ಪುತ್ತೂರು: ಹೊಸತಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹವಾದರೂ, ತರಬೇತಿ ನೀಡಲು ಆಯ್ಕೆ ಆದವರು ಮಾತ್ರ ಸಂವಿಧಾನಿಕ ತಜ್ಙರಲ್ಲದಿರುವವರು, ಸಂಸದೀಯ ಅನುಭವ ಇಲ್ಲದಿರುವುದು, ಸಮಾಜಮುಖಿ ಜನಪರ ಚಳವಳಿಯಲ್ಲಿ ಗುರುತಿಸಲ್ಪಡದವರು ಎಂಬುದು ಖೇದಕರ ಹಾಗೂ ಖಂಡನೀಯವಾಗಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಅವರು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು ಡಾ. ರವಿಶಂಕರ ಗುರೂಜಿ, ಮಹಮ್ಮದ್ ಕುಂಞಿ, ಡಾ. ವಿರೇಂದ್ರ ಹೆಗ್ಗಡೆ, ಡಾ. ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿ ಆಶಾದೀದಿ, ಮೊದಲಾದವರು ಈ ತರಬೇತಿಗೆ ಗುರುತಿಸಲ್ಪಟ್ಟವರು ಸಮಾಜದಲ್ಲಿ ಗೌರವಿಸಲ್ಪಟ್ಟ ವ್ಯಕ್ತಿಗಳಾಗಿರಬಹುದು, ಆದರೆ ಇವರುಗಳು ಸಂವಿಧಾನಕ್ಕಿಂತ ಹೆಚ್ಚು ಧರ್ಮ ನಿಷ್ಠರಾಗಿರುವವರಾಗಿದ್ದಾರೆ. ಈ ಆಯ್ಕೆ ಅವರ ಗೌರವಕ್ಕೂ ಚ್ಯುತಿತರುವಂತಾಗಿದೆ. ಇವರೆಲ್ಲ ಸಮಾಜಾದ ಕನಸು ಕಂಡವರಲ್ಲ, ಕುವೆಂಪುರವರ ವೈಚಾರಿಕತೆಯಾಗಲಿ, ನಾರಾಯಣಗುರು ಸಮಾನತೆಯ ವಿಚಾರವಾಗಲಿ, ಡಾ| ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆ ಇದ್ದವರಾಗಲಿ ಅಥವಾ ಸಂಸದೀಯ ಪಟುಗಳ ಜ್ಙಾನ ಹೊಂದಿವರೂ ಅಲ್ಲ ಸಂವಿಧಾನ ತಜ್ಙರೂ ಅಲ್ಲ ಮತ್ತು ಅದಕ್ಕಾಗಿ ಹೋರಾಟ ನಡೆಸಿದವರೂ ಆಗಿರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಿಕ ಸಂಸದೀಯತೆಯನ್ನು ಅನುಸರಿಸಲು ಶಾಸಕರನ್ನು ಸಿದ್ದಗೊಳಿಸುವ ತರಬೇತಿ ನೀಡುವ ಬದಲು ಅತಿಥಿಗಳ ಗೌರವಿಸುವ ಸಭೆಯಂತಾಗಬಾರದು. ಶಾಂತೇರಿ ಗೋಪಾಲಗೌಡ, ಶ್ರೀರಾಮರೆಡ್ಡಿ, ನಿಜಲಿಂಗಪ್ಪ, ಜೆ.ಎಚ್.ಪಟೇಲ್, ರಾಮಚಂದ್ರರಾವ್, ರಾಮಕೃಷ್ಣ ಹೆಗಡೆ ಮೊದಲಾದ ಸಂಸದೀಯ ಪಟುಗಳಿಗೆ ಅವಮಾನ ಮಾಡುವ ರೀತಿ ತರಬೇತಿ ನೀಡಲು ಹೊರಟಿರುವುದು ಖಂಡನೀಯ. ರಮೇಶ್ ಕುಮಾರ್ ಸೇರಿದಂತೆ ಮಾಜಿ ಸ್ಪೀಕರುಗಳ, ಸಂವಿಧಾನ ತಜ್ಙರ ಕರೆದು ಹೊಸ ಶಾಸಕರನ್ನು ತರಬೇತು ಗೊಳಿಸುವುದು ಸಂಸದೀಯ ವ್ಯವಸ್ಥೆಗೆ ಹಾಗೂ ಸ್ಪೀಕರ್ ಅವರ ನಡೆಗೆ ಶೋಭೆ ತರುತ್ತಿತ್ತು. ಅದಿಕಾರ ದೊರೆತ ಕೂಡಲೇ ಸಮಾಜದ ಬಗ್ಗೆ ಜನರ ಬದುಕಿನ ಬಗ್ಗೆ ಸಂವಿಧಾನದ ಬಗ್ಗೆ ಗಮನ ನೀಡದೆ ವ್ಯಕ್ತಿ ಪೂಜೆಗೆ ಹೊರಟಿರುವುದು ಸಿದ್ದರಾಮಯ್ಯರಂತಹ ಸಮಾಜವಾದಿ ಚಿಂತಕರ ನೇತೃತ್ವದ ಸರಕಾರಕ್ಕೂ ಶೋಭೆ ತರಲಾರದು. ಈಗ ಮಾಡಿರುವ ಆಯ್ಕೆ ಬಿಜೆಪಿ ಸರಕಾರ ಪಠ್ಯ ಪುಸ್ತಕಗಳಪರಿಷ್ಕರಣೆಗೆ ಆಯ್ಕೆಮಾಡಿದಂತಾಗಿದೆ ಎಂದವರು ಟೀಕಿಸಿದರು.