ವರ್ತಕರು ಇಲ್ಲದೆ ರಾಜ್ಯಭಾರ ಸಾಧ್ಯವಿಲ್ಲ, ವರ್ತಕರು ದೇಶದ ಆಸ್ತಿ: ಅಶೋಕ್ ರೈ
ಪುತ್ತೂರು: ವರ್ತಕರು ಯಾರೇ ಇರಬಹುದು ಅದರಲ್ಲಿ ಸಣ್ಣ ವರ್ತಕ, ದೊಡ್ಡ ವರ್ತಕ ಎಂಬ ವ್ಯತ್ಯಾಸ ಇಲ್ಲ. ಒಟ್ಟಾರೆಯಾಗಿ ಹೇಳಬೇಕಾದರೆ ವರ್ತಕರು ಈ ದೇಶದ ಆಸ್ತಿಯಾಗಿದ್ದಾರೆ. ವರ್ತಕರು ಇಲ್ಲದೇ ರಾಜ್ಯಭಾರ ಮಾಡಲು ಸಾಧ್ಯವೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.
ಅವರು ಕುಂಬ್ರ ವರ್ತಕರ ಸಂಘದ ವತಿಯಿಂದ ಆ.6ರಂದು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆದ ವರ್ತಕ ಸ್ನೇಹ ಸಂಜೆ, ಸಾಧಕರಿಗೆ ಸನ್ಮಾನ ಹಾಗೂ ವಿಠಲ ನಾಯಕ್ ಕಲ್ಲಡ್ಕರವರ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವೆಲ್ಲರೂ ತೆರಿಗೆ ಪಾವತಿದಾರರಾಗಿದ್ದೇವೆ. ಅದರಲ್ಲೂ ವರ್ತಕರು ಅತೀ ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ. ದೇಶ ನಾವು ಕಟ್ಟುವ ತೆರಿಗೆಯಿಂದಲೇ ನಡೆಯುತ್ತಿದೆ ಎಂದ ಶಾಸಕರು, ನಾವು ಕಟ್ಟಿದ ತೆರಿಗೆಯಿಂದ ರಾಜಕೀಯ ನಾಯಕರು ರಾಜ್ಯಭಾರ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣವನ್ನೇ ನಮ್ಮ ಊರಿನ ಅಭಿವೃದ್ಧಿಗೆ ಕೊಡುತ್ತಿದ್ದಾರೆ ವಿನಹ ರಾಜಕೀಯ ನಾಯಕರ ಮನೆಯಿಂದ ತಂದು ಕೊಡುತ್ತಿಲ್ಲ ಎಂದು ಅಶೋಕ್ ರೈ ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉದ್ಯಮಿ, ಕೊಡುಗೈ ದಾನಿ ಮಾತೃಶ್ರೀ ಅರ್ಥ್‌ಮೂವರ‍್ಸ್ ಮಾಲಕ ಮೋಹನ್‌ದಾಸ ರೈ ಕುಂಬ್ರರವರು ಮಾತನಾಡಿ, ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಕುಂಬ್ರ ವರ್ತಕರ ಸಂಘ ಮುಂದಿನ ದಿನಗಳಲ್ಲಿ ತಾಲೂಕಿನಲ್ಲೇ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಗ್ರಾಹಕರ ಹಾಗೂ ಸಾರ್ವಜನಿಕರ ನೋವು ನಲಿವಿನಲ್ಲಿ ಕುಂಬ್ರ ವರ್ತಕರ ಸಂಘ ಪಾಲ್ಗೊಳ್ಳುವ ರೀತಿ ಬಹಳ ಉತ್ತಮವಾಗಿದೆ, ಮುಂದೆಯೂ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು. ಉದ್ಯಮಿ, ಬೂಡಿಯಾರ್ ಗ್ಯಾಸ್ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಸಮಾಜಮುಖಿ ಚಿಂತನೆಯೊಂದಿಗೆ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವರ್ತಕರ ಸಂಘದಿಂದ ಇನ್ನಷ್ಟು ಉತ್ತಮ ಕಾರ್ಯಗಳು ಮೂಡಿಬರಲಿ ಎಂದರು.
ಸಂಘದ ಗೌರವ ಸಲಹೆಗಾರರಾದ ಪಿ.ಎಂ.ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ, ಸನ್ಮಾನ ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ವರ್ತಕರ ಸಂಘದ ಒಂದು ಕಾರ್ಯ ಇದಾಗಿದೆ ಎಂದರು. ಚಂದ್ರಕಾಂತ ಶಾಂತಿವನ ಮಾತನಾಡಿ, ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ವರ್ತಕರ ಸಂಘಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಸಂದರ್ಭೋತವಾಗಿ ಮಾತನಾಡಿ, ಸಂಘದ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದವರ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಸಂಘ ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು. ಸನ್ನಿಧಿ ಪ್ರಾರ್ಥಿಸಿದರು. ವರ್ತಕರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ, ಎಸ್.ಮಾಧವ ರೈ ಕುಂಬ್ರ, ಪದಾಧಿಕಾರಿಗಳಾದ ಮಹಮ್ಮದ್ ಹನೀಫ್, ರಮೇಶ್ ಆಳ್ವ ಕಲ್ಲಡ್ಕ, ರಾಜೇಶ್ ರೈ ಪರ್ಪುಂಜ, ಉದಯ ಆಚಾರ್ಯ ಕೃಷ್ಣನಗರ, ಬಾಬು ಪೂಜಾರಿ ಬಡಕ್ಕೋಡಿ, ಜಯರಾಮ ಆಚಾರ್ಯ, ರೇಷ್ಮಾ ಮೆಲ್ವಿನ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸಹಕರಿಸಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಪದಾಧಿಕಾರಿಗಳು ಸಹಕರಿಸಿದ್ದರು.
ಸಾಧಕರಿಗೆ ಸನ್ಮಾನ
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಕಂಪೌಂಡರ್ ನರಸಿಂಹ ಭಟ್ ಪುತ್ತೂರು, ಕುಶಲಕರ್ಮಿ ಸುಂದರಿ ಆಚಾರಿ, ಕುಂಬ್ರ ಮೆಸ್ಕಾಂ ಪವರ್‌ಮ್ಯಾನ್ ಚಂದ್ರಶೇಖರ ಬಿ.ಜೆ, ನಂದಿನಿ ಹಾಲು ಮಾರಾಟದಲ್ಲಿ ಪ್ರಥಮ ಸ್ಥಾನ ಪಡೆದ ವರ್ತಕರ ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.93 ಅಂಕ ಪಡೆದ ಅನುಷ್ ರೈರವರುಗಳನ್ನು ಹಾರ, ಶಾಲು ಹಾಕಿ, ಪೇಟಾ ತೊಡಿಸಿ, ಫಲಪುಷ್ಪ ಸ್ಮರಣಿಕೆ ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಬಗ್ಗೆ ವರ್ತಕರ ಸಂಘದ ಪದಾಧಿಕಾರಿಗಳಾದ ರಮೇಶ್ ಆಳ್ವ ಕಲ್ಲಡ್ಕ, ಚರಿತ್ ಕುಮಾರ್, ನಾರಾಯಣ ಪೂಜಾರಿ ಕುರಿಕ್ಕಾರ, ರಮ್ಯಶ್ರೀ, ಶಶಿಕಾಂತ್ ಮಿತ್ತೂರು ಪರಿಚಯ ಮಾಡಿದರು. ಸನ್ಮಾನಿತರ ಪರವಾಗಿ ನರಸಿಂಹ ಭಟ್ಟರ ತಮ್ಮನ ಮಗ ಪ್ರಶಾಂತ್‌ರವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಶಾಲೆ,ಕಾಲೇಜುಗಳಿಗೆ ತೆರಳಿ ತನ್ನ ಸ್ವಂತ ಹಣದಿಂದ ಬೆಂಚು ಡೆಸ್ಕು ರಿಪೇರಿ ಮಾಡಿಕೊಡುತ್ತಿರುವ ಚಿನ್ನಯ ಆಚಾರ್ಯರವರನ್ನು ಹೂ ಕೊಟ್ಟು ಗೌರವಿಸಲಾಯಿತು. ನೂತನವಾಗಿ ಆಯ್ಕೆಯಾದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ವರ್ತಕರ ಸಂಘದಿಂದ ಶಾಲು,ಪೇಟಾ,ಹೂಗುಚ್ಛ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವರ್ತಕರಿಗೆ ಆರೋಗ್ಯ ವಿಮೆ ಸೌಲಭ್ಯ ಸರಕಾರ ಕೊಡಬೇಕು:
ನಾನೂ ಒಬ್ಬ ವರ್ತಕನಾಗಿದ್ದೇನೆ ಎಂದ ಶಾಸಕರು, ಸಾರ್ವಜನಿಕರು ಹಾಗೂ ವರ್ತಕರು ಕಟ್ಟುವ ತೆರಿಗೆ ಹಣದಿಂದಲೇ ರಾಜ್ಯಭಾರ ನಡೆಯುತ್ತಿದೆ ಎಂದ ಮೇಲೆ ವರ್ತಕರಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ತರಬೇಕಾಗಿದೆ ಅದರಲ್ಲೂ ಕನಿಷ್ಠ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ವರ್ತಕರಿಗೆ ಆರೋಗ್ಯ ವಿಮೆಯನ್ನಾದರೂ ಮಾಡಿಕೊಡಬೇಕು ಈ ಬಗ್ಗೆ ಕೇಂದ್ರ ಸರಕಾರ ಚಿಂತನೆ ಮಾಡಬೇಕಾಗಿದೆ ಎಂದರು.
ಕುಂಬ್ರಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು-ಮನವಿ ಅರ್ಪಣೆ
ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಅತೀ ಅವಶ್ಯಕವಾಗಿರುವ ಪದವಿ ಕಾಲೇಜು ಅನ್ನು ಮಂಜೂರು ಮಾಡುವಂತೆ ವರ್ತಕರ ಸಂಘದ ವತಿಯಿಂದ ಶಾಸಕರಿಗೆ ಮನವಿಯನ್ನು ಅರ್ಪಿಸಲಾಯಿತು. ಸುಳ್ಯ, ಬೆಳ್ಳಾರೆ, ಪಾಣಾಜೆ, ಪುತ್ತೂರು ಈ ಪ್ರದೇಶದ ಹೃದಯಭಾಗದಲ್ಲಿರುವ ಕುಂಬ್ರಕ್ಕೆ ಡಿಗ್ರಿ ಕಾಲೇಜಿನ ಅವಶ್ಯಕತೆ ಇದೆ, ಹತ್ತಿರದಲ್ಲಿ ಎಲ್ಲಿಯೂ ಪದವಿ ಕಾಲೇಜು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಪಿಯುಸಿಯಲ್ಲೇ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಕುಂಬ್ರದಲ್ಲಿ ಪದವಿ ಕಾಲೇಜು ಮಾಡಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ವರ್ತಕರ ಸಂಘದ ಮನವಿಯಲ್ಲಿ ತಿಳಿಸಲಾಗಿತ್ತು. ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ವಿಷಯ ಪ್ರಸ್ತಾಪಿಸಿ ಶಾಸಕರಿಗೆ ಮನವಿ ಅರ್ಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಶಾಲೆಗಳನ್ನು ಹೆಚ್ಚಿಸುವ ಬದಲು ಇರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೊಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಕುಂಬ್ರಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮನರಂಜಿಸಿದ ‘ಗೀತಾ ಸಾಹಿತ್ಯ ಸಂಭ್ರಮ’
ಸಭಾ ಕಾರ್ಯಕ್ರಮ ಮುಗಿದ ಬಳಿಕ ರಾಜ್ಯ,ದೇಶ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದ ವಿಠಲ ನಾಯಕ್ ಕಲ್ಲಡ್ಕ ಬಳಗದವರು ನಡೆಸಿಕೊಡುವ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿಠಲ ನಾಯಕ್‌ರವರು ತಮ್ಮ ಹಾಸ್ಯದಿಂದ ಜನರಿಗೆ ಜ್ಞಾನದ ಸಿಂಚನವನ್ನು ಉಣಬಡಿಸಿದರು. ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು.
‘ 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕುಂಬ್ರ ವರ್ತಕರ ಸಂಘವು ಗ್ರಾಹಕರ ಹಾಗೂ ವರ್ತಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡುತ್ತಾ ಬರುತ್ತಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸಹಕರಿಸಿದ ಸರ್ವರಿಗೂ ವಂದನೆಗಳು, ಮುಂದೆಯೂ ಸರ್ವರ ಸಹಕಾರ ಬಯಸುತ್ತೇವೆ.’
- ರಫೀಕ್ ಅಲ್‌ರಾಯ,
ಅಧ್ಯಕ್ಷರು ವರ್ತಕರ ಸಂಘದ ಕುಂಬ್ರ