ನಮ್ಮ ಮಕ್ಕಳು ಏಕೆ ಬದಲಾಗುತ್ತಿದ್ದಾರೆ…

0

ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ…ತಾಡಯೇತ್ ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚ್ಜರೇತ್…
ಹೌದು, ಮಕ್ಕಳನ್ನು ಐದು ವರ್ಷದ ವರೆಗೆ ಪ್ರೀತಿಯಿಂದ ತಿದ್ದಿ, ತೀಡಿ, ಬುದ್ದಿ ಕಲಿಸಬೇಕು. ನಂತರದ ಹತ್ತು ವರ್ಷಗಳ ಕಾಲದಲ್ಲಿ ಬೈದು, ತಿದ್ದಿ, ಬುದ್ದಿ ಹೇಳಿ ಸರಿದಾರಿಯತ್ತ ಕೊಂಡೊಯ್ಯಬೇಕು. ಹದಿನಾರು ವರ್ಷಗಳ ಬಳಿಕ ಸ್ನೇಹಿತನಂತೆ ನೋಡುತ್ತಾ ನಯವಾದ ಮಾತಿನಿಂದ ತಿದ್ದುತಿರಬೇಕು ಎಂಬುದು ಸಂಸ್ಕೃತದಲ್ಲಿ ಒಂದು ಮಾತಿದೆ. ಅಲ್ಲದೆ ಇದು ಅನುಭವಿಗಳ ಮಾತು ಕೂಡ.

ಹಿಂದಿನ ಕಾಲದಲ್ಲಿ ನಾವು ಚಿಕ್ಕವರಿದ್ದಾಗ ತಂದೆ ತಾಯಿ ಅಥವಾ ಹಿರಿಯರೆದುರು ಬೆಂಚು ಕುರ್ಚಿಗಳಲ್ಲಿ ಕುಳಿತುಕೊಳ್ಳಲೂ ಸಹ ಅವಕಾಶವಿರಲಿಲ್ಲ. ದೊಡ್ಡವರಿಗೆ ಎದುರುತ್ತರ ಕೊಡುತ್ತಿರಲಿಲ್ಲ. ಹಿರಿಯರು ಬಂದ ಕೂಡಲೇ ಮಕ್ಕಳು ಒಳ ಸೇರುತಿದ್ದರು. ಗಟ್ಟಿಯಾಗಿ ಮಾತು ಸಹ ಆಡುತ್ತಿರಲಿಲ್ಲ. ಹೀಗೆ ಶಿಸ್ತಿನ ಪಾಠವನ್ನು ನಮಗರಿವಿಲ್ಲದೆಯೇ ಕಲಿತಿದ್ದೆವು. ಅಂತಹ ಶಿಷ್ಟಾಚಾರ ಬಾಲ್ಯದಲ್ಲಿ ನಮ್ಮ ಮಕ್ಕಳಿಗೆ ಸಿಗಬೇಕಿದೆ.
ಪ್ರಸ್ತುತ ಕಾಲವನ್ನು ನೋಡಿದಾಗ ಚಿಕ್ಕದಾದ ವಿಭಕ್ತ ಕುಟುಂಬದಲ್ಲಿ ಒಬ್ಬ ಅಥವಾ ಇಬ್ಬರೇ ಮಕ್ಕಳು. ಅವರ ಮೇಲೆ ಅತಿಯಾದ ಮಮಕಾರ, ಮಕ್ಕಳನ್ನು ತಂದೆ ತಾಯಂದಿರು ಬೆಳೆಸುವ ರೀತಿಯಲ್ಲಿ ಬದಲಾವಣೆ ತಂದಿದೆ. ಶಿಕ್ಷಣದ ಮಹತ್ವದ ಜೊತೆಗೆ ಉನ್ನತ ಮಟ್ಟದ ಉದ್ಯೋಗ ಆಕಾಂಕ್ಷೆ, ಐಶಾರಾಮಿ ಜೀವನದ ಬಯಕೆಯು ಹೆತ್ತವರ ಮೂಲ ಗುರಿಯಾಗಿದೆ. ಸಮೂಹ ಮಾಧ್ಯಮಗಳ ಮೂಲಕ ಮಕ್ಕಳು ಇಂದು ಪೋಷಕರಿಗಿಂತ ಹೆಚ್ಚು ಹೆಚ್ಚು ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿಯುತ್ತಿದ್ದಾರೆ. ತಮ್ಮ ಮಕ್ಕಳು ಜಾಣರಾಗುತ್ತಿದ್ದಾರೆಂಬ ನಂಬಿಕೆಯಿಂದ ಅವರಿಗೆ ಮತ್ತಷ್ಟು ಸ್ವಾತಂತ್ರ್ಯವನ್ನು ನೀಡುತ್ತಿದ್ದೇವೆ. ಹೀಗೆ ಪ್ರಬುದ್ಧತೆಯ ಹಾದಿಯಲ್ಲಿರುವಾಗಲೇ ಮಕ್ಕಳು ಹೆಚ್ಚು ಹೆಚ್ಚು ಟಿವಿ, ಮೊಬೈಲ್, ಇಂಟರ್ನೆಟ್ ಮಾಧ್ಯಮಗಳ ಮೇಲೆ ಅವಲಂಬಿತರಾಗಿರುತ್ತಾರೆ. ಈ ಸಮಯಕ್ಕಾಗಲೇ ಮಕ್ಕಳು ಹೆತ್ತವರ ಹಿಡಿತದಿಂದ ಬಹಳ ದೂರ ಬಂದಿರುತ್ತಾರೆ. ಹೀಗೆ ಪೋಷಕರು ನೀಡಿದ ಸ್ವಾತಂತ್ರ್ಯ ಸ್ವೇಚ್ಛಾಚಾರಗಳೇ ಅವರನ್ನು ಅಡ್ಡ ದಾರಿಯತ್ತ ಕೊಂಡೊಯ್ಯುತ್ತಿದೆ.
ತನ್ನ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸದೆ ದುರಾಭ್ಯಾಸ, ದುಶ್ಚಟಗಳಿಗೆ ಬಲಿಯಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಹಂತ ತಲುಪಿದ ಮೇಲೆ ಪೋಷಕರು ಎಚ್ಚೆತ್ತುಕೊಂಡರೆ ಏನು ಮಾಡಲು ಸಾಧ್ಯವಿಲ್ಲ. ಜೊತೆಯಲ್ಲಿ ಶಿಕ್ಷಕರು ಸಹ ನಿರಾಶೆಯಿಂದ ಕೈ ಚೆಲ್ಲಬೇಕಾದ ಪ್ರಮೇಯ ಬರುವುದು ನಿಶ್ಚಿತವಾಗಿಯೂ ಹೌದು!!

ಹಾಗಾದರೆ ಈ ರೀತಿಯ ಸಮಸ್ಯೆಗಳು ಬಾರದಂತೆ ಹೆತ್ತವರು ಏನು ಮಾಡಬಹುದು?.. ಮಕ್ಕಳಿಗೆ ಅತಿಯಾದ ಶಿಸ್ತು, ಅತಿಯಾದ ಸ್ವಾತಂತ್ರ್ಯ, ಅತಿಯಾದ ಪ್ರೀತಿ ಇವು ಮೂರೂ ಒಳ್ಳೆಯದಲ್ಲ. ನಾವು ಬೇರೆಯವರಿಂದ ಯಾವ ಮೌಲ್ಯಗಳನ್ನು ನಿರೀಕ್ಷಿಸುತ್ತೇವೆಯೋ ಅಂತಹ ಗುಣಗಳನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ಮಾಡಬೇಕು, ಮೂರು ವರ್ಷದ ಬುದ್ಧಿ 100 ವರ್ಷದವರೆಗೆ ಎಂಬ ನಾಣ್ಣುಡಿಯಂತೆ ಮನೆಯಲ್ಲಿ ಕುಟುಂಬ, ಶಾಲೆಯಲ್ಲಿ ಶಿಕ್ಷಕರಲ್ಲಿನ ಮೌಲ್ಯಗಳು ಮಕ್ಕಳಿಗೆ ಮಾದರಿಯಾಗಬೇಕು. ಮಗುವಿಗೆ ಶಿಕ್ಷಣ ಶಾಲೆಯಲ್ಲಿ ದೊರೆತರೆ ಸಂಸ್ಕಾರ ಮನೆಯಿಂದಲೇ ಆರಂಭಗೊಳ್ಳುತ್ತದೆ. ಹೀಗಿರುವಾಗ ಮನೆಯಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ-ತಂಗಿ ಅಥವಾ ಹಿರಿಯರನ್ನು ಪರಸ್ಪರ ಗೌರವಿಸುವ, ಪ್ರೀತಿಸುವ, ಅನುಸರಿಸುವ, ಶಿಷ್ಟಾಚಾರವನ್ನು ಮನೆಯ ಸದಸ್ಯರು ಪಾಲಿಸುತ್ತಾ ಮಕ್ಕಳಿಗೆ ಮಾದರಿಯಾಗಬೇಕು. ಹಿರಿಯರೇ ಮಕ್ಕಳಿಗೆ ಆದರ್ಶರು. ಅವರ ದಾರಿಯಲ್ಲಿ ಮಕ್ಕಳು ಸಾಗುತ್ತಾರೆ. ಅದಕ್ಕಾಗಿ ನಾವಿಂದು ಎಚ್ಚೆತ್ತುಕೊಳ್ಳಬೇಕಾಗಿದೆ. ತಂದೆ ತಾಯಿಗಳಾಗಿ, ಶಿಕ್ಷಕರಾಗಿ ಪೋಷಕರಾಗಿ ನಾವು ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಒಂದಿಷ್ಟು ಸಮಯವನ್ನು ಮೀಸಲಿಡಬೇಕಾಗಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಮಾತಿನಂತೆ ಮಕ್ಕಳನ್ನು ಎಳವೆಯಲ್ಲೇ ತಿದ್ದಿ, ತೀಡಿ, ಸುಸಂಸ್ಕೃತ ನಾಗರೀಕರನ್ನಾಗಿ ಮಾಡಿ ಈ ಸಮಾಜಕ್ಕೆ ನೀಡುವುದು ಅತ್ಯಗತ್ಯವಾಗಿದೆ.

This image has an empty alt attribute; its file name is vishalakshi-k.jpg

ವಿಶಾಲಾಕ್ಷಿ ಕೆ
ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಆನಡ್ಕ

LEAVE A REPLY

Please enter your comment!
Please enter your name here