ಬಿ ಸಿ ರೋಡು ಕೈಕಂಬದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ – ಓರ್ವನಿಗೆ ಗಾಯ – ಲಘು ಲಾಠಿ ಪ್ರಹಾರ

0

ಮಂಗಳೂರು (ಬಿ ಸಿ ರೋಡು): ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಸಮುದಾಯದ ರಿಕ್ಷಾ ಚಾಲಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು , ಗಲಾಟೆಯನ್ನು ಬಿಡಿಸಲು ಸ್ಥಳಕ್ಕೆ ಬಂದಿದ್ದ ಸ್ಥಳೀಯ ಮುಖಂಡರೊಬ್ಬರಿಗೆ ಗಾಯವಾಗಿದ್ದು, ಸ್ಥಳದಲ್ಲಿ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದ ಘಟನೆ ಬಿ ಸಿ ರೋಡಿನ ಕೈಕಂಬದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬಿ ಸಿ ರೋಡಿನ ಕೈಕಂಬದಲ್ಲಿ ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಈ ಪೈಕಿ ಓರ್ವ ರಿಕ್ಷಾ ಯೂನಿಯನ್ ನ ಮುಖಂಡನ
ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರತಿಯಾಗಿ ಹಲ್ಲೆಗೊಳಗಾದ ವ್ಯಕ್ತಿಯ ಪರವಾಗಿ ಕೆಲವು ಮಂದಿ ಸೇರಿ ಗುಂಪು ಹಲ್ಲೆ ನಡೆಸಲು ಮುಂದಾದಾಗ, ಮತ್ತೋರ್ವನ ಪರವಾಗಿ ಜನ ಜಮಾಯಿಸಿ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸ್ಥಳೀಯ ಪುರಸಭಾ ಸದಸ್ಯ ಹಸೈನಾರ್ ಗುಂಪಿನ ಮಧ್ಯಪ್ರವೇಶಿಸಿದ್ದು ಈ ಸಂದರ್ಭ ಅವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪುರಸಭಾ ಸದಸ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಎರಡು ಗುಂಪುಗಳನ್ನು ಲಾಠಿ ಬೀಸಿ, ಜನರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಎರಡು ಗುಂಪಿನ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳದಲ್ಲಿ ಮೊಕ್ಕಾo ಹೂಡಿದ್ದಾರೆ. ಈ ಬಗ್ಗೆ ಇದುವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

LEAVE A REPLY

Please enter your comment!
Please enter your name here