ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಇದರ ವತಿಯಿಂದ ಆಟಿ ಆಚರಣೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ಆ.3ರಂದು ನೆಲ್ಲಿಕಟ್ಟೆ ಮಾತೃಛಾಯಾ ಸಭಾಭವನದಲ್ಲಿ ನಡೆಯಿತು. ಸಾಹಿತಿ, ಸುದ್ದಿ ಬಿಡುಗಡೆ ಪತ್ರಿಕೆ ಅಂಕಣಕಾರ ಹಾಗೂ ಮಧುಪ್ರಪಂಚ ಮಾಸ ಪತ್ರಿಕೆ ಪ್ರಧಾನ ಸಂಪಾದಕ ನಾರಾಯಣ ಕುಕ್ಕುವಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳಿನ ಕಷ್ಟದ ದಿನಗಳು, ಹಾಗೂ ಆಚರಣೆಯ ಮಹತ್ವ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ, ಸಂಘದ ವತಿಯಿಂದ ನಡೆಸಲಾಗುವ ಕಾರ್ಯಗಳನ್ನು ತಿಳಿಸಿದರು.
ಸನ್ಮಾನ: ಸಂಘದ ವತಿಯಿಂದ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಜಾನಪದ ಕಲಾವಿದ ಹರೀಶ್ ಅರಿಯಡ್ಕ, ಸಂಘದ ಮಾಜಿ ಉಪಾಧ್ಯಕ್ಷೆ ಶೈಲಜಾರವರ ಪುತ್ರ, ಕ್ಯಾಂಪಸ್ ಆಯ್ಕೆಯಲ್ಲಿ ಅಮೂಲ್ ಕಂಪೆನಿಗೆ ನೇಮಕಾತಿ ಹೊಂದಿದ ಆದೀಶ್ ಹಾಗೂ ಸಂಘದ ಸದಸ್ಯೆ ವೇದಾವತಿರವರ ಪುತ್ರಿ ಕ್ಯಾಂಪಸ್ ಆಯ್ಕೆಯಲ್ಲಿ ಟಿಸಿಎಸ್ ಕಂಪೆನಿಗೆ ನೇಮಕಾತಿ ಹೊಂದಿದ ದೀಕ್ಷರಾವರಿಗೆ ಸಂಘದ ವತಿಯಿಂದ ಶಾಲು, ಹಾರ, ಸ್ಮರಣೀಕೆ ನೀಡಿ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಿಗೆ ಸದಸ್ಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಪಾರ, ಕೋಶಾಧಿಕಾರಿ ರಕ್ಷಿತಾ ಎಚ್. ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ಷಿತಾ, ದೀಕ್ಷಾ, ಚಿತ್ರಾಂಗಿಣಿ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ರೈ ಕೋಡಂಬು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಪ್ರಜ್ವಲ್ ಪುತ್ತೂರು ವಂದಿಸಿದರು. ಮಾಜಿ ಉಪಾಧ್ಯಕ್ಷೆ ಶೈಲಜಾ ಸುದೇಶ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿ ಮಾಜಿ ಅಧ್ಯಕ್ಷ ಯೂಸುಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.