿದ್ದರೂ ಅದು ಹಿಂದುತ್ವದ ಪ್ರತಿಪಾದನೆಗೆ. ಹಿಂದೂತ್ವವನ್ನು ವಿರೋಧಿಸುವ ಕಾಂಗ್ರೆಸ್‌ನ ವಿರುದ್ಧ. ಆದ್ದರಿಂದ ಇಲ್ಲಿ ಕಾರ್ಯಕರ್ತರ ಧ್ವನಿಯಾಗಿ ಅರುಣಣ್ಣ ಇದ್ದಾರೆ. ಆದ್ದರಿಂದ ಹಿಂದುತ್ವವಾದಕ್ಕೆ ಮತ ನೀಡಿ ಅರುಣಣ್ಣನನ್ನು ಗೆಲ್ಲಿಸುವ ಮೂಲಕ ಈ ಚುನಾವಣೆಯಲ್ಲಿ ನಮ್ಮನ್ನು ನಾವು ಗೆಲ್ಲಿಸಬೇಕು ಎಂದರು.


ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲರ ಬೆಂಬಲಿಗರಾದ ಡಾ. ಚೇತನಾ ಭಟ್, ಡಾ. ಲಲಿತಾ ಭಟ್, ಚಂದಪ್ಪ ಮೂಲ್ಯ, ಪ್ರಶಾಂತ್ ನೆಕ್ಕಿಲಾಡಿ, ರಾಜಶೇಖರ್ ಬನ್ನೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿದಾನಂದ ಪಂಚೇರು, ಜಗದೀಶ್ ನಾಯಕ್, ಮಹೇಂದ್ರ ವರ್ಮ ಪಡ್ಪು, ಸಂದೀಪ್ ಕುಪ್ಪೆಟ್ಟಿ, ನವೀನ್ ಬಂಡಾಡಿ, ಸುಜೀತ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲಕ್ಷ್ಮಣ ಗೌಡ ನೆಡ್ಚಿಲ್, ರಾಮಚಂದ್ರ ಗೌಡ ನೆಡ್ಚಿಲ್, ಹರಿಣಿ ಪುತ್ತೂರಾಯ, ಹರೀಶ್ ನಾಯಕ್ ನಟ್ಟಿಬೈಲ್, ಸ್ವಪ್ನಾ ಜೀವನ್, ಹೇಮಲತಾ ಶೆಟ್ಟಿ ಕಜೆಕ್ಕಾರು, ಕವಿತಾ ಹರಿನಗರ, ರಾಜೇಶ್ ಕೊಡಂಗೆ, ವಿಶ್ವನಾಥ ಪೂಜಾರಿ ನಲಿಕೆಮಜಲು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸುರೇಶ್ ನಲಿಕೆಮಜಲು, ಆನಂದ ನೆಡ್ಚಿಲ್, ರಂಜಿತ್ ಅಡೆಕ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ಕಿರಣ್‌ಚಂದ್ರ ಪುಷ್ಪಗಿರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here