ಲಂಚ ಪ್ರಪಂಚದಿಂದ ಹೊರಬಂದು ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ಸೇವೆ ಸಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ- ಅಧಿಕಾರಿಗಳಿಗೆ ಸುಳ್ಯ ಶಾಸಕರ ಸೂಚನೆ

0

ಕಡಬ: ಅಧಿಕಾರಿಗಳು ಲಂಚ ಪ್ರಪಂಚದಿಂದ ಹೊರಬಂದು ಭ್ರಷ್ಟಾಚಾರ ಮುಕ್ತವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನನ್ನ ಕನಸಿನ ಸುಳ್ಯ ಕ್ಷೇತ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು, ಆ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ಮಾಡಬೆಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಸೋಮವಾರ ಕಡಬ ತಾಲೂಕು ಪಂಚಾಯಿತಿಯ ನೂತನ ಕಟ್ಟಡದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನನ್ನ ಕನಸಿನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಏನು ಮಾಡಬೇಕು ಎಂದು ಚರ್ಚಿಸಿದರು. ಕಂದಾಯ, ಮೆಸ್ಕಾಂ, ಲೋಕೋಪಯೋಗಿ, ಅರಣ್ಯ, ಆರೋಗ್ಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ , ತೋಟಗಾರಿಕೆ ಮುಂತಾದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯೇಕ ವಿವರ ಪಡೆದುಕೊಂಡ ಶಾಸಕರು ಸರಕಾರಿ ಕಛೇರಿಗಳಿಗೆ ಆಗಮಿಸುವ ಜನತೆಯನ್ನು ಯಾವುದೇ ಕಾರಣಕ್ಕೆ ಸತಾಯಿಸಬಾರದು, ಅವರಿಗೆ ಸೂಕ್ತ ಮಾಹಿತಿ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು, ಬಡಜನರಿಗೆ ಅನ್ಯಾಯವಾದರೆ ಅದು ಸಹಿಸಲು ಸಾಧ್ಯವಿಲ್ಲ, ಈವರೆಗೆ ಸಾರ್ವಜನಿಕರಿಗೆ ಅಧಿಕಾರಿಗಳಿಂದ ತೊಂದರೆಯಾಗಿದ್ದರೆ ಇನ್ನು ಮುಂದೆ ಹಾಗೆ ಆಗಬಾರದು, ಬಾಕಿ ಇರುವ ರಸ್ತೆ, ಸೇತುವೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಮುಗಿಸಿಕೊಡಬೇಕು, ವಿಲೇವಾರಿಗೆ ಬಾಕಿ ಇರುವ ಅಕ್ರಮ ಸಕ್ರಮ, 94 ಸಿ , 94 ಸಿಸಿ ಕಡತಗಳನ್ನು ತಕ್ಷಣ ಪರಿಶೀಲಿಸಿ ಯಾಕೆ ಕಡತಗಳು ಬಾಕಿ ಆಗಿವೆ ಎಂದು ಪತ್ತೆ ಹಚ್ಚಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಪರಿಹರಿಸಿಕೊಂಡು ತೀರಾ ಅಗತ್ಯ ಎಂದು ಕಂಡು ಬಂದಲ್ಲಿ ಬಡಜನತೆಗೆ, ಹೊಂದಾಣಿಕೆ ಮಾಡಿಕೊಂಡು ಹಕ್ಕು ಪತ್ರ ನೀಡುವ ಕಾರ್ಯವಾಗಬೇಕು, ಎಲ್ಲಾ ಇಲಾಖೆಯವರು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಸಮಗ್ರ ಅಭಿವೃದ್ಧಿಯ ಪಕ್ಷಿನೋಟಕ್ಕೆ ಸಹಕಾರಿಯಗುತ್ತದೆ ಎಂದರು. ರಸ್ತೆ ಅಭಿವೃದ್ಧಿಗೆ, ಮೆಸ್ಕಾಂ ಇಲಾಖೆಗಳಿಗೆ ಮರಗಳಿಂದ ತೊಂದರೆಯಾಗುವಂತಿದ್ದರೆ ಅಂತಹ ಸಂದರ್ಭದಲ್ಲಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಯವರು ಸಹಕರಿಸಬೇಕು, ಮಳೆಗಾಲ ಸಂದರ್ಭದಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಬಹುದಾದ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಯವರು ಸಹಕರಿಸಬೇಕು ಎಂದು ಹೇಳಿದ ಶಾಸಕರು ಕಡಬ ತಾಲೂಕು ಅನುಷ್ಠಾನ ಮಾಡುವಲ್ಲಿ ಶ್ರಮಿಸುವುದಾಗಿ ಹೇಳಿದರು. ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆಂಪೇ ಗೌಡ ಮಾತನಾಡಿ, ಶಾಸಕರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ ನಾವೆಲ್ಲಾ ಒಟ್ಟು ಸೇರಿ ಅಭಿವೃದ್ಧಿ ಕಾರ್ಯದಲ್ಲಿ ಶಾಸಕರ ಜೊತೆ ಕೈ ಜೋಡಿಸೋಣ ಎಂದರು.

ವಿವಿಧ ಇಲಾಖಾಕಾರಿಗಳು ತಮ್ಮ ಇಲಾಖಾ ಸಮಸ್ಯೆಗಳು ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯಿತಿ ವತಿಯಿಂದ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಕಡಬ ತಹಸೀಲ್ದಾರ್ ರಮೇಶ್ ಬಾಬು, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಪಕೀರ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಹಾಗೂ ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಸಹಕರಿಸಿದರು.

ಸರಕಾರಿ ಕಛೇರಿಗಳಿಗೆ ಆಗಮಿಸುವ ಜನತೆಯನ್ನು ಯಾವುದೇ ಕಾರಣಕ್ಕೆ ಸತಾಯಿಸಬಾರದು, ಅವರಿಗೆ ಸೂಕ್ತ ಮಾಹಿತಿ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು, ಬಡಜನರಿಗೆ ಅನ್ಯಾಯವಾದರೆ ಅದು ಸಹಿಸಲು ಸಾಧ್ಯವಿಲ್ಲ,

-ಭಾಗೀರಥಿ, ಶಾಸಕರು ಸುಳ್ಯ

LEAVE A REPLY

Please enter your comment!
Please enter your name here