ನೆಲ್ಯಾಡಿ: ಶಾಲಾ ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಪ್ರಾಮಾಣಿಕತೆಯನ್ನು ಬೆಳೆಸುವ ಹಾಗೂ ಗಣಿತದ ಮೂಲ ಪರಿಕಲ್ಪನೆ ಮತ್ತು ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ‘ಮಕ್ಕಳ ಪ್ರಾಮಾಣಿಕತೆಯ ಕೈ ಗನ್ನಡಿ’ ಎಂಬ ಶಿರ್ಷಿಕೆಯಡಿಯಲ್ಲಿ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಆರಂಭಿಸಿರುವ ‘ಹೋನೆಸ್ಟಿ ಶಾಪ್’ ಅನ್ನು ಉದ್ಘಾಟಿಸಲಾಯಿತು.
ಉದ್ಯಮಿ, ಶಾಲಾ ದಾನಿ ರಂಜಿತ್‌ಕುಮಾರ್ ಜೈನ್ ಶಾಂತಿಮಾರು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳೇ ತಮಗೆ ಬೇಕಾದ ಲೇಖನಿ ಸಾಮಾಗ್ರಿಗಳನ್ನು ಪಡೆದು ಅದಕ್ಕೆ ಸಂಬಂಧಿಸಿದ ಬೆಲೆಯ ಮೊತ್ತವನ್ನು ಡಬ್ಬಕ್ಕೆ ಹಾಕಬೇಕು. ಗ್ರಾಹಕನೇ ಮಾರಾಟಗಾರ ಎಂಬ ಕಲ್ಪನೆಯಡಿಯಲ್ಲಿ ಇದು ಮಕ್ಕಳಿಗೆ ಸತ್ಯ, ಪ್ರಾಮಾಣಿಕತೆ ಹಾಗೂ ವ್ಯವಹಾರ ಜ್ಞಾನವನ್ನು ಬೆಳೆಸಲು ಪೂರಕವಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಉಪಾಧ್ಯಕ್ಷೆ ಮೀನಾಕ್ಷಿ ಬಾಂಕೋಡಿ, ಸದಸ್ಯೆ ವಾರಿಜ, ಶಿಕ್ಷಕರಾದ ಮಂಜುನಾಥ ಮಣಕವಾಡ, ವೀಕ್ಷಿತಾ, ತಾರಾ, ಪ್ರಮೀಳಾ, ರೀತಾಕ್ಷಿ, ಅಡುಗೆ ಸಿಬ್ಬಂದಿಗಳಾದ ಮೀನಾಕ್ಷಿ, ಭವಾನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.