ಕಡಬಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕ ದುಬೆ ಭೇಟಿ-ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ

0

ಕಡಬ: ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕ ಡಾ.ಯೋಗೇಶ್ ದುಬೆ ಶುಕ್ರವಾರ ಕಡಬ ಪರಿಸರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕಡಬ ಆಡಳಿತ ಸೌಧದಲ್ಲಿ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದರು.


ವಿಕಲಚೇತನರ ಬಗ್ಗೆ ಇರುವ ಸವಲತ್ತುಗಳು ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆರಂಭದಲ್ಲಿ ಮರ್ದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಕಲಚೇತನರಿಗೆ ಕೊಡುವ ಸವಲತ್ತುಗಳು ಹಾಗೂ ಮೂಲಭೂತ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕಡಬ ತಾಲೂಕು ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಾಲೂಕಿನಲ್ಲಿ ಎಷ್ಟು ವಿಕಲಚೇತನರು ಇದ್ದಾರೆ. ಅವರಿಗೆ ಕಂದಾಯ ಇಲಾಖೆಯಿಂದ ಎಷ್ಟು ಮಾಶಾಸನ ನೀಡಲಾಗುತ್ತಿದೆ, ತಾಲೂಕಿನಲ್ಲಿರುವ ಎಂಡೋಪೀಡಿತರ ಸಂಖ್ಯೆ ಹಾಗೂ ಅವರ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಶಾಲೆಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಕಚೇರಿಗಳಲ್ಲಿ ವಿಕಲಚೇತನರು ಬಂದಾಗ ಅವರಿಗೆ ಕುಳಿತುಕೊಳ್ಳಲು ಕುರ್ಚಿಗಳು, ರ‍್ಯಾಂಪ್‌ಗಳು, ಗಾಲಿ ಕುರ್ಚಿಗಳು ಮತ್ತು ವಿಶೇಷ ಆಸನದ ವ್ಯವಸ್ಥೆಗಳು ಇದೆಯಾ, ಆರೋಗ್ಯ ಕೇಂದ್ರಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಬಗ್ಗೆ ವಿಚಾರಿಸಿದರು. ತಾ.ಪಂ. ಸೇರಿದಂತೆ ಸರಕಾರಿ ಕಟ್ಟಡಗಳಲ್ಲಿ ವಿಕಲಚೇತನರಿಗೆ ಕಲ್ಪಿಸಲಾದ ಸೌಲಭ್ಯಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ, ವಿಕಲಚೇತನರ ತಾಲೂಕು ವಿವಿದ್ದೋದ್ದೇಶ ಕಾರ್ಯಕರ್ತೆ ಅಕ್ಷತಾ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ವ್ಯವಸ್ಥಾಪಕ ಭುವನೇಂದ್ರ ಕುಮಾರ್, ಕಡಬ ಎಸ್‌ಐ ಆಂಜನೇಯ ರೆಡ್ಡಿ, ಜಿ.ಪಂ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಬಿ.ಎಂ., ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಭಾರತಿ, ಅಂಗನವಾಡಿ ಮೇಲ್ವಿಚಾರಕಿ ಭವಾನಿ, ಪಶುವೈದ್ಯಾಧಿಕಾರಿ ಡಾ.ಅಜಿತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರೂಪ್ಲಾ ನಾಯಕ್, ಉದ್ಯೋಗ ಖಾತ್ರಿ ಯೋಜನೆಯ ಸುಪರ್ಣ ಮುಂತಾದವರು ಇಲಾಖಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ.ಯೋಗೇಶ್ ದುಬೆಯವರನ್ನು ಕಡಬ ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.

LEAVE A REPLY

Please enter your comment!
Please enter your name here