ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಅಭಿವೃದ್ದಿ ಸಮಿತಿ ಸಭೆ, ಸನ್ಮಾನ

0

ಪುತ್ತೂರು: ಮಾಣಿಲ ಮುರುವ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕರು ಮಾನಿಲ ಪ್ರೌಢ ಶಾಲೆ ಖಾಸಗಿ ಶಾಲೆಗಿಂತಲೂ ಚೆನ್ನಾಗಿದೆ, ಇಲ್ಲಿ ಸ್ವಚ್ಚತೆಗೆ ಹೆಚ್ಚಿನ ಮಹತ್ವವನ್ನು ನೀಡಿದಂತೆ ಕಾಣುತ್ತಿದೆ, ಈ ಶಾಲೆ ಎಲ್ಲಾ ಸರಕಾರಿ ಶಾಲೆಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ಸರಕಾರಿ ಶಾಲೆಗಳನ್ನು ನಾವು ಗೌರವಿಸಬೇಕು, ಶಾಲೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡುವಂತೆ ಹೋದ ಕಡೆ ಹೇಳುತ್ತಿದ್ದೇನೆ. ಆದರೂ ಕೆಲವೊಂದು ಶಾಲೆಗಳಲ್ಲಿ ಗೋಡೆಗಳ ಮಧ್ಯೆ ಇರುವ ಬಲೆಗಳನ್ನು ತೆಗೆಯುವವರಿಲ್ಲದಂತ ಸ್ಥಿತಿ ಇದೆ. ಶಾಲೆಗೆ ಬರುವ ಪ್ರತೀಯೊಬ್ಬ ವಿದ್ಯಾರ್ಥಿಯೂ ಕಲಿಕೆಯ ಜೊತೆಗೆ ಇತರೆ ವಿಚಾರಗಳನ್ನು ಕಲಿಯುವಂತಾಗಬೇಕು, ನಮ್ಮ ಶಾಲೆ ಎಂಬ ಅಭಿಮಾನ ಎಲ್ಲರಿಗೂ ಇರಬೇಕು. ಆಗ ಮಾತ್ರ ಶಾಲೆಗಳು ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ. ಯಾವುದೇ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ, ಕೆಲವೊಂದು ಶಾಲೆಯಲ್ಲಿ ಮಾತ್ರ ಕೊಠಡಿ ಸಮಸ್ಯೆ ಇದೆ. ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರಕಾರ ಮಾಡಲಿದೆ ಎಂದು ಶಾಸಕರು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲಾ ಸಮಿತಿ ವತಿಯಿಂದ ಶಾಸಕರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿಗಳು ಕನಸು ಕಾಣಬೇಕು, ತಾನು ದೊಡ್ಡವನಾದ ಮೇಲೆ ಕಲಿತು ಮುಂದೆ ಏನು ಆಗಬೇಕು ಎಂಬುದನ್ನು ಸದಾ ಜ್ಞಾಪನದಲ್ಲಿಟ್ಟುಕೊಳ್ಳಬೇಕು, ತಂದೆ ತಾಯಿಯನ್ನು ಗೌರವಿಸುವ ಸಂಸ್ಕಾರವನ್ನು ಬೆಳಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಣಿಲ ಗ್ರಾಪಂ ಅಧ್ಯಕ್ಷೆ ವನಿತಾ, ಮಾಜಿ ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ, ಸ್ಥಳದಾನಿ ಮಹಾಭಲೇಶ್ವರ ಭಟ್ ಮುರುವ ನಡುಮನೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಭುವನೇಶ್ವರ್ ಸ್ವಾಗತಿಸಿದರು. ಉಮಾನಾಥ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here