ಸಮಸ್ಯೆಗಳ ಆಗರ ಈ ಸಂಪ್ಯದ ಎ.ಟಿ.ಎಂ-ಹೇಳೋರಿಲ್ಲ…ಕೇಳೋರಿಲ್ಲ…ಬಾಗಿಲು ಮುಚ್ಚಿ ವಾರಗಳಾದವು..!?

0

@ ಸಿಶೇ ಕಜೆಮಾರ್


ಪುತ್ತೂರು: ಹಣ ಡ್ರಾ ಮಾಡಲು ಈ ಎಟಿಎಂಗೆ ಬಂದರೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಕಳೆದ ಹಲವು ಸಮಯಗಳಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಈ ಎಟಿಎಂ ಅನ್ನು ಕೇಳುವವರೇ ಇಲ್ಲದಾಗಿದೆ. ಇದೀಗ ಕಳೆದ ಕೆಲವು ದಿನಗಳಿಂದ ಬಾಗಿಲು ಮುಚ್ಚಿರುವ ಎಟಿಎಂ ಇನ್ಯಾವಾಗ ಬಾಗಿಲು ತೆರೆಯುತ್ತೋ ಅನ್ನೋದನ್ನೇ ಕಾದು ನೋಡಬೇಕಾಗಿದೆ. ಇಷ್ಟಕ್ಕೂ ಈ ಎಟಿಎಂ ಇರೋದಾದರೂ ಎಲ್ಲಿ ಅಂತೀರಾ? ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿದೆ.

ಆರ್ಯಾಪು ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್ ಆರ್ಯಾಪು ಶಾಖೆಗೆ ಸೇರಿದ ಈ ಎಟಿಎಂ ಒಂದಲ್ಲ ಒಂದು ಸಮಸ್ಯೆಗಳಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.


ಗ್ರಾಮೀಣ ಪ್ರದೇಶದ ಏಕೈಕ ಎಟಿಎಂ
ಆರ್ಯಾಪು ಗ್ರಾಪಂಗೆ ಸೇರಿದ ಗ್ರಾಮೀಣ ಪ್ರದೇಶದಲ್ಲಿರುವ ಏಕೈಕ ಎಟಿಎಂ ಇದಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು-ಕುಂಬ್ರ ಮಧ್ಯೆ ಪುತ್ತೂರು ಸಿಟಿ ಬಿಟ್ಟರೆ ಸಂಪ್ಯದಲ್ಲಿ ಮಾತ್ರ ಎಟಿಎಂ ಇದೆ. ಇದು ಬಿಟ್ಟರೆ ಮುಂದೆ 7 ಕಿ.ಮೀ ದೂರದ ಕುಂಬ್ರಕ್ಕೆ ಬರಬೇಕು ಅಥವಾ ಪುತ್ತೂರಿಗೆ ಹೋಗಬೇಕಾಗಿದೆ. ಹಣ ಡ್ರಾ ಮಾಡಲು ಗ್ರಾಮೀಣ ಭಾಗದ ಜನರು ಇದೇ ಎಟಿಎಂ ಅನ್ನು ಅವಲಂಭಿಸಿದ್ದಾರೆ.


ಬಾಗಿಲು ಮುಚ್ಚಿ ವಾರಗಳೇ ಕಳೆದಿದೆ
ಹೌದು…ಎಟಿಎಂ ಬಾಗಿಲು ಮುಚ್ಚಿ ವಾರಗಳಾಗುತ್ತಾ ಬಂದಿದೆ. ಯಾಕೆ ಎಂದು ಪ್ರಶ್ನಿಸಿದರೆ ಎಟಿಎಂನ ಮದರ್‌ಬೋರ್ಡ್ ಸಮಸ್ಯೆ ಇದೆ. ರಿಪೇರಿ ಮಾಡಬೇಕಷ್ಟೆ ಎಂಬ ಉತ್ತರ ಬ್ಯಾಂಕಿನಿಂದ ಬಂದಿದೆ. ಮದರ್‌ಬೋರ್ಡ್ ದುರಸ್ತಿ ಮಾಡಲು ಇಷ್ಟು ದಿನಗಳು ಬೇಕಾ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.


ಇನ್‌ವರ್ಟರ್ ಇಲ್ಲದೆ ಸಮಸ್ಯೆ
ಕೆನರಾ ಬ್ಯಾಂಕ್‌ಗೆ ಸೇರಿದ ಈ ಎಟಿಎಂ ಹತ್ತು ಹಲವು ಸಮಸ್ಯೆಗಳಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಎಟಿಎಂ ಕೇವಲ ವಿದ್ಯುತ್ ಇರುವಾಗ ಮಾತ್ರ ಚಾಲೂ ಇರುತ್ತದೆ. ವಿದ್ಯುತ್ ಹೋದರೆ ಎಟಿಎಂ ಬಂದ್ ಆಗುತ್ತದೆ. ಇನ್‌ವರ್ಟರ್ ಇಲ್ಲದೆ ಇರುವುದರಿಂದ ವಿದ್ಯುತ್ ಇಲ್ಲದ ಸಮಯದಲ್ಲಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಹಣ ಡ್ರಾ ಮಾಡಿ ಇನ್ನೇನು ಹಣ ತೆಗೆಯಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಹೋದರೆ ಹಣವೂ ಅರ್ಧದಲ್ಲೇ ಬಾಕಿಯಾಗುತ್ತದೆ. ಹಣವನ್ನು ತೆಗೆಯುವುದೇ ಒಂದು ದೊಡ್ಡ ತಲೆನೋವಾಗುತ್ತದೆ ಎನ್ನುತ್ತಾರೆ ಗ್ರಾಹಕರು. ಇನ್ನಾದರೂ ಎಟಿಎಂನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದಾ ಎಂಬುದುನ್ನು ಕಾದುನೋಡಬೇಕಾಗಿದೆ.

ಎಟಿಎಂನ ಮದರ್‌ಬೋರ್ಡ್‌ನಲ್ಲಿ ಸಮಸ್ಯೆಯಾಗಿರುವುದರಿಂದ ಮದರ್‌ಬೋರ್ಡ್ ಬದಲಾಯಿಸಬೇಕಾಗಿದೆ. ಇನ್ನೇರಡು ದಿನಗಳಲ್ಲಿ ಸಮಸ್ಯೆ ಸರಿಪಡಿಸಲಾಗುವುದು. ಗ್ರಾಹಕರು ಸಹಕರಿಸಬೇಕಾಗಿದೆ.
ದೀಪಾ, ಮ್ಯಾನೇಜರ್ ಕೆನರಾ ಬ್ಯಾಂಕ್ ಆರ್ಯಾಪು ಶಾಖೆ

ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಈ ಎಟಿಎಂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಹಲವು ಸಮಸ್ಯೆಗಳು ಈ ಎಟಿಎಂನಲ್ಲಿದೆ. ಮುಖ್ಯವಾಗಿ ಇನ್‌ವರ್ಟರ್ ಇಲ್ಲದೆ ವಿದ್ಯುತ್ ಇರುವಾಗ ಮಾತ್ರ ಎಟಿಎಂ ಚಾಲೂ ಇರುತ್ತದೆ. ಇದೀಗ ಕಳೆದ ಕೆಲವು ದಿನಗಳಿಂದ ಬಾಗಿಲು ಮುಚ್ಚಿದ್ದು ಗ್ರಾಹಕರಿಗೆ ತೊಂದರೆಯಾಗಿದೆ.
ಉಮೇಶ್ ಸಂಪ್ಯ, ಗ್ರಾಹಕರು

LEAVE A REPLY

Please enter your comment!
Please enter your name here