ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಳಲುವಾದನ ಮತ್ತು ಕೀಬೋರ್ಡ್ ತರಗತಿಯನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಸಾಯಿರಾಂ ರವರು ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ನಮ್ಮ ಸಂಸ್ಥೆಯಲ್ಲಿ ಭರತನಾಟ್ಯ, ಸಂಗೀತ, ಯಕ್ಷಗಾನ ಮುಂತಾದ ತರಗತಿಗಳು ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದಿಂದ ಕೀಬೋರ್ಡ್ ಮತ್ತು ಕೊಳಲುವಾದನ ತರಗತಿಯನ್ನು ಆರಂಭಿಸಿದ್ದೇವೆ. ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾನ್ವಿತ ವ್ಯಕ್ತಿಯಾಗಬೇಕೆಂದು ಹೇಳಿದರು. ಕೊಳಲುವಾದನ ತರಬೇತುದಾರರಾದ ಶ್ರೀಪತಿ ರಾವ್ ಹಾಗೂ ಕೀಬೋರ್ಡ್ ತರಬೇತುದಾರರಾದ ವಿಶ್ವನಾಥ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್ ವಂದಿಸಿದರು. ಸಹಶಿಕ್ಷಕ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.