ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲು ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳ ಅನುಷ್ಟಾನಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಅನುಷ್ಠಾನಗೊಳಿಸಲಾಗುವುದು, ಈ ಪೈಕಿ ಮೊದಲ ಗ್ಯಾರಂಟಿಯಾಗಿ ‘ಗೃಹ ಜ್ಯೋತಿ’ ಯೋಜನೆಯನ್ನು ಜುಲೈ 1ರಿಂದಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಿಲ್ ಆಧರಿಸಿ, ಅದಕ್ಕೆ ಶೇಕಡಾ 10ರಷ್ಟು ಸೇರಿಸಿ ಗರಿಷ್ಠ 2೦೦ ಯೂನಿಟ್‌ವರೆಗೆ ಎಲ್ಲ ಮನೆಗಳಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್‌ನಿಂದ ವಿನಾಯಿತಿ ಅನ್ವಯವಾಗಲಿದೆ. ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ ಸಿದ್ಧರಾಮಯ್ಯ, ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೆ ಈ ಆರ್ಥಿಕ ವರ್ಷದಲ್ಲಿಯೇ, ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಅನುಷ್ಟಾನ ಮಾಡುತ್ತೇವೆ ಎಂದು ತಿಳಿಸಿದರು.
‘ಗೃಹ ಲಕ್ಷ್ಮೀ’ ಆ.15ರಂದು ಅನುಷ್ಟಾನ: ಎರಡನೇ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ಯನ್ನು ಆಗಸ್ಟ್ 15ರಂದು ಅನುಷ್ಠಾನಕ್ಕೆ ತರಲಾಗುವುದು. ಈ ಯೋಜನೆಯಡಿ ಬಿಪಿಎಲ್, ಎಪಿಎಲ್ ಖಾತೆದಾರರ ಮನೆ ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂ.ಹಣ ನೀಡಲಾಗುವುದು. ಆದರೆ, ಯೋಜನೆ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು. ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು. ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
‘ಅನ್ನಭಾಗ್ಯ’ ಜುಲೈನಿಂದಲೇ ಜಾರಿ: 3ನೇ ಗ್ಯಾರಂಟಿ ‘ಅನ್ನಭಾಗ್ಯ’ ಯೋಜನೆಯಡಿ ಜುಲೈ 1ರಿಂದ ಎಲ್ಲಾ ಬಿಪಿಎಲ್ ಕಾರ್ಡ್‌ದಾರರು ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
‘ಶಕ್ತಿ’ಗೆ ಜೂ.11ರಂದು ಚಾಲನೆ: 4ನೇ ಗ್ಯಾರಂಟಿ ಯೋಜನೆಯಾಗಿರುವ, ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ಮಹಿಳೆಯರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ಈ ತಿಂಗಳ 11ರಂದು ಚಾಲನೆ ನೀಡಲಾಗುವುದು. ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಹೈದರಾಬಾದ್‌ಗೆ ಈ ಉಚಿತ ಪ್ರಯಾಣದ ಅವಕಾಶವಿಲ್ಲ. ಸಾಮಾನ್ಯ ಬಸ್‌ಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶೇ.50ರಷ್ಟು ಸೀಟು ಪುರುಷರಿಗೆ ಮೀಸಲು. ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ ಲಕ್ಸ್ಯೂರಿ, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಇದು ಅನ್ವಯವಾಗಲ್ಲ. ಉಚಿತ ಬಸ್ ಪ್ರಯಾಣದ ಸವಲತ್ತನ್ನು ತೃತೀಯ ಲಿಂಗಿಗಳಿಗೂ ಒದಗಿಸಲಾಗಿದೆ ಎಂದು ಸಿಎಂ ಹೇಳಿದರು.
5ನೇ ಗ್ಯಾರಂಟಿ ‘ಯುವನಿಧಿ’ಗೆ ಅರ್ಜಿ ಆಹ್ವಾನ: 2022-23ರಲ್ಲಿ ತೇರ್ಗಡೆಯಾಗಿರುವ ಪದವೀಧರ ನಿರುದ್ಯೋಗಿಗಳಿಗೆ, ನೋಂದಣಿಯಾದ 24 ತಿಂಗಳವರಗೆ ಪ್ರತಿ ತಿಂಗಳಿಗೆ ರೂ.3,೦೦೦ ಮತ್ತು ಡಿಪ್ಲೊಮಾ ಮಾಡಿದವರಿಗೆ ರೂ.15೦೦ ಗೌರವ ಧನ ನೀಡಲಾಗುವುದು. ವೃತ್ತಿಪರ ಶಿಕ್ಷಣ ಸೇರಿದಂತೆ ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ ಇದು ಅನ್ವಯವಾಗಲಿದೆ. ತೃತೀಯ ಲಿಂಗಿಗಳಿಗೂ ಕೂಡಾ ಈ ಯೋಜನೆ ಅನ್ವಯ ನಿರುದ್ಯೋಗ ಭತ್ಯೆ ನೀಡಲಾಗುವುದು. ಇದಕ್ಕಾಗಿ ಅರ್ಜಿ ಕರೆಯಲಾಗುವುದು. ಸರಕಾರಿ ಇಲ್ಲವೇ ಖಾಸಗಿ ಉದ್ಯೋಗ ದೊರಕಿದ ಬಳಿಕ ಗೌರವ ಧನ ಸ್ಥಗಿತಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಪಪಡಿಸಿದರು.
ರಾಜ್ಯದ 5 ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಹೇಗೆ.. ಅರ್ಹತೆಗಳೇನು
ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಲೇ, ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ ಎಂಬ ಕುರಿತು ವ್ಯಾಪಕ ಚರ್ಚೆ ಶುರುವಾಗಿತ್ತು. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಯಾರಾಗಬಹುದು, ಇರಬೇಕಾದ ಮಾನದಂಡಗಳೇನು? ಎನ್ನುವ ಕುತೂಹಲವೂ ಇತ್ತು. ಇದೀಗ, ಐದು ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್/ ಅಂತ್ಯೋದಯ ಕಾರ್ಡ್ ಇರುವ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಪ್ರತಿ ಮನೆಗೂ 2೦೦ ಯುನಿಟ್ ಉಚಿತ ವಿದ್ಯುತ್ ಹಾಗೂ ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಮಾಡಿದವರಿಗೆ ಭತ್ಯೆ ಕೊಡುವ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ.
ಯೋಜನೆಗಳ ವಿವರ ಇಲ್ಲಿದೆ.
ಗ್ಯಾರಂಟಿ 1-ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್: ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಮಾಸಿಕ 2೦೦ ಯುನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಈ ಯೋಜನೆ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ. ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಗ್ರಾಹಕರು ಪಾವತಿ ಮಾಡಬೇಕಾದ ಅಗತ್ಯ ಇಲ್ಲ. ಆದರೆ,ಜುಲೈನಲ್ಲಿ ಬರುವ ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಜನರು ಪಾವತಿ ಮಾಡಲೇಬೇಕು. ವಾರ್ಷಿಕವಾಗಿ ಪ್ರತಿ ಮನೆಯಲ್ಲಿ ಬಳಕೆ ಮಾಡಲಾದ ಸರಾಸರಿ ವಿದ್ಯುತ್ ಪ್ರಮಾಣವನ್ನು ಲೆಕ್ಕ ಹಾಕಿ ಈ ಯೋಜನೆಯ -ಲಾನುಭವಿಗಳನ್ನು ನಿರ್ಧರಿಸಲಾಗುತ್ತದೆ.
ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ತೆಗೆದುಕೊಂಡು ಅದರ ಮೇಲೆ ಶೇ.1೦ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಪ್ರತಿ ತಿಂಗಳೂ ನಿಮ್ಮ ಮನೆಯಲ್ಲಿ ಸರಾಸರಿ 120 ಯೂನಿಟ್ ವಿದ್ಯುತ್ ಬಳಸಿದ್ದರೆ ನಿಮಗೆ ಮುಂದೆ 132 ಯೂನಿಟ್‌ವರೆಗೂ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡಲಿದೆ. ಇದೇ ರೀತಿ ನೀವು ಎಷ್ಟೇ ಯೂನಿಟ್ ಬಳಸಿದ್ದರೂ, ಅದರ ಸರಾಸರಿಗೆ ಶೇ.10ರಷ್ಟು ಯೂನಿಟ್ ಸೇರಿಸಿ ತಿಂಗಳಿಗೆ ಗರಿಷ್ಟ 2೦೦ ಯೂನಿಟ್ ಮಾತ್ರ ಪ್ರತಿ ಮನೆಗೆ ಉಚಿತ ವಿದ್ಯುತ್ ಸಿಗಲಿದೆ.
ಗ್ಯಾರಂಟಿ 2-ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.: ಗೃಹ ಲಕ್ಷ್ಮೀ ಯೋಜನೆಗೆ ಆಗಸ್ಟ್ 15ರಂದು ಚಾಲನೆ ಸಿಗಲಿದೆ. ಈ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,೦೦೦ ರೂ. ಹಣ ಸರಕಾರದಿಂದ ಸಿಗಲಿದೆ. ಇದಕ್ಕಾಗಿ ಮನೆ ಯಜಮಾನಿ ತಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯೋಜನೆಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಮನೆ ಯಜಮಾನಿ ಯಾರು ಎನ್ನುವುದನ್ನು ಮನೆಯವರೇ ತೀರ್ಮಾನಿಸಬೇಕಿದೆ.ಜೂನ್ 15ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆಗಸ್ಟ್ 15ರ ಒಳಗೆ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ಸಿಗಲಿದೆ. ಈ ಯೋಜನೆ ಎಲ್ಲರಿಗೂ ಅನ್ವಯ ಆಗಲಿದೆ. ಬಿಪಿಎಲ್ ಅಥವಾ ಎಪಿಎಲ್ ಎಂಬ ಭೇದಭಾವ ಇರೋದಿಲ್ಲ. ಯಾವುದೇ ಆದಾಯದ ಮಿತಿಯೂ ಇಲ್ಲ. ಸರಕಾರಿ ನೌಕರರಿಗೂ ಈ ಯೋಜನೆ ಅನ್ವಯ ಆಗುತ್ತದೆ. ಮನೆಯೊಡತಿ ಅರ್ಜಿಯನ್ನು ಆಫ್‌ಲೈನ್, ಆನ್‌ಲೈನ್ ಎರಡರಲ್ಲೂ ಹಾಕಬಹುದು. ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳೂ ಕೂಡಾ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಬಹುದು.
ಗ್ಯಾರಂಟಿ 3-ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ: ಬಿಪಿಎಲ್ ಕಾರ್ಡ್ ಹೊಂದಿರುವವರು, ಅಂತ್ಯೋದಯ ಫಲಾನುಭವಿಗಳಲ್ಲಿ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ದೊರೆಯಲಿರುವ ಅನ್ನ ಭಾಗ್ಯ ಯೋಜನೆ ಜುಲೈ 1ರಿಂದ ಜಾರಿ ಆಗಲಿದೆ. ಈ ಯೋಜನೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಮಾತ್ರ ಅನ್ವಯ ಆಗಲಿದೆ. ಅಂತ್ಯೋದಯ ಯೋಜನೆಯಡಿ 35 ಕೆಜಿ ಅಕ್ಕಿ ಪಡೆಯುತ್ತಿರುವವರೂ ಕೂಡಾ ಅನ್ನ ಭಾಗ್ಯ ಯೋಜನೆಯಡಿ ಹತ್ತು ಕೆಜಿ ಆಹಾರ ಧಾನ್ಯ ಪಡೆಯಲು ಅರ್ಹರಾಗಿರುತ್ತಾರೆ. ಎಪಿಎಲ್ ಕಾರ್ಡ್ ಇರುವವರಿಗೆ ಈ ಯೋಜನೆ ಅನ್ವಯ ಆಗೋದಿಲ್ಲ. ಕೆಲವು ಸಂದರ್ಭಗಳಲ್ಲಿ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ಹಾಗೂ 5 ಕೆಜಿ ರಾಗಿ, ಗೋಧಿ ಮುಂತಾದ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಉದ್ದೇಶವೂ ಸರ್ಕಾರಕ್ಕೆ ಇದೆ. ಈ ಕುರಿತಾಗಿ ಕಾಲ ಕಾಲಕ್ಕೆ ಬಿಪಿಎಲ್ ಕಾರ್ಡ್‌ದಾರರಿಗೆ ಮಾಹಿತಿ ಸಿಗಲಿದೆ. ಆಯಾ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿ ಇರುವ ಆಹಾರ ಧಾನ್ಯಗಳನ್ನೇ ಸರ್ಕಾರ ನೀಡಲಿದೆ.
ಗ್ಯಾರಂಟಿ 4-ಪದವೀಧರರು, ಡಿಪ್ಲೊಮಾ ಮಾಡಿದವರಿಗೆ ನಿರುದ್ಯೋಗ ಭತ್ಯೆ: 2022-23ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವ ಪದವೀಧರರಿಗೆ ಮುಂದಿನ 24 ತಿಂಗಳವರೆಗೆ ಅಥವಾ ಉದ್ಯೋಗ ದೊರೆಯುವವರೆಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ಸಿಗಲಿದೆ.
ನಿರುದ್ಯೋಗಿ ಎಂದು ಘೋಷಿಸಿಕೊಂಡ ಎಲ್ಲ ಜಾತಿಯ ಪದವೀಧರರಿಗೆ ಈ ಯೋಜನೆ ಅನ್ವಯ ಆಗಲಿದೆ.ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳೂ 3,೦೦೦ ಸಾವಿರ ರೂಪಾಯಿ ಸಿಗಲಿದೆ.
ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ ಪ್ರತಿ ತಿಂಗಳೂ 1,5೦೦ ರೂ. ಭತ್ಯೆ ಸಿಗಲಿದೆ. ಒಂದು ವೇಳೆ ಯೋಜನೆ ಜಾರಿಯಲ್ಲಿ ಇರುವಾಗಲೇ ಯಾವುದಾದರೂ ನಿರುದ್ಯೋಗಿ ಫಲಾನುಭವಿಗೆ ಕೆಲಸ ಸಿಕ್ಕಿದರೆ, ಅವರಿಗೆ ಈ ಯೋಜನೆಯಡಿ ಸಿಗುತ್ತಿದ್ದ ಹಣ ನಿಂತು ಹೋಗುತ್ತದೆ. ಈ ಯೋಜನೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಮಾಹಿತಿ ಸಂಗ್ರಹ ಕಾರ್ಯ ಶುರು ಮಾಡಿದೆ. 2022-23ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದವರು ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕು.ಮುಂದಿನ ಆರು ತಿಂಗಳ ಒಳಗಾಗಿ ಅರ್ಜಿ ಹಾಕಲು ಅವಕಾಶ ಇದೆ.ಈ ಯೋಜನೆ ಮಂಗಳ ಮುಖಿಯರಿಗೂ ಅನ್ವಯ ಆಗಲಿದೆ.
ಗ್ಯಾರಂಟಿ 5-ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಮಹಿಳೆಯರು ಜೂನ್ 11ರಿಂದ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಈ ಯೋಜನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಹವಾ ನಿಯಂತ್ರಿತ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಮಹಿಳೆಯರು ಪ್ರಯಾಣಿಸಬಹುದು.
ಎಷ್ಟು ದೂರ ಪ್ರಯಾಣವನ್ನಾದರೂ ಮಾಡಬಹುದು. ಬಸ್ ಪ್ರಯಾಣದ ವೇಳೆ ಮಹಿಳೆಯರಿಗೆ ಟಿಕೆಟ್ ಕೊಡಲಾಗುತ್ತದೆಯೋ ಇಲ್ಲವೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ದಿಲ್ಲಿ ಮಾದರಿಯಲ್ಲಿ ಪಿಂಕ್ ಟಿಕೆಟ್ ಅಥವಾ ಬಸ್ ಪಾಸ್ ವಿತರಿಸಬಹುದು. ಮಹಿಳೆಯರ ಗುರುತಿನ ಚೀಟಿ ಪರಿಶೀಲನೆ ಮಾಡಿ ಬಸ್ ಪಾಸ್ ವಿತರಿಸುವ ಸಾಧ್ಯತೆ ಇದೆ.ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪುರುಷರಿಗೆ ಶೇ.೫೦ರಷ್ಟು ಸೀಟ್ ಮೀಸಲಾತಿಯನ್ನೂ ಸರ್ಕಾರ ಘೋಷಣೆ ಮಾಡಿದೆ.ಆದ್ರೆ ಇದು ಬಿಎಂಟಿಸಿ ಬಸ್‌ಗಳಲ್ಲಿ ಅನ್ವಯ ಆಗೋದಿಲ್ಲ.
ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೆ ಈ ಆರ್ಥಿಕ ವರ್ಷದಲ್ಲಿಯೇ, ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಅನುಷ್ಟಾನ ಮಾಡುತ್ತೇವೆ
ಸಿದ್ದರಾಮಯ್ಯ, ಮುಖ್ಯಮಂತ್ರಿ