ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಧನೆಗೆ ಸತತ 6ನೇ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘ ತನ್ನ ವಿಶೇಷ ಸಾಧನೆಗಾಗಿ ಸತತ ಆರನೇ ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಬನ್ನೂರು ರೈತರ ಸೇವಾ ಸಹಕಾರಿ ಸಂಘವು 19 ವರ್ಷಗಳ ಹಿಂದೆ ಸುಮಾರು ರೂ.87 ಲಕ್ಷ ನಷ್ಟವನ್ನು ಹೊಂದಿ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಸಂಘದ ಆಸ್ತಿ ಎಂದೇ ಪರಿಗಣಿಸಿರುವ ಗೌರವಾನ್ವಿತ ಸದಸ್ಯರುಗಳ ಪೂರ್ಣ ಸಹಕಾರದೊಂದಿಗೆ, ಆಡಳಿತ ಮಂಡಳಿಯವರ ದಕ್ಷ ಪ್ರಾಮಾಣಿಕ ಆಡಳಿತದಿಂದ ಮತ್ತು ಸಿಬ್ಬಂದಿಗಳ ಪರಿಶ್ರಮದ ಸೇವೆಯಿಂದ ಎಲ್ಲಾ ನಷ್ಟವನ್ನು ಹೋಗಲಾಡಿಸಿ 2022-23ನೇ ಸಾಲಿನಲ್ಲಿ ರೂ.74.62 ಲಕ್ಷ ಲಾಭ ಗಳಿಸಿ, ಶೇ.9 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಸಂಘದ ಕಾರ್ಯಕ್ಷೇತ್ರವು ಕಬಕ, ಕೊಡಿಪ್ಪಾಡಿ, ಬನ್ನೂರು, ಪಡ್ನೂರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಚಿಕ್ಕಮುಡ್ನೂರು, ಕುಳ, ಪುತ್ತೂರು ಕಸಬಾ ವ್ಯಾಪ್ತಿಯನ್ನೊಳಗೊಂಡಿದೆ. ವರ್ಷಾರಂಭದಲ್ಲಿ ರೂ.3,96,57,435 ಇದ್ದು, ವರದಿ ವರ್ಷದಲ್ಲಿ ರೂ. 48,67,790 ಜಮೆ ಬಂದಿದ್ದು, ವರದಿ ವರ್ಷದಲ್ಲಿ ರೂ.5,77,665 ಮರು ಪಾವತಿಸಿ, ವರ್ಷಾಂತ್ಯಕ್ಕೆ 4,38,47,560 ಜಮೆ ಇರುತ್ತದೆ. 2022-23ನೇ ಸಾಲಿನ ಸಂಘದ ಉತ್ತಮ ಸಾಧನೆಗೆ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ 6ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದ್ದಾರೆ.

ಸಂಘದ ಅಭಿವೃದ್ಧಿಗೆ ಪೂರಕವಾಗಿ 12 ಮಂದಿ ಆಡಳಿತ ಮಂಡಳಿ ನಿರ್ದೇಶಕರಿದ್ದು, ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾಗಿ ರಾಜಶೇಖರ್ ಜೈನ್, ನಿರ್ದೇಶಕರಾಗಿ ಸುಭಾಶ್ ನಾಯಕ್, ಅಶ್ರಫ್ ಕಲ್ಲೇಗ, ದೇವಾನಂದ ಕೆ, ಮೋಹನ್ ಪಕ್ಕಳ ಕುಂಡಾಪು, ಸ್ಮಿತಾ ಜೆ. ಭಂಡಾರಿ, ಸುಬ್ರಹ್ಮಣ್ಯ ಗೌಡ, ರಾಜು, ಶ್ರೀನಿವಾಸ, ಸುಂದರ ಪೂಜಾರಿ ಬಡಾವು, ಜಯಲಕ್ಷ್ಮಿ ಸುರೇಶ್ ಹಾಗು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿಯಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ವಲಯ ಮೇಲ್ವಿಚಾರಕರಾಗಿ ವಸಂತ ಇವರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಧಾ ಬಿ ರೈ ಮತ್ತು ಸಿಬ್ಬಂದಿಗಳು, ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

ನನಗೆ ಅತೀವ ಸಂತೋಷ ತಂದಿದೆ:
ಉತ್ತಮ ಸಾಧನೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಬನ್ನೂರು ಸೇವಾ ಸಹಕಾರಿ ಸಂಘ 6ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಗೊಂಡಿರುವುದು. ನನಗೆ ಅತೀವ ಸಂತೋಷ ಆಗಿದೆ. ಇದು ಎಲ್ಲರ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here