ವಿಟ್ಲ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಎಸ್.ಐ. ಆಗಿ ವಿದ್ಯಾ ಕೆ.ಜೆ, ಒಂದನೇ ತನಿಖಾಧಿಕಾರಿಯಾಗಿ ರತ್ನಕುಮಾರ್ ಎಂ. ಕರ್ತವ್ಯಕ್ಕೆ ಹಾಜರು

0

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಸ್.ಐ. ಆಗಿ ವಿದ್ಯಾ ಕೆ.ಜೆ. ಹಾಗೂ ಒಂದನೇ ತನಿಖಾಧಿಕಾರಿಯ ಸ್ಥಾನಕ್ಕೆ ರತ್ನಕುಮಾರ್ ರವರನ್ನು ನೇಮಕಮಾಡಲಾಗಿದ್ದು, ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ವಿದ್ಯಾ ಕೆ.ಜೆ. ರವರು 2020ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ನಗರ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಎಸ್.ಐ. ಆಗಿದ್ದ ಅವರು ಇದೀಗ ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದು ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಸ್.ಐ. ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವಿದ್ಯಾ ಕೆ.ಜಿ.ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನವರಾಗಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ತೆರವಾಗಿದ್ದ ಒಂದನೇ ತನಿಖಾಧಿಕಾರಿ ಸ್ಥಾನಕ್ಕೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿದ್ದ ರತ್ನಕುಮಾರ್ ಎಂ. ರವರನ್ನು ನೇಮಕ ಮಾಡಲಾಗಿದೆ. ರತ್ನಕುಮಾರ್ ರವರು 1992ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡರು. ಆ ಬಳಿಕ ಹೆಡ್ ಕಾನ್ಸ್ ಟೇಬಲ್ ಆಗಿ ಪುತ್ತೂರು ಅರಣ್ಯ ಸಂಚಾರಿದಳಕ್ಕೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಪುತ್ತೂರು ನಗರ, ವಿಟ್ಲ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಎ.ಎಸ್.ಐ. ಆಗಿ ಭಡ್ತಿಗೊಂಡು ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಅಲ್ಲಿಂದ ಎಸ್.ಐ. ಆಗಿ ಭಡ್ತಿಹೊಂದಿ ಬಂಟ್ವಾಳ ಠಾಣೆಗೆ ವರ್ಗಾವಣೆ ಗೊಂಡಿದ್ದರು. ಆ ಬಳಿಕ ಉಪ್ಪಿನಂಗಡಿ, ಸುಳ್ಯ ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿ ಇದೀಗ ವಿಟ್ಲ ಪೊಲೀಸ್ ಠಾಣೆಯ ಒಂದನೇ ತನಿಖಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರತ್ನಕುಮಾರ್ ರವರು ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿದ್ದಾರೆ. ಈ ಹಿಂದೆ ವಿಟ್ಲ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಸ್.ಐ. ಆಗಿದ್ದ ಸಂದೀಪ್ ಶೆಟ್ಟಿಯವರನ್ನು ಕಾರ್ಕಳ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು. ಠಾಣೆಯ ಒಂದನೇ ತನಿಖಾಧಿಕಾರಿಯಾಗಿದ್ದ ರುಕ್ಮ ನಾಯ್ಕರವರನ್ನು ಉಪ್ಪಿನಂಗಡಿ ಠಾಣೆಗೆ ವರ್ಗಾಯಿಸಲಾಗಿತ್ತು. ಇದೀಗ ತೆರವಾಗಿದ್ದ ಸ್ಥಾನಕ್ಕೆ ಇವರಿಬ್ಬರನ್ನು ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here