ಪುತ್ತೂರು: ಸ್ಕೌಟ್ಸ್, ಗೈಡ್ಸ್ ಸಹಿತ ಕ್ರೀಡಾ ಕ್ಷೇತ್ರದ ಬಹುಮುಖ ಪ್ರತಿಭೆ, ಸಂಘಟಕಿ ಮುಕ್ವೆ ಸ.ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ವೇದಾವತಿ ಎ ಜೂ.30ರಂದು ನಿವೃತ್ತಿ ಹೊಂದಲಿದ್ದಾರೆ.
ಕಾಸರಗೋಡು ಜಿಲ್ಲೆಯ ಅಡ್ಕಸ್ಥಳ ಕಾಂತು ಹೆಂಗ್ಸು ಮತ್ತು ಎ.ಕೆ.ಪೂಜಾರಿ ದಂಪತಿ ಪುತ್ರಿಯಾಗಿರುವ ವೇದಾವತಿ ಅವರು ನಲ್ಕದಲ್ಲಿ ಮತ್ತು ಅಡ್ಯನಡ್ಕದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಅಡ್ಯನಡ್ಕದಲ್ಲಿ, ಮಡಿಕೇರಿ ಸರಸ್ವತಿ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಟಿ.ಸಿ.ಎಚ್ ತರಬೇತಿ ಪಡೆದು 1996ರ ಜ.27ಕ್ಕೆ ಅವರು ಹಾಸನ ಜಿಲ್ಲೆಯ ಆಲೂರು ಕಿತ್ತಗೆರೆ ಸ.ಕಿ.ಪ್ರಾ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡರು. ಬಳಿಕ 2002ರಲ್ಲಿ ಪುತ್ತೂರು ಬೆದ್ರಾಳ ಸ.ಕಿ.ಪ್ರಾ.ಶಾಲೆ, 2003ರಿಂದ ಮುಕ್ವೆ ಶಾಲೆಗೆ ವರ್ಗಾವಣೆಗೊಂಡರು. ತನ್ನ ಒಟ್ಟು 27 ವರ್ಷಗಳ ಸೇವಾ ಅವಧಿಯಲ್ಲಿ ಶಿಕ್ಷಕರ ಸಂಘ, ಕ್ರೀಡಾ ಕ್ಷೇತ್ರ ಸಹಿತ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ಡೇ, ಸ್ಕೌಟ್ ಗೈಡ್ ರ‍್ಯಾಲಿಯಲ್ಲಿ ಪ್ರೋತ್ಸಾಹ ನೀಡಿದ್ದರು. ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ, ಸದಸ್ಯರಾಗಿ, ಸರಕಾರಿ ನೌಕರರ ಸಂಘದ ನಾಮ ನಿರ್ದೇಶಿತ ಕ್ರೀಡಾ ಕಾರ್ಯದರ್ಶಿಯಾಗಿ, ಬ್ರಹ್ಮಶ್ರೀ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ, ಬಿಲ್ಲವ ಸಂಘ ಪುತ್ತೂರು ಇದರ ಉಪಾಧ್ಯಕ್ಷರಾಗಿ, ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸ್ಕೌಟ್ಸ್, ಗೈಡ್ಸ್ ನಲ್ಲಿ 2005ರಲ್ಲಿ ಬೇಸಿಕ್, 2006ರಲ್ಲಿ ಎಡ್ವಾನ್ಸ್, 2007ರಲ್ಲಿ ವುಡ್ ಬ್ಯಾಡ್ಜ್, 2022ರಲ್ಲಿ ಪ್ರೀ ಎ.ಎಲ್.ಟಿ, ಹಲವಾರು ರ‍್ಯಾಲಿಗಳಲ್ಲಿ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದರು. ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸೇರಿಸಿ 3 ದಿನದ ರ‍್ಯಾಲಿ ಮಾಡಿದ್ದರು.
ಕ್ರೀಡಾ ಸಾಧನೆ:
1996 ರಿಂದ 2022ರ ತನಕ ಸರಕಾರಿ ನೌಕರರ ಸಂಘದ ಕ್ರೀಡಾ ಕೂಟದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಶಾಟ್‌ಫುಟ್, ಡಿಸ್ಕಸ್, ಜಾವಲಿನ್‌ನಲ್ಲಿ ಪದಕಗಳನ್ನು ಪಡೆದಿದ್ದು, ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಶಾಟ್‌ಫುಟ್‌ನಲ್ಲಿ ಪ್ರಥಮ, ಡಿಸ್ಕಸ್‌ನಲ್ಲಿ ದ್ವಿತೀಯ, ಜಾವಲಿನ್‌ನಲ್ಲಿ ತ್ರತೀಯ ಪದಕ ಪಡೆದಿದ್ದಾರೆ. ಭೂಪಾಲ್, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಲಯ, ತಾಲೂಕು, ಜಿಲ್ಲೆಯಲ್ಲಿ ಬಹುಮಾನ ಗಳಿಸಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ವೇದಾವತಿ ಅವರ ಗಂಡ ಸೌದಿ ಮಿಲಿಟರಿ ಸಮವಸ್ತ್ರ ಫ್ಯಾಕ್ಟರಿಯ ನಿವೃತ್ತ ಸೂಪರ್‌ವೈಸರ್ ರಾಜೇಶ್ ಬಂಗೇರ, ಪುತ್ರಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿರುವ ನಿಶಾ. ಅಳಿಯ ಕೃಷ್ಣ ಎಸ್ ಕತ್ತಾರ್‌ನಲ್ಲಿ ಉದ್ಯೋಗಿಯಾಗಿದ್ದು, ಮಗ ನಿರೂಪ್ ಆಸ್ಟ್ರೇಲಿಯಲ್ಲಿದ್ದಾರೆ. ಇವರಿಗೆ ಮೊಮ್ಮಗಳು ನಿಯಾಂಶಿಕೃಷ್ಣ ಇದ್ದಾರೆ. ಪ್ರಸ್ತುತ ವೇದಾವತಿ ಅವರು ಪುತ್ತೂರು ಕಂಬಳಕೋಡಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.