ಪುತ್ತೂರು: ಪ್ರತಿ ತಿಂಗಳು ವಿಶೇಷ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಒಂದು ವರುಷ ಪೂರೈಸಿದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರದ 16 ನೇ ತಿಂಗಳ ವೈದ್ಯಕೀಯ ಶಿಬಿರವು ಜು.2ರಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಯುವ ಉದ್ಯಮಿ ನಿತಿನ್ ಪಕ್ಕಳ ಮಾತನಾಡಿ, ದೇವಸ್ಥಾನದಲ್ಲಿ ಕಳೆದ 15 ತಿಂಗಳುಗಳಿಂದ ಉಚಿತ ವೈದ್ಯಕೀಯ ಶಿಬಿರದ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ. ಈ ಸೇವೆ ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಯಲಿ, ಸಮಾಜದ ಇನ್ನಷ್ಟು ಮಂದಿಗೆ ಸೇವೆ ದೊರೆಯುವಂತಾಗಲಿ ಎಂದು ಹಾರೈಸಿದರು.
ವೈದ್ಯರನ್ನು ಅಭಿನಂದಿಸಿದ ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮನೋಭೂಮಿಕೆಯನ್ನು ಹೊಂದಿರುವವರು. ನಮ್ಮ ನೆಮ್ಮದಿಯ ಜೀವನದಲ್ಲಿ ದೇವರ ಹಾಗೂ ವೈದ್ಯರ ಪಾತ್ರ ಪ್ರಾಮುಖ್ಯವಾಗಿದೆ. ಆಡಳಿತ ಮಂಡಳಿಯ ಸಾರಥ್ಯ ವಹಿಸಿದ ಡಾ.ಸುರೇಶ್ ಪುತ್ತೂರಾಯವರವರು ಪ್ರತಿ ತಿಂಗಳು ವೈದ್ಯಕೀಯ ಶಿಬಿರಗಳನ್ನು ನಡೆಸಿ ಒಂದು ತಿಂಗಳಿಗೆ ಆವಶ್ಯಕವಾದ ಔಷಧಿಗಳನ್ನು ಉಚಿತವಾಗಿ ನೀಡಿ ಜನರಲ್ಲಿ ಚೈತನ ಹಾಗೂ ಹೊಸ ಭರವಸೆ ನೀಡುವ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದ ವೈದ್ಯಕೀಯ ಶಿಬಿರವು ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಔಷಧಿಯ ಕಂಪನಿಗಳು, ಲ್ಯಾಬೋರೇಟರಿಗಳು ಸಹಕಾರಿಂದ ಶಿಬಿರವು ವ್ಯವಸ್ಥಿತವಾಗಿ ನಡೆಯುತ್ತಿದ್ದು ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಪುತ್ತಿಲ ಪರಿವಾರದ ನಿರ್ಧಾರಕ್ಕೆ ಬೆಂಬಲ
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆರೋಗ್ಯ ರಕ್ಷ ಸಮಿತಿಯ ಗೌರವಾಧ್ಯಕ್ಷ ಅರುಣ್ ಕುಮಾರ್ ಎಲ್ಲರ ಆಶಯದಂತೆ ಸ್ಪರ್ಧಿಸಿದ್ದರು. ಸ್ವಲ್ಪದರಲ್ಲಿ ಸೋಲಾಗಿದೆ. ಈಗ ಅವರು ಹಿಂದುತ್ವದ ಏಕ ಮೇವ ನಾಯಕರಾಗಿ ಪುತ್ತೂರು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವ ಹಿಂದು ಸಮಾಜಕ್ಕೆ ಅವಶ್ಯಕ ಎಲ್ಲರಿಗೆ ಅರಿವಾಗಿದೆ. ಕೇವಲ ಚುನಾವನೆಯ ಸಮಯದಲ್ಲಿ ಹಿಂದುತ್ವದ ನಾಯಕರಾಗಿರದೆ ಅವರು ಸದಾ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿರುವ ಅರುಣ್ ಪುತ್ತಿಲರವರ ನಾಯಕತ್ವ ಹಿಂದು ಸಮಾಜಕ್ಕೆ ಆವಶ್ಯಕವಾಗಿರುವುದನ್ನು ಜನ ಮನಗಂಡಿದ್ದಾರೆ. ಅವರ ನಿರ್ಧಾರಗಳು ವೈಯಕ್ತಿಕವಾಗಿರದೆ ಹಿಂದು ಸಮಾಜಕ್ಕೆ ಪೂರಕವಾಗಿದೆ. ಹೀಗಾಗಿ ಪುತ್ತಿಲ ಪರಿವಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಮ್ಮ ಬೆಂಬಲ, ಸಹಕಾರವಿದೆ. ಪುತ್ತಿಲ ಪರಿವಾರಕ್ಕೆ ನಮ್ಮೆಲ್ಲರ ಬೆಂಬಲ ಅಚಲ ಎಂದು ಡಾ.ಸುರೇಶ್ ಪುತ್ತೂರಾಯ ಹೇಳಿದರು.ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ, ಸಂಪ್ಯ ನವಚೇತನಾ ಯುವಕ ಮಂಡಲದ ನಾಗೇಶ್ ಸಂಪ್ಯ, ಮೊಟ್ಟೆತ್ತಡ್ಕ ಐಕ್ಯ ಕಲಾ ಟ್ರಸ್ಟ್ ನ ದಕ್ಷಿತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೈದ್ಯರಿಗೆ ಗೌರವಾರ್ಪಣೆ:
ವೈದ್ಯರ ದಿನಾಚರಣೆಯ ಅಂಗವಾಗಿ ದೇವಸ್ಥಾನದ ವೈದ್ಯಕೀಯ ಶಿಬಿರದ ನೇತಾರ ಡಾ.ಸುರೇಶ್ ಪುತ್ತೂರಾಯ, ವೈದ್ಯರಾದ ಡಾ.ಅರ್ಚನಾ, ಡಾ.ಸಮೀರ್ ಕೃಷ್ಣಾ, ಡಾ.ವೇಣುಗೋಪಾಲ, ಡಾ.ಅಶ್ವಿನ್ ಆಳ್ವ, ಡಾ.ಯಶ್ಮೀ, ಡಾ.ಸಾಯಿಪ್ರಕಾಶ್, ಡಾ.ಪ್ರೀತಿರಾಜ್ ಬಲ್ಲಾಳ್, ಡಾ.ಸಚಿನ್ ಶಂಕರ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಶಿಕಲಾ ನಿರಂಜನ ಶೆಟ್ಟಿ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವಂದಿಸಿದರು.
ಶಿಬಿರದಲ್ಲಿ ತಜ್ಞರಿಂದ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಇಎನ್‌ಟಿ, ವೈದ್ಯಕೀಯ ತಪಾಸಣೆ, ಉದರ ಚಿಕಿತ್ಸಾ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ದಂತ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ, ಶ್ವಾಸಕೋಶದ ಪರೀಕ್ಷೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಯಿತು. ತಜ್ಞ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಡಾ. ಸಮೀರ್ ಕೃಷ್ಣ, ಕೀಲು ಮತ್ತು ಎಲುಬು ತಜ್ಞ ಡಾ. ಸಚಿನ್ ಶಂಕರ್ ಹಾರಕೆರೆ, ಇಎನ್‌ಟಿ ತಜ್ಞೆ ಡಾ. ಅರ್ಚನಾ, ಎಂಡೋಸ್ಕೋಪಿ, ಉದರ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಅಶ್ವಿನ್ ಆಳ್ವ, ದಂತ ಚಿಕಿತ್ಸಾ ತಜ್ಞೆ ಡಾ. ಯಶ್ಮಿ, ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್, ಆಯುರ್ವೇದ ತಜ್ಞರಾದ ಡಾ. ವೇಣು ಗೋಪಾಲ್, ಡಾ. ಸಾಯಿ ಪ್ರಕಾಶ್ ಹಾಗೂ ಡಾ.ದೀಕ್ಷಾರವರು ಶಿಬಿದರಲ್ಲಿ ಚಿಕಿತ್ಸೆ ಹಾಗೂ ತಪಾಸಣೆಗಳನ್ನು ನಡೆಸಿಕೊಟ್ಟರು.