ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸುಜಾತ ಮುಳಿಗದ್ದೆ ಪಕ್ಕಾ ; ಉಪಾಧ್ಯಕ್ಷರಾಗಿ ರೇವತಿ ಅಥವಾ ಜಯಲಕ್ಷ್ಮೀ ಬಲ್ಲಾಳ್?!

0

ಪುತ್ತೂರು: ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮಗಳನ್ನು ಒಳಗೊಂಡಿದ್ದ ಕೆದಂಬಾಡಿ ಗ್ರಾಪಂನಿಂದ ಬೇರ್ಪಟ್ಟು 2015 ರಲ್ಲಿ ಕೆಯ್ಯೂರು ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ಅಸ್ತಿತ್ವಕ್ಕೆ ಬಂತು. ಎರಡು ಗ್ರಾಮಗಳು ಒಟ್ಟಿಗೆ ಇರುವಾಗ 25 ಸದಸ್ಯ ಬಲವನ್ನು ಹೊಂದಿದ್ದ ಕೆದಂಬಾಡಿ ಗ್ರಾಪಂ ಪ್ರಸ್ತುತ 10 ಸದಸ್ಯ ಬಲವನ್ನು ಹೊಂದಿದೆ. 2020ರಲ್ಲಿ ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ರತನ್ ರೈ ಕುಂಬ್ರ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಉಪಾಧ್ಯಕ್ಷರಾಗಿ ಭಾಸ್ಕರ ರೈ ಮಿತ್ರಂಪಾಡಿ ಆಯ್ಕೆಯಾಗಿದ್ದರು. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಅವಕಾಶ ನೀಡಲಾಗಿದೆ.

10 ಮಂದಿ ಸದಸ್ಯ ಬಲ:
ಕೆದಂಬಾಡಿ ಗ್ರಾಪಂನಲ್ಲಿ ರತನ್ ರೈ ಕುಂಬ್ರ, ಭಾಸ್ಕರ ರೈ ಮಿತ್ರಂಪಾಡಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಅಸ್ಮಾ ಗಟ್ಟಮನೆ, ಸುಜಾತ, ರೇವತಿ ಬೋಳೋಡಿ, ಸುಜಾತ ಮುಳಿಗದ್ದೆ ಹಾಗೂ ಜಯಲಕ್ಷ್ಮೀ ಬಲ್ಲಾಳ್ ಬೀಡು ಹೀಗೆ ಒಟ್ಟು 10 ಮಂದಿ ಸದಸ್ಯರಿದ್ದಾರೆ. ಅದರಲ್ಲಿ 7 ಮಂದಿ ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಾದರೆ ಓರ್ವ ಪಕ್ಷೇತರ ಸದಸ್ಯರಾಗಿದ್ದಾರೆ.

ಮುಳಿಗದ್ದೆ ಸುಜಾತರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ:
ಪ್ರಸ್ತುತ ಇರುವ 10 ಮಂದಿ ಸದಸ್ಯ ಬಲದಲ್ಲಿ ಏಕೈಕ ಎಸ್.ಟಿ ಮಹಿಳಾ ಸದಸ್ಯೆಯಾಗಿರುವ ಸುಜಾತ ಮುಳಿಗದ್ದೆಯವರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ. ಬೇರೆ ಯಾರು ಕೂಡ ಎಸ್.ಟಿ ಮಹಿಳಾ ಸದಸ್ಯರು ಇಲ್ಲದೇ ಇರುವುದರಿಂದ ಬಹಳ ಸುಲಭದಲ್ಲಿ ಇವರಿಗೆ ಅಧ್ಯಕ್ಷ ಸ್ಥಾನ ದೊರಕಲಿದೆ. ಮುಳಿಗದ್ದೆ ವಿಶ್ವನಾಥ ನಾಯ್ಕರವರ ಪತ್ನಿಯಾಗಿರುವ ಇವರು ಪದವಿ ಶಿಕ್ಷಣ ಪಡೆದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು:
ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದು ಇದರಲ್ಲಿ ಮುಖ್ಯವಾಗಿ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ.ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಾಲ್ಕು ಜನ ಮಹಿಳಾ ಸದಸ್ಯರು ಇದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಲ್ಲಿ ಬೆಂಬಲದ ಕೊರತೆ ಇದೆ. ಆದ್ದರಿಂದ ಉಪಾಧ್ಯಕ್ಷ ಸ್ಥಾನ ಕೂಡ ಬಿಜೆಪಿ ಬೆಂಬಲಿತರ ಪಾಲಾಗಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು ಹಾಗೂ ಕು.ರೇವತಿ ಬೋಳೋಡಿ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಯಾರಾಗ್ತಾರೆ ಉಪಾಧ್ಯಕ್ಷೆ ಎನ್ನುವುದು ತೀರ್ಮಾನವಾಗಬೇಕಿದೆ. ಬೋಳೋಡಿ ಕುಂಞ್‌ರವರ ಪುತ್ರಿಯಾಗಿರುವ ರೇವತಿಯವರು ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದರೆ ಬೀಡು ಮರಿಯಯ್ಯ ಬಲ್ಲಾಳ್‌ರವರ ಪತ್ನಿಯಾಗಿರುವ ಜಯಲಕ್ಷ್ಮೀ ಬಲ್ಲಾಳ್‌ರವರು ಹಿರಿಯ ಸದಸ್ಯೆಯಾಗಿದ್ದಾರೆ.


ಕೆದಂಬಾಡಿ ಗ್ರಾಪಂ ಅಧ್ಯಕ್ಷಗಾದಿ ಹಿಡಿದವರು:
2202.97 ಎಕರೆ ವಿಸ್ತೀರ್ಣ ಹಾಗೂ 2011 ರ ಜನಗಣತಿಯ ಪ್ರಕಾರ 3604 ಜನಸಂಖ್ಯೆ ಹೊಂದಿರುವ ಕೆದಂಬಾಡಿ ಗ್ರಾಮವನ್ನು ಒಳಗೊಂಡು 1194-95 ರಲ್ಲಿ ಆರಂಭವಾದ ಕೆದಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ಹಲವು ಘಟಾನುಘಟಿಗಳು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಆರಂಭದಲ್ಲಿ ಜತ್ತಪ್ಪ ಗೌಡ ಬೊಳಿಕ್ಕಲರವರು ಅಧ್ಯಕ್ಷರಾದರೆ ಆ ಬಳಿಕ ಸುಮನ ಕೆದಂಬಾಡಿ, ಎ.ಕೆ ಜಯರಾಮ ರೈ, ಸೋಮಾವತಿ ವಿ.ರೈ, ಕೆ.ಎಚ್.ಅಬ್ದುಲ್ಲಾ ಕಟ್ಟತ್ತಾರು ಮೇರ್ಲ, ಕೆ.ಹರಿಶ್ಚಂದ್ರ ಆಚಾರ್ಯ, ಎ.ಕೆ ಜಯರಾಮ ರೈ, ಎಸ್.ಬಿ.ಜಯರಾಮ ರೈ, ಲೀಲಾವತಿ ಸುವರ್ಣ ಕೆಂಗುಡೇಲು, ಪ್ರವೀಣ್ ಶೆಟ್ಟಿ ತಿಂಗಳಾಡಿ ಪ್ರಸ್ತುತ ರತನ್ ರೈ ಕುಂಬ್ರರವರುಗಳು ಕೆದಂಬಾಡಿ ಗ್ರಾಪಂನ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಈ ರೀತಿ ಇತ್ತು:
ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮಗಳನ್ನು ಒಳಗೊಂಡಿದ್ದ ಕೆದಂಬಾಡಿ ಗ್ರಾ.ಪಂಗೆ 1993ರಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲು 2000ದ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ., ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆ ಮೀಸಲಾಗಿತ್ತು. 2005ರ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ., ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ.ಮಹಿಳೆ, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ.ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲು, 2010ರ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ. 2015ರಲ್ಲಿ ಕೆಯ್ಯೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದಿದ್ದು ಕದಂಬಾಡಿ ಗ್ರಾ.ಪಂ.ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾಗಿತ್ತು. 2020ರ ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿಯಲ್ಲಿ ಕೆ.ಬಿ.ರತನ್ ರೈ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಭಾಸ್ಕರ ರೈ ಮಿತ್ರಂಪಾಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here