ಒಡಿಯೂರು ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವ ಸಂಭ್ರಮ,ಗುರುವಂದನಾ – ಸೇವಾ ಸಂಭ್ರಮ

0

ಸಾಧಕರಿಗೆ ಧಾನಸಿರಿ, ವಿದ್ಯಾಸಿರಿ, ಗಾನಸಿರಿ, ಸೇವಾಸಿರಿ ಬಿರುದು ಪ್ರಧಾನ
ಜನ್ಮದಿನೋತ್ಸವದ ಆಚರಣೆ ರಾಷ್ಟ್ರೋತ್ತಾನಕ್ಕೆ ಮುನ್ನುಡಿ: ಒಡಿಯೂರು ಶ್ರೀ

ವಿಟ್ಲ: ತಾನು ಯಾರೆಂದು ಅರಿತು ಬಾಳಿದಾಗ ಅದು ನಿಜವಾದ ಬದುಕಾಗುತ್ತದೆ. ನಮ್ಮೊಳಗಿನ ಕೆಟ್ಟದ್ದನ್ನು ಬಿಡಬೇಕು. ಸಮಾಜನ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವ ಕೆಲಸವಾಗಬೇಕು. ಹಿರಿಯರಿಗೆ ಗೌರವ ಕೊಡುವ ಮನಸ್ಸು ನಮ್ಮದಾಗಬೇಕು. ಸನಾತನವನ್ನು ಮರೆಯದಿರೋಣ. ಹಿರಿಯರನ್ನು ಮರೆತರೆ ಅಪಾಯ ಖಂಡಿತ. ಜನ್ಮದಿನೋತ್ಸವದ ಆಚರಣೆ ರಾಷ್ಟ್ರೋತ್ತಾನಕ್ಕೆ ಮುನ್ನುಡಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಆ.೮ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ 2023 ಗುರುವಂದನ-ಸೇವಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬದುಕುವ – ಬದುಕ ಬಿಡುವ ಎನ್ನುವ ವಿಚಾರ ಗ್ರಾಮೋತ್ಸವದಲ್ಲಿ ಅಡಗಿದೆ. ಸಮಾಜದ ಹಿತದೃಷ್ಟಿಯಿಂದ ಜನ್ಮದಿನೋತ್ಸವವನ್ನು ಆಚರಿಸುವಂತದ್ದು, ಒಂದಷ್ಟು ಜನಗಳಿಗೆ ಸೇವಾರೂಪದಲ್ಲಿ ಜನಪರವಾಗಿ ಕಾರ್ಯಗಳನ್ನು ಮಾಡಲು ಅನುಕೂಲವಾಗುವ ರೀತಿಯಲ್ಲಿ ಈ ಜನ್ಮದಿನವನ್ನು ಆಚರಿಸಲಾಗುತ್ತಿದೆ. ನಿಜವಾಗಿ ಸಂತನಿಗೆ ಜನ್ಮದಿನೋತ್ಸವದ ಅಗತ್ಯತೆ ಇಲ್ಲ. ಸಮಾಜದಿಂದ ಸಮಾಜಕ್ಕೆ ಎನ್ನುವ ಸೇವಾ ರೂಪದ ಕಾರ್ಯ ನಡೆದು ಬರುವ ವಿಷಯವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಬದುಕುವ ಬದುಕ ಬಿಡುವ ಎನ್ನುವ ವಿಚಾರ ಗ್ರಾಮೋತ್ಸವದಲ್ಲಿ ಅಡಗಿದೆ.
ಆತ್ಮ – ಜ್ಞಾನದ ಸಂಪಾದನೆ ಆಗಬೇಕಿದೆ. ಧಾನ ಮಾಡಿದಾಗ ಧನದ ಮೌಲ್ಯ ಹೆಚ್ಚುತ್ತದೆ. ತ್ಯಾಗ ಮತ್ತು ಸೇವೆ ನಮ್ಮೊಳಗಿರಬೇಕು. ಅಹಂಕಾರ ಮಮಕಾರವನ್ನು ತ್ಯಾಗಮಾಡುವುದೇ ನಿಜವಾದ ತ್ಯಾಗ. ಸಮಾಜದಲ್ಲಿ ನಡೆಯುವ ಪೈಶಾಚಿಕ ಕೃತ್ಯದಿಂದ ಶಾಂತಿ ಭಂಗವುಂಟಾಗುತ್ತಿದೆ. ಲಾಭದಲ್ಲಿ ಆರೋಗ್ಯ ಲಾಭ ವಿಶೇಷವಾದುದು. ಸಮಾಜದಲ್ಲಿ ಶಾಂತಿ ನೆಮ್ಮದಿ ಉಂಟಾಗಲು ನಮ್ಮೊಳಗೆ ಸ್ವಚ್ಚತೆ ಆಗಬೇಕಿದೆ. ಜ್ಞಾನ ಒಂದಿದ್ದರೆ ಸಾಲದು ಪ್ರೀತಿ ಭಾವ ನಮ್ಮಲ್ಲಿರಬೇಕು. ತ್ಯಾಗ ಮನೋಭಾವನೆ ಪ್ರತಿಯೋರ್ವರಲ್ಲಿಯೂ ಬರಬೇಕು.
ಹುಟ್ಟು ಹಬ್ಬ ಎಲ್ಲಾ ಕಡೆ ನಡೆಯುತ್ತದೆ ಆದರೆ ನಾವದನ್ನು ಆಚರಿಸುವ ರೀತಿ ಸಮಾಜಕ್ಕೆ ಮಾದರಿಯಾಗಬೇಕು. ಹುಟ್ಟು ಹಬ್ಬವನ್ನು ಗೌಜಿ ಗಮ್ಮತ್ತಿನಿಂದ ಮಾಡುವ ಬದಲು ಪೂಜೆ, ಭಜನೆ ಮಾಡಿ ಗಿಡಗಳನ್ನು ನೆಡುವ ಮೂಲಕ ಮಾಡಿ, ಸಮಾಜಕ್ಕೆ ತಮ್ಮಿಂದಾದ ಸಹಕಾರವನ್ನು ನೀಡಿ. ಮಕ್ಕಳಿಗೆ ಸಂಸ್ಕಾರದ ಬೀಜವನ್ನು ಬಿತ್ತುವ ಕೆಲಸ ನಿರಂತರವಾಗಿ ನಡೆಯಲಿ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತುರವರು ಮಾತನಾಡಿ ಶ್ರೀಗಳ ಸಂದೇಶವನ್ನು ನಾವು ಜೀವನದಲ್ಲಿ ಅನುಷ್ಠಾನ ಮಾಡಬೇಕು. ನಮ್ಮ ದಿನಚರಿಯನ್ನು ನಾವು ವಿಮರ್ಶೆ ಮಾಡುವ ಕೆಲಸವಾಗಬೇಕು. ಇದರಿಂದಾಗಿ ಜೀವನ ಉತ್ತಮವಾಗುತ್ತದೆ. ಶ್ರೀಗಳ ಜನ್ಮದಿನೋತ್ಸವ ಜನರಿಗೆ ಬಹಳಷ್ಟು ಸಹಕಾರಿಯಾಗಿದೆ. ಸಮಾಜದಲ್ಲಿರುವ ಬಡಬಗ್ಗರನ್ನು ಮೇಲಕ್ಕೆತ್ತುವ ಕೆಲಸ ಸದಾ ಕ್ಷೇತ್ರದಿಂದ ಆಗುತ್ತಿರುವುದು ಸಂತಸದ ವಿಚಾರ. ಕ್ಷೇತ್ರಕ್ಕೆ ತನ್ನಿಂದಾದ ಸಹಕಾರವನ್ನು ಮುಂದೆಯೂ ನೀಡುವುದಾಗಿ ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನರವರಿಗೆ ಶ್ರೀಗಳು ‘ಧಾನಸಿರಿ’ ಬಿರುದು ಪ್ರಧಾನ ಮಾಡಿದರು. ಮೂಡಬಿದರೆ ಆಳ್ವಾಸ್‌ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರಿಗೆ ಶ್ರೀಗಳು ‘ವಿದ್ಯಾಸಿರಿ’ ಬಿರುದು ಪ್ರಧಾನ ಮಾಡಿದರು. ಸಂಗೀತ ನಿರ್ದೇಶಕ ಶಂಕರ ಶ್ಯಾನುಬೋಗ್ ರವರಿಗೆ ಶ್ರೀಗಳು ‘ಗಾನಸಿರಿ’ ಬಿರುದು ಪ್ರಧಾನ ಮಾಡಿದರು. ಬರೋಡ ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ರವರಿಗೆ ಶ್ರೀಗಳು ‘ಸೇವಾಸಿರಿ’ ಬಿರುದು ಪ್ರಧಾನ ಮಾಡಿದರು.

ಮೂಡಬಿದರೆ ಆಳ್ವಾಸ್‌ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರು ‘ವಿದ್ಯಾಸಿರಿ’ ಬಿರುದು ಸ್ವೀಕರಿಸಿ ಮಾತನಾಡಿ ಪ್ರೀತಿ ವಿಶ್ವಾಸದ ಸೆಲೆ ಒಡಿಯೂರು ಶ್ರೀಗಳು. ಧಾರ್ಮಿಕತೆಯ ಜೊತೆಗೆ ಭಾಷೆಯ ಚಿಂತನೆಯೊಂದಿಗೆ ಸಮಾಜ ಕಟ್ಟಿದ ಯತಿಗಳಿವರು. ಧಾನ ಧರ್ಮ ಮಾಡುವ ಮನಸ್ಸು ನಮ್ಮದಾಗಲಿ. ನಿತ್ಯ ನಿರಂತರ ಕ್ಷೇತ್ರ ಏಳಿಗೆಯಲ್ಲಿ ನಾವು ಕೈ ಜೋಡಿಸುವುದಾಗಿ ಅವರು ಭರವಸೆ ನೀಡಿದರು.

ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನರವರು ‘ಧಾನಸಿರಿ’ ಬಿರುದು ಸ್ವೀಕರಿಸಿ ಮಾತನಾಡಿ ಇದೊಂದು ಅವಿಸ್ಮರಣೀಯ ಸನ್ಮಾನವಾಗಿದೆ. ಸನಾತನ ಧರ್ಮ ಸಂಸ್ಕೃತಿ ಪದ್ದತಿಯಲ್ಲಿ ನಡೆದ ಸನ್ಮಾನ ಇದಾಗಿದೆ‌. ನನ್ನ ಯಶಸ್ವಿಗೆ ಸ್ವಾಮೀಜಿಗಳ ಆಧ್ಯಾತ್ಮಕ ಶಕ್ತಿಯೇ ಕಾರಣ.
ಗುರು, ದೈವ – ದೇವರ ಕೃಪೆ ಇದ್ದರೆ ಯಶಸ್ಸು ಸಾಧ್ಯ. ಆಧ್ಯಾತ್ಮಿಕ ಶಕ್ತಿ ಪಡೆದ ಶ್ರೀಗಳ ಕೃಪೆ ಅಪಾರ. ಸನಾತನ ಧರ್ಮದ ಶಕ್ತಿ ಆಧ್ಯಾತ್ಮಿಕ ಶಕ್ತಿ. ಆತ್ಮ ಶಕ್ತಿಯನ್ನು ಮನವರಿಕೆ ಮಾಡುವ ಮನಸ್ಸು ನಮ್ಮದಾಗಬೇಕು. ಶಿಸ್ತಿನ ಕಾನೂನು ನಮ್ಮ ದೇಶದಲ್ಲಿಯೂ ಬರಬೇಕಿದೆ.‌ ಕಾನೂನಿನ ಭಯ ಜನರಲ್ಲಿ ಹುಟ್ಟಬೇಕಿದೆ. ನ್ಯಾಯ ಅನ್ಯಾಯದ ಬಗೆಗಿನ ಮಾಹಿತಿ ಮಕ್ಕಳಿಗೆ ನೀಡುವ ಕೆಲಸವಾಗಬೇಕು ಎಂದರು.

ಸಂಗೀತ ನಿರ್ದೇಶಕ ಶಂಕರ ಶ್ಯಾನುಬೋಗ್ ರವರು ‘ಗಾನಸಿರಿ’ ಬಿರುದು ಸ್ವೀಕರಿಸಿ ಮಾತನಾಡಿ ಇದೊಂದು ವಿಶೇಷವಾದ ಸಮಾರಂಭ. ನಾವೆಲ್ಲ ಸಾಮಾಜದ ಒಳಿತಿಗಾಗಿ ಕೆಲಸ ಮಾಡಬೇಕಿದೆ. ಸದ್ವಿಚಾರವನ್ನು ಕಲಿಸುವ ಕೆಲಸ ಎಲ್ಲರಿಂದ ಆಗಬೇಕಿದೆ. ಸಂಸ್ಕಾರ ನೀಡುವ ವಿದ್ಯಾಕೇಂದ್ರಗಳ ಹುಟ್ಟಾದಲ್ಲಿ ನಮ್ಮೊಳಗೆ ಸಾತ್ವಿಕ ಭಾವ ಬೆಳೆಯಲು ಸಾಧ್ಯ. ಸಂಗೀತ ಸಮಾಜ‌ ಸುಧಾರಣೆಯ ಒಂದು ಭಾಗವಾಗಿದೆ. ಹಿಂದೂ ಧರ್ಮದ ರಕ್ಷಣೆ ಎಲ್ಲರಿಂದಲೂ ಆಗಲಿ ಎಂದರು.

ಬರೋಡ ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ರವರು ‘ಸೇವಾ ಸಿರಿ’ ಬಿರುದು ಸ್ವೀಕರಿಸಿ ಮಾತನಾಡಿ ಸೇವೆ ಮಾಡುವಾಗ ಧನ್ಯತಾ ಭಾವ ನಮ್ಮಲ್ಲಿರಬೇಕು. ಶ್ರೀಗಳು ಮಾಡಿದ ಪ್ರತಿಯೊಂದು ಕೆಲಸದಲ್ಲಿಯೂ ನಿಜವಾದ ಅರ್ಥವಿರುತ್ತದೆ. ನಮ್ಮ ಒಳಿತಿಗೆ ಆಶಿಸುವ ವ್ಯಕ್ತಿ ಇದ್ದರೆ ಅದು ತಾಯಿ ಮಾತ್ರ. ತಾಯಿಯನ್ನು ಗೌರವಿಸುವ ಕೆಲಸ ಮಾಡೋಣ. ನಾವು ನಡೆದು ಬಂದ ಹಾದಿಯನ್ನು ನೆನೆಯುವ ಕಾರ್ಯವಾಗಬೇಕು. ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಮುಂದೆಯೂ ಕೈ ಜೋಡಿಸುವುದಾಗಿ ಭರವಸೆ ನೀಡಿದರು.

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಎ. ಸುರೇಶ್ ರೈ, ಎ. ಅಶೋಕ್ ಕುಮಾರ್, ಒಡಿಯೂರು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದರು.

ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ:
ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಅಂಗವಾಗಿ ಬೆಳಗ್ಗೆ 8ಕ್ಕೆ ಶ್ರೀ ಗಣಪತಿ ಹವನ, ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು‌ ಬಳಗದವರಿಂದ ದಾಸವಾಣಿ, ಮಹಾಪೂಜೆ, 9.30ರಿಂದ ಶ್ರೀಗಳ ಪಾದಪೂಜೆ, ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು.

LEAVE A REPLY

Please enter your comment!
Please enter your name here