ಪುತ್ತಿಲರೇ- ಸೌಜನ್ಯಳಿಗೆ ನ್ಯಾಯಕ್ಕಾಗಿ ನಡೆಯುವ ಹೋರಾಟಕ್ಕೆ ಜನತೆಯ ಬೆಂಬಲವಿದೆ.

0

ಆದರೆ ಗದ್ದಲದ ಗೂಡಾದ ಪುತ್ತೂರು ಬಸ್‌ಸ್ಟ್ಯಾಂಡ್‌ನಲ್ಲಿ ಸೋಮವಾರ ನಡೆಯುವ ಪ್ರತಿಭಟನಾ ಸಭೆಗಿಂತ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸಭೆ ನಡೆದರೆ ಅರ್ಥಪೂರ್ಣವಾಗಿ ಯಶಸ್ವಿಯಾಗುತ್ತದೆಯಲ್ಲವೇ

ಆಗಸ್ಟ್ 14ನೇ ಸೋಮವಾರ ಬೆಳಿಗ್ಗೆ ಪುತ್ತೂರು ಬಸ್‌ಸ್ಟ್ಯಾಂಡ್‌ನಲ್ಲಿ ಜನಜಂಗುಳಿ ವಾಹನ ದಟ್ಟಣೆಯಿದ್ದು ಅಲ್ಲಿ ಕಾಲಿಡಲು ಸ್ಥಳ ಇರುವುದಿಲ್ಲ. ಅಲ್ಲಿ ಪ್ರತಿಭಟನಾ ಸಭೆ ನಡೆದರೆ ನಿಂತು ಕೇಳಲು ಜಾಗವೂ ಇಲ್ಲ. ವಾಹನಗಳ ಶಬ್ದ, ಜನರ ಓಡಾಟ ಇರುವಾಗ ಸಭೆ ನಡೆಸಿದರೆ ಅದು ಜನರಿಗೆ ಕೇಳೀತೇ. ಅರ್ಥವಾದೀತೇ. ಜನರು ಬಿಸಿಲಿಗೆ ನಿಲ್ಲಬೇಡವೇ. ಆ ಸಭೆಯಲ್ಲಿ ಭಾಗವಹಿಸಲೆಂದೇ ಬರುವವರಿಗೆ ಅಲ್ಲಿ ಜಾಗದ ವ್ಯವಸ್ಥೆ ಮಾಡಲು ಸಾಧ್ಯವೇ.


ಆ ಸಭೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದರೆ ಎಲ್ಲರೂ ಭಾಗವಹಿಸಬಹುದು. ತಾಳ್ಮೆಯಿಂದ ಯಾವುದೇ ಗದ್ದಲವಿಲ್ಲದೇ ಕುಳಿತು ಕೇಳಬಹುದು. ಸಭೆಯನ್ನು ಉದ್ದೇಶಿಸಿ ಮಾತನಾಡುವವರಿಗೆ ಅನುಕೂಲ. ಪ್ರತಿಭಟನಾ ಸಭೆಯ ಉದ್ದೇಶ ಎಲ್ಲರಿಗೂ ಮುಟ್ಟುವುದು ಖಂಡಿತ. ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಟದಂತಹ ಗಂಭೀರ ವಿಷಯವನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡುವ ನಿಮ್ಮ ಪುತ್ತಿಲ ಪರಿವಾರದ ಮತ್ತು ಭಾಗವಹಿಸುವ ಎಲ್ಲರ ಉದ್ದೇಶ ಈಡೇರಿಕೆಗೆ ಸಹಕಾರಿಯಲ್ಲವೇ.


ಆ ರೀತಿ ಪ್ರತಿಭಟನಾ ಸಭೆಯ ಸ್ಥಳವನ್ನು ಬದಲಾವಣೆ ಮಾಡುವುದರಿಂದ ರಸ್ತೆ ತಡೆ ಮತ್ತು ಬಂದ್‌ನ ಅವಶ್ಯಕತೆ ಬಾರದೆ ಪುತ್ತೂರಿನ ಜನರ ದೈನಂದಿನ ವ್ಯವಹಾರಕ್ಕೆ ಏನೂ ಅಡ್ಡಿಯಾಗದೇ ಅವರ ವ್ಯವಹಾರಗಳು ಸುಗಮವಾಗಿ ನಡೆಯಲಿ. ಯಾರಿಗೂ ಏನೂ ತೊಂದರೆ ಆಗದಿರಲಿ ಎಂಬ ಆಶಯದಿಂದ ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಅನ್ಯಾಯದ ವಿರುದ್ಧ ಹೋರಾಟ ನಡೆಸುವ ತಮ್ಮ ಪರಿವಾರವು ಪುತ್ತೂರು ಮತ್ತು ಇತರ ತಾಲೂಕುಗಳಲ್ಲಿ ಲಂಚ ಭ್ರಷ್ಟಾಚಾರದಿಂದ ಜನರಿಗೆ ಆಗುತ್ತಿರುವ ಶೋಷಣೆಯನ್ನು ಕಷ್ಟ ನಷ್ಟವನ್ನು ನಿವಾರಿಸಲು ಜನರ ಪರವಾಗಿ ಹೋರಾಟ ನಡೆಸಲು ಮುಂದೆ ಬರಬೇಕಾಗಿ ವಿನಂತಿಸುತ್ತಿದ್ದೇವೆ. ತಮ್ಮ ಆ ಹೋರಾಟಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ.
ಪುತ್ತಿಲರೇ ನಾನು ನಿಮ್ಮ ಚುನಾವಣಾ ಸ್ಪರ್ಧಿಯಲ್ಲ. ನಿಮ್ಮ ಜನ ಪರ ಹೋರಾಟಕ್ಕೆ ಸ್ಪರ್ಧಿಯೂ ಅಲ್ಲ. ನಿಮ್ಮಂತವರ ಉತ್ತಮ ಕೆಲಸಕ್ಕೆ ಸದಾ ಬೆಂಬಲ ನೀಡುವವನೇ ಆಗಿರುತ್ತೇನೆ ಎಂದು ಹೇಳ ಬಯಸುತ್ತೇನೆ. ಆದರೆ ನ್ಯಾಯಕ್ಕೆಂದು ಹೋರಾಟ ಮಾಡುವಾಗ ಜನರಿಗೆ ಅನ್ಯಾಯ, ತೊಂದರೆಯಾಗುವುದಿದ್ದರೆ ಅದನ್ನು ಖಡಾ-ಖಂಡಿತವಾಗಿ ವಿರೋಧಿಸುತ್ತೇವೆ.

LEAVE A REPLY

Please enter your comment!
Please enter your name here