ಪುತ್ತೂರು: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಪಡುಬೆಟ್ಟು ನೆಲ್ಯಾಡಿ ಇದರ ವತಿಯಿಂದ ಶಾಂತಿಗೋಡು ಪುಂಡಿಕಾ ಗೋಪಾಲಕೃಷ್ಣ ಶಗ್ರಿತ್ತಾಯ ಹಾಗೂ ಜಾನಕಿ ಅಮ್ಮನವರ ಸಂಸ್ಮರಣೆ, ಯಕ್ಷಗಾನ ತಾಳಮದ್ದಳೆ, ಬಯಲಾಟ ಜು.9ರಂದು ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಷ್ಣು ಮಂಟಪದಲ್ಲಿ ನಡೆಯಿತು.
ಮಧ್ಯಾಹ್ನ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ, ಶಗ್ರಿತ್ತಾಯರು ಒಬ್ಬ ಕರ್ಮ ಜೀವಿ, ಚಲನಶೀಲ ವ್ಯಕ್ತಿತ್ವದವರು. ಅವರ ಮನೆಯೇ ಯಕ್ಷಗಾನದ ಮನೆ. ಅವರೊಬ್ಬ ಶಿಕ್ಷಕ, ಕವಿ, ಸಾಹಿತಿ, ಕಲಾವಿದ, ಸಂಘಟಕ ಎಂದು ಬಣ್ಣಿಸಿದರು. ಸಂಸ್ಮರಣಾ ಭಾಷಣ ಮಾಡಿದ ಶಗ್ರಿತ್ತಾಯರ ಶಿಷ್ಯ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯರವರು, ಶಗ್ರಿತ್ತಾಯರು ಓರ್ವ ಉತ್ತಮ ನಾಟಕ ಕಲಾವಿದ, ಯಕ್ಷಗಾನದ ಉತ್ತಮ ಅರ್ಥದಾರಿ. ಪಡುಬೆಟ್ಟಿನಲ್ಲಿ ಅವರು ಶಿಕ್ಷಕರಾಗಿರುವಾಗ ಹಿಮ್ಮೇಳ, ಮುಮ್ಮೇಳದಲ್ಲೂ ಮಕ್ಕಳೇ ಇದ್ದ ಮಕ್ಕಳ ಯಕ್ಷಗಾನ ತಂಡ ಕಟ್ಟಿ ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದರು. ವಿದ್ಯಾರ್ಥಿಗಳ ಪ್ರತಿಭೆಗೆ ನೀರೆರೆದು ಪೋಷಿಸಿದವರು. ಅವರ ಮಕ್ಕಳೆಲ್ಲರೂ ಯಕ್ಷಗಾನ ಕಲಾವಿದರು ಆಗಿರುತ್ತಾರೆ. ಇಂತಹ ಅಪ್ರತಿಮ ವ್ಯಕ್ತಿತ್ವದ ಅವರ ಕಾಯ ಮಾತ್ರ ಅಳಿದಿದೆ. ಕಾಯಕ ಉಳಿದಿದೆ. ಅವರಿಗೆ ಸಾಯುಜ್ಯ ದೊರೆಯಲಿ ಎಂದು ನುಡಿ ನಮನ ಸಲ್ಲಿಸಿದರು.
ನಿವೃತ್ತ ಪ್ರಾಧ್ಯಾಪಕ ವಿ.ಬಿ ಅರ್ತಿಕಜೆ, ವಿಷ್ಣುಮೂರ್ತಿ ಭಟ್ ಕುತ್ಯಾರು, ಅವಿನಾಶ್ ಕೊಡೆಂಕಿರಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರತಿಷ್ಠಾನದ ವತಯಿಂದ ಖ್ಯಾತ ಭಾಗವತರಾದ ವೆಂಕಟೇಶ್ ಬಾಳ್ತಿಲ್ಲಾಯ ಕೊಕ್ಕಡರವರನ್ನು ಸನ್ಮಾನಿಸಿ ಗೌರವಿಸಲಾಯ್ತು. ಸನ್ಮಾನ ಪತ್ರವನ್ನು ಜ್ಯೋತಿ ಪ್ರದೀಪ್ ವಾಚಿಸಿದರು. ಮೃತರ ಪುತ್ರ ಸುಬ್ರಹ್ಮಣ್ಯ ಶಗ್ರಿತ್ತಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಟುಂಬ ಸದಸ್ಯರಾದ ಜಯಶ್ರೀ, ಉಮಾದೇವಿ, ಸರಸ್ವತಿ ಶಗ್ರಿತ್ತಾಯ, ಶೀಲಾವತಿ, ಕು| ಸುಜನ್, ಶರಧಿ, ಅಮೃತಾಂಶು, ಪದ್ಮನಾಭ ಮುಚ್ಚಿಂತ್ತಾಯ, ಸೌಜನ್ಯ, ಜಿ.ಸುಬ್ರಹ್ಮಣ್ಯ, ಗೋಪಾಲ ಉಡುಪ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಗ್ರಿತ್ತಾಯರ ಹಿರಿಯ ಪುತ್ರ ಗುರುಮೂರ್ತಿ ಶಗ್ರಿತ್ತಾಯ ವಂದಿಸಿದರು. ರಾಧೇಶ್ ತೋಳ್ಪಾಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ತಾಳಮದ್ದಳೆ/ಬಯಲಾಟ:
ಸಂಸ್ಮರಣಾ ಸಭೆಯ ಮೊದಲು ಪಡುಬೆಟ್ಟು ಮಕ್ಕಳ ಮೇಳದ ಕಲಾವಿದರು ಹಾಗೂ ಹಿತೈಷಿಗಳಿಂದ ಶ್ರೀರಾಮ ನಿರ್ಯಾಣ ತಾಳಮದ್ದಳೆ ನಡೆಯಿತು. ಸಭೆಯ ಬಳಿಕ ಕರ್ಮಬಂಧ ತಾಳಮದ್ದಳೆ ಸಂಪನ್ನಗೊಂಡಿತು. ಸಂಜೆ ಗಂಟೆ 6 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಿತು.