ಸ್ಪೀಕರ್ ಯು.ಟಿ.ಖಾದರ್‌ಗೆ ಗೋಳಿತ್ತೊಟ್ಟು ನಂಟು-ಮುಸ್ಲಿಂ ಸಮುದಾಯದ ಮೊದಲ ಸ್ಪೀಕರ್ ಆಗಿರುವುದಕ್ಕೆ ಸಂಬಂಧಿಕರಲ್ಲೂ ಸಂಭ್ರಮ

0

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ರಾಜ್ಯ ವಿಧಾನಸಭೆಯ 23ನೇ ಸ್ಪೀಕರ್ ಆಗಿ ಆಯ್ಕೆಯಾಗಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಕಡಬ ತಾಲೂಕಿನ ನಂಟು ಹೊಂದಿದ್ದಾರೆ. ಖಾದರ್ ಅವರ ತಾಯಿಯ ತಾಯಿ ಮನೆ ಕಡಬ ತಾಲೂಕಿನ ಗೋಳಿತ್ತೊಟ್ಟಿನಲ್ಲಿದೆ. ಈ ರೀತಿಯಾಗಿ ಕಡಬ ತಾಲೂಕಿನ ನಂಟು ಹೊಂದಿರುವ ಯು.ಟಿ.ಖಾದರ್ ಅವರು ರಾಜ್ಯದ ಇತಿಹಾಸದಲ್ಲೇ ಮುಸ್ಲಿಂ ಸಮುದಾಯದ ಮೊದಲ ಸ್ಪೀಕರ್ ಆಗಿ ಆಯ್ಕೆಗೊಂಡಿರುವುದು ಅವರ ಸಂಬಂಧಿಕರಲ್ಲೂ ಸಂಭ್ರಮ ಉಂಟು ಮಾಡಿದೆ.

ಯು.ಟಿ.ಖಾದರ್ ಅವರು ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಬದಿ ನಿವಾಸಿಯಾಗಿದ್ದ ಜಮೀನ್ದಾರ್ ಹಾಜಿ ಕುಂಞಲಿ ಅವರ ಕುಟುಂಬದೊಂದಿಗೆ ನಂಟು ಹೊಂದಿದ್ದಾರೆ. ಗೋಳಿತ್ತೊಟ್ಟಿನಲ್ಲಿ ಸರಕಾರಿ ಶಾಲೆ, ಇತಿಹಾಸ ಪ್ರಸಿದ್ಧ ಕೋಲ್ಪೆ ಜುಮಾ ಮಸೀದಿಯ ನಿರ್ಮಾಣದ ರೂವಾರಿಯಾಗಿರುವ ಹಾಜಿ ಕುಂಞಲಿ ಹಾಗೂ ಅಚ್ಚಮ್ಮ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು. ಗಂಡು ಮಕ್ಕಳಾದ ಸೂಪುಂಞಿ, ಮೋನು ಬ್ಯಾರಿಯವರು ಅಸುನೀಗಿದ್ದು ಅವರ ಮಕ್ಕಳು ಗೋಳಿತ್ತೊಟ್ಟು ಗ್ರಾಮದಲ್ಲೇ ಇದ್ದು ವ್ಯಾಪಾರ, ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಗು ಮರಿಯಮ್ಮ ಅವರನ್ನು ಹೆಸರಾಂತ ರೈಲ್ವೆ ಗುತ್ತಿಗೆದಾರರಾಗಿದ್ದ ಕಡಬ ನಿವಾಸಿ, ಕಡಬಕಾರ್‍ಸ್ ಎಂದೇ ಪ್ರಸಿದ್ಧಿಪಡೆದುಕೊಂಡಿದ್ದ ಅಬ್ದುಲ್ ಖಾದರ್ ಹಾಜಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮರಿಯಮ್ಮ ಹಾಗೂ ಕಡಬಕಾರ್‍ಸ್ ಅಬ್ದುಲ್ ಖಾದರ್ ಹಾಜಿ ಅವರಿಗೆ ನಾಲ್ಕು ಗಂಡು ಹಾಗೂ 5 ಹೆಣ್ಣು ಮಕ್ಕಳು. ಹಿರಿಯವಳಾದ ನಸೀಮಾ ಅವರನ್ನು ಶಾಸಕ ಯು.ಟಿ.ಫರಿದ್ ಅವರಿಗೆ ಮದುವೆ ಮಾಡಿಕೊಡಲಾಗಿದ್ದು ಈ ನಸೀಮಾ ಹಾಗೂ ಯು.ಟಿ.ಫರಿದ್ ದಂಪತಿಯ ಐವರು ಮಕ್ಕಳಲ್ಲಿ ೨ನೇಯ ಮಗನೇ ಯು.ಟಿ.ಖಾದರ್. ಇಮ್ತಿಯಾಜ್, ಡಾ.ಇಫ್ತಿಕಾರ್, ಝುಲ್ಪಿಕಾರ್‌ರವರು ಯು.ಟಿ.ಖಾದರ್ ಅವರ ಮೂವರು ಸಹೋದರರು. ಝೀನತ್ ಏಕೈಕ ಸಹೋದರಿ. ಲೆಮೀಝಾ ಯು.ಟಿ.ಖಾದರ್ ಅವರ ಪತ್ನಿ. ಅವ್ವಾ ಏಕೈಕ ಪುತ್ರಿ.

ಕಡಬಕಾರ್‍ಸ್ ಫ್ಯಾಮಿಲಿ:
ಸ್ಪೀಕರ್ ಯು.ಟಿ.ಖಾದರ್ ಅವರ ಅಜ್ಜಿ ಮರಿಯಮ್ಮ ಹಾಗೂ ಕಡಬಕಾರ್‍ಸ್ ಹಾಜಿ ಅಬ್ದುಲ್ ಖಾದರ್ ಅವರ ಫ್ಯಾಮಿಲಿಯವರು ಈಗ ಯಾರೂ ಕಡಬದಲ್ಲಿ ಇಲ್ಲ. ರೈಲ್ವೆ ಗುತ್ತಿಗೆದಾರರಾಗಿದ್ದ ಹಾಜಿ ಅಬ್ದುಲ್ ಖಾದರ್ ಅವರು ಮರಿಯಮ್ಮ ಅವರನ್ನು ಮದುವೆಯಾದ ಬಳಿಕ ಮಂಗಳೂರಿಗೆ ಶಿಫ್ಟ್ ಆಗಿದ್ದರು. ಈಗ ಇವರ ಫ್ಯಾಮಿಲಿ ಮಂಗಳೂರಿನಲ್ಲಿಯೇ ಇದೆ. ಕಡಬಕಾರ್‍ಸ್ ಹಾಜಿ ಅಬ್ದುಲ್ ಖಾದರ್ ಅವರ ಸಹೋದರರ ಮಕ್ಕಳು ಕಡಬದಲ್ಲಿದ್ದಾರೆ.

ಗೋಳಿತ್ತೊಟ್ಟಿನಲ್ಲಿ ದಿನ ಕಳೆಯುತ್ತಿದ್ದ ಖಾದರ್:
ಬಾಲ್ಯದಲ್ಲಿ ಗೋಳಿತ್ತೊಟ್ಟಿನಲ್ಲಿರುವ ತಾಯಿಯ ತಾಯಿ ಮನೆಗೆ ಬರುತ್ತಿದ್ದ ಯು.ಟಿ.ಖಾದರ್ ಅವರು ಇಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದರು. ಸರಳ ವ್ಯಕ್ತಿತ್ವದ ಯು.ಟಿ.ಖಾದರ್ ಅವರು ಶಾಸಕ, ಸಚಿವರಾದ ಬಳಿಕವೂ ಗೋಳಿತ್ತೊಟ್ಟಿನಲ್ಲಿರುವ ಸಂಬಂಧಿಕರ ಮನೆಗೂ ಬಂದು ಹೋಗುತ್ತಿದ್ದರು. ಸತತ ೫ ಬಾರಿ ಶಾಸಕರಾಗಿ ಚುನಾಯಿತರಾಗಿ ಸಚಿವ ಸ್ಥಾನ, ವಿರೋಧ ಪಕ್ಷದ ಉಪನಾಯಕ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಅತ್ಯುನ್ನತ ಹುದ್ದೆಯಾಗಿರುವ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಅವರು ಆಯ್ಕೆಗೊಂಡಿರುವುದು ಅವರ ಸಂಬಂಧಿಕರಲ್ಲೂ ಸಂಭ್ರಮ ತಂದಿದೆ.

ಕೋಲ್ಪೆ ಉರೂಸ್‌ಗೆ ಹಾಜರು:
ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ನಡೆಯುವ ಉರೂಸ್ ಸಂದರ್ಭದಲ್ಲಿ ಪ್ರತಿವರ್ಷವೂ ಯು.ಟಿ.ಖಾದರ್ ಅವರು ಬಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಉತ್ತಮ ಕೆಲಸಗಾರ:
ಯು.ಟಿ.ಖಾದರ್ ಜಾತ್ಯಾತೀತ ನಿಲುವು, ಸರಳತೆ, ಸಜ್ಜನಿಕೆ ವ್ಯಕ್ತಿತ್ವದವರಾಗಿದ್ದಾರೆ. ದಿನದ 18 ಗಂಟೆ ಕೆಲಸ ಮಾಡುವ ಖಾದರ್ ಅತ್ಯುತ್ತಮ ಕೆಲಸಗಾರನೂ ಹೌದು. ಇದೀಗ ಅವರಿಗೆ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶ ದೊರೆತಿರುವುದು ನಮಗೂ ಸಂತಸ ತಂದಿದೆ. ಸ್ಪೀಕರ್ ಸ್ಥಾನದ ಘನತೆ, ಗೌರವ ಹೆಚ್ಚಿಸುವ ವಿಶ್ವಾಸವಿದೆ. ರಾಜಕೀಯ ಜೀವನದಲ್ಲಿ ಅವರಿಗೆ ಇನ್ನಷ್ಟೂ ಉತ್ತಮ ಅವಕಾಶ ಸಿಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ
-ನಾಸೀರ್ ಸಮರಗುಂಡಿ, ಗೋಳಿತ್ತೊಟ್ಟು

ಯು.ಟಿ.ಖಾದರ್ ಅವರ ಮಾವ -ಕೆಲ ವರ್ಷಗಳ ಹಿಂದೆ ಗೋಳಿತ್ತೊಟ್ಟಿನಲ್ಲಿರುವ ಮಾವ ಮಲಿಕ್ ಅವರ ಮನೆಗೆ ಯು.ಟಿ.ಖಾದರ್ ಅವರು ಭೇಟಿ ನೀಡಿದ್ದ ಸಂದರ್ಭ

LEAVE A REPLY

Please enter your comment!
Please enter your name here