ರಾಮಕುಂಜ: ಕಳೆದ 30 ವರ್ಷಗಳಿಂದ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಸಂಧ್ಯಾ ಅವರು ಮೇ 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಸಂಧ್ಯಾ ಅವರು 8/02/1993 ರಂದು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಗೆ ಶಿಕ್ಷಕಿಯಾಗಿ ಸೇರ್ಪಡೆಗೊಂಡಿದ್ದರು. ಶತಮಾನೋತ್ಸವ ಆಚರಿಸಿಕೊಂಡ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲೆಯು ಸುಮಾರು 60 ವರ್ಷ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ ನಡೆದಿತ್ತು. ಉಡುಪಿ ಪೇಜಾವರ ಮಠಾಧೀಶರಾಗಿದ್ದ ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅಪೇಕ್ಷೆಯಂತೆ 1993ರಲ್ಲಿ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಗೆ ಇವರು ಶಿಕ್ಷಕಿಯಾಗಿ ಸೇರ್ಪಡೆಗೊಂಡಿದ್ದರು. ಇಲ್ಲಿ ಸುಮಾರು 30 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಸಂಧ್ಯಾ ಅವರು ಶಾಲೆಯ ವಿದ್ಯಾರ್ಥಿಗಳ, ಪೋಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೂ ಸೇವೆ ಸಲ್ಲಿಸಿರುವ ಇವರು ಮೇ 31ರಂದು ನಿವೃತ್ತರಾಗಲಿದ್ದಾರೆ. ಎಂ.ಸಂಧ್ಯಾ ಅವರ ಪತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ಅವರು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಂಧ್ಯಾ ಹಾಗೂ ಟಿ.ನಾರಾಯಣ ಭಟ್ ದಂಪತಿ ಪುತ್ರಿ ಡಾ.ಮೌಲಿಕಾ ಅವರು ವೈದ್ಯೆಯಾಗಿದ್ದು ಇವರ ಕುಟುಂಬ ರಾಮಕುಂಜ ಗ್ರಾಮದಲ್ಲಿ ಸಂಪ್ಯಾಡಿಯಲ್ಲಿ ವಾಸ್ತವ್ಯವಿದ್ದಾರೆ.