ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ; ಪುತ್ತೂರು ತಾಲೂಕಿಗೆ ಶೇ.91.96 ಫಲಿತಾಂಶ

0

ವಿವೇಕಾನಂದದ ಹಿಮಾನಿ ಎ.ಸಿ.,ಸಾಂದೀಪನಿಯ ತೇಜಸ್, ಕಾಣಿಯೂರು ಪ್ರಗತಿಯ ಉತ್ತಮ್ ಜಿ.623 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ

6 ಸರಕಾರಿ ಪ್ರೌಢಶಾಲೆ, 3 ಅನುದಾನಿತ, 12 ಅನುದಾನ ರಹಿತ ಶಾಲೆಗಳಿಗೆ ಶೇ.100 ಫಲಿತಾಂಶ

ಪುತ್ತೂರು:2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಅವಿಭಜಿತ ಪುತ್ತೂರು ತಾಲೂಕಿಗೆ ಶೇ.91.96 ತೇರ್ಗಡೆ ಫಲಿತಾಂಶ ಲಭಿಸಿದೆ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿಮಾನಿ ಎ.ಸಿ., ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ತೇಜಸ್ ಹಾಗೂ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಉತ್ತಮ್ ಜಿ.ರವರು ತಲಾ 623 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿಷ್ಣುಪ್ರಸಾದ್ 622 ಅಂಕಗಳನ್ನು ಪಡೆದುಕೊಂಡಿದ್ದಾರೆ. 6 ಸರಕಾರಿ ಪ್ರೌಢಶಾಲೆ, 3 ಅನುದಾನಿತ ಹಾಗೂ 21 ಅನುದಾನ ರಹಿತ ಶಾಲೆಗಳಿಗೆ ಶೇ.100 ಫಲಿತಾಂಶ ಲಭಿಸಿದೆ.

ಪುತ್ತೂರಿನ ಒಟ್ಟು 81 ಪ್ರೌಢಶಾಲೆಗಳಿಂದ 4589 ಮಂದಿ ಪರೀಕ್ಷೆಗೆ ಹಾಜರಾಗಿದ್ದು 4208 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರಕಾರಿ ಪ್ರೌಢಶಾಲೆಗಳಲ್ಲಿ ಶೇ.89.75, ಅನುದಾನಿತ ಶಾಲೆಗಳಲ್ಲಿ ಶೇ.88.98 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.94.52 ಫಲಿತಾಂಶ ದಾಖಲಾಗಿದೆ. 81 ಶಾಲೆಗಳ ಪೈಕಿ ಕಬಕ ಸರಕಾರಿ ಪ್ರೌಢಶಾಲೆ ಅತೀ ಕಡಿಮೆ ಶೇ.54 ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷ ತಾಲೂಕಿಗೆ ಶೇ.89 ಫಲಿತಾಂಶ ಲಭಿಸಿದ್ದು ಈ ಬಾರಿ 91.96 ಫಲಿತಾಂಶ ಲಭಿಸಿದೆ. ಕಳೆದ ವರ್ಷ 18 ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದ್ದರೆ ಈ ಬಾರಿ 21 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ.

ಮೂವರು ರಾಜ್ಯದಲ್ಲಿ ತೃತೀಯ: ತಾಲೂಕಿನ ಮೂರು ಮಂದಿ ವಿದ್ಯಾರ್ಥಿಗಳು ತಲಾ 623 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನದ ಸಾಧನೆ ಮಾಡಿದ್ದಾರೆ. ಇವರಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿಮಾನಿ ಎ.ಸಿ.ಯವರು ಬಪ್ಪಳಿಗೆ ನಿವಾಸಿ, ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಚಿದಾನಂದ ಪೂಜಾರಿ ಮತ್ತು ಶೋಭಾ ದಂಪತಿ ಪುತ್ರಿ. ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ತೇಜಸ್‌ರವರು ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ. ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ತೇಜಸ್‌ರವರು ನರಿಮೊಗರು ಶೆಟ್ಟಿ ಮಜಲು ನಿವಾಸಿ, ಬೆಂಗಳೂರಿನಲ್ಲಿ ವೈಟ್ ಲಿಫ್ಟಿಂಗ್ ತರಬೇತುದಾರರಾಗಿರುವ ರಘುನಾಥ ಬಿ.ಎಸ್ ಹಾಗೂ ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿರುವ ತಾರಾ ಬಿ.ಸಿ. ದಂಪತಿ ಪುತ್ರ

ಶೇ.100 ಫಲಿತಾಂಶದ ಸಾಧನೆ ಮಾಡಿದ ಶಾಲೆಗಳು: ಸರಕಾರಿ ಪ್ರೌಢಶಾಲೆಗಳಾದ ಸರಕಾರಿ ಪದವಿ ಪೂರ್ವ ಕಾಲೇಜು ಕೊಣಾಲು, ಸರಕಾರಿ ಪ್ರೌಢಶಾಲೆ ದೋಳ್ಪಾಡಿ, ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ, ಸರಕಾರಿ ಪ್ರೌಢಶಾಲೆ ಮಣಿಕ್ಕರ, ಮೊರಾರ್ಜಿ ದೇಸಾಯಿ ಶಾಲೆ ಬಲ್ನಾಡು, ಡಾ|ಬಿ.ಆರ್.ಅಂಬೇಡ್ಕರ್ ಶಾಲೆ ಪುತ್ತೂರು, ಅನುದಾನಿತ ಶಾಲೆಗಳಾದ ಸುಳ್ಯಪದವು ಸರ್ವೋದಯ ಪ್ರೌಢಶಾಲೆ, ಪಾಣಾಜೆ ಸುಬೋಧ ಪ್ರೌಢಶಾಲೆ, ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ, ಅನುದಾನ ರಹಿತ ಶಾಲೆಗಳಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯ,ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ಆತೂರು ಆಯೇಷಾ ಹೆಣ್ಮಕ್ಕಳ ಶಾಲೆ, ಮರ್ದಾಳ ಗುಡ್‌ಶಫರ್ಡ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಳಂದೂರು ಈಡನ್ ಗಾರ್ಡನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರ(ಚೊಚ್ಚಲ ತಂಡ) ಶೇ.100 ಫಲಿಶಾಂಶ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here