ನೆಲ್ಯಾಡಿ: ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ಉದ್ಘಾಟನೆ

0

ತೆಂಗು ಕೊಯ್ಲುಗಾರರಿಗೆ ಉಚಿತ ವಿಮಾ ಯೋಜನೆ ನೋಂದಾವಣೆ
ಷೇರು ಪ್ರಮಾಣ ಪತ್ರ ವಿತರಣೆ/ ಸುರಕ್ಷಾ ಪತ್ರ ವಿತರಣೆ

ನೆಲ್ಯಾಡಿ: ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ನೆಲ್ಯಾಡಿ ಬಸ್ ನಿಲ್ದಾಣ ಮುಂಭಾಗದ ಸೈಂಟ್ ಮೇರೀಸ್ ಕಾಂಪ್ಲೆಕ್ಸ್‌ನಲ್ಲಿ ಸೆ.14ರಂದು ಉದ್ಘಾಟನೆಗೊಂಡಿತು.


ದೀಪ ಪ್ರಜ್ವಲಿಸಿದ ಬೆಳಾಲು ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ, ಸೂಕ್ತ ಮಾರುಕಟ್ಟೆ ಇರುವುದರಿಂದ ಇಲ್ಲಿನ ಶೇ.70ರಷ್ಟು ಜನ ಕೃಷಿಯಲ್ಲಿ ತೊಡಗಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಜಿಲ್ಲೆಯ ಜನತೆಗೆ ಕೃಷಿ ಕೈಕೊಟ್ಟಿಲ್ಲ. ಆದ್ದರಿಂದ ಕೃಷಿ ಮನುಷ್ಯನ ಜೀವನಕ್ಕೆ ಆಧಾರವಾಗಿದೆ. ಇದಕ್ಕೆ ಮುನ್ನುಡಿ ಎಂಬಂತೆ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ, ಬೆಂಬಲ ನೀಡುವ ನಿಟ್ಟಿನಲ್ಲಿ ಆರಂಭಗೊಂಡಿರುವ ತೆಂಗು ರೈತ ಉತ್ಪಾದಕರ ಸಂಸ್ಥೆಯು ಬೆಳೆಗಾರರಿಗೆ ಕಾಮಧೇನು ಆಗಿದೆ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.


ಶಾಖೆ ಉದ್ಘಾಟಿಸಿ ಮಾತನಾಡಿದ ಉದನೆ ಸಂತ ಅಂತೋನೀಸ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ಹನಿ ಜೇಕಬ್‌ರವರು, ಕೃಷಿಕರ ಹಿತರಕ್ಷಣೆಗೆ ಸಾಕಷ್ಟು ಸಹಕಾರ ಸಂಘಗಳಿವೆ. ತೆಂಗು ಬೆಳೆಗಾರರಿಗೆ ಬೆನ್ನೆಲುಬು ಆಗಿ ತೆಂಗು ರೈತ ಉತ್ಪಾದಕರ ಸಂಸ್ಥೆ ಆರಂಭಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಶಾಖೆ ಇದೀಗ ನೆಲ್ಯಾಡಿಯಲ್ಲಿಯೂ ಆರಂಭ ಗೊಂಡಿರುವುದರಿಂದ ಈ ಭಾಗದ ತೆಂಗು ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಸಂಸ್ಥೆ ಆಲದ ಮರದ ರೀತಿಯಲ್ಲಿ ಬೆಳೆದು ಲಕ್ಷಾಂತರ ಮಂದಿಗೆ ನೆರಳಾಗಿ, ದೀಪವಾಗಿ ಪ್ರಜ್ವಲಿಸಲಿ ಎಂದು ಹೇಳಿ ಶುಭಹಾರೈಸಿದರು. ಸುರಕ್ಷಾ ಪತ್ರ ವಿತರಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲುರವರು, ಅಡಿಕೆ ಬೆಳೆಗಾರರಿಗೆ ಕ್ಯಾಂಪ್ಕೋ ಬೆನ್ನೆಲುಬು. ಅದೇ ರೀತಿ ತೆಂಗು ರೈತ ಉತ್ಪಾದಕರ ಸಂಸ್ಥೆಯು ತೆಂಗು ಬೆಳೆಗಾರರಿಗೆ ವರದಾನವಾಗಿದೆ. ಈ ಸಂಸ್ಥೆ ತೆಂಗಿನ ಉತ್ಪನ್ನ ಹೆಚ್ಚಿಸುವ ಮೂಲಕ ತೆಂಗು ಬೆಳೆಗಾರರ ಹಿತ ರಕ್ಷಿಸಲಿದೆ. ಎರಡೇ ವರ್ಷದಲ್ಲಿ ೯ ಶಾಖೆ ತೆರೆದಿರುವ ಸಂಸ್ಥೆ ಮುಂದಿನ ಎರಡು ಮೂರು ವರ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯಲಿದೆ. ಇದಕ್ಕೆ ತೆಂಗು ಬೆಳೆಗಾರರು ಸಂಪೂರ್ಣ ಸಹಕಾರ ನೀಡಬೇಕು ಎಂದರು. ಷೇರು ಪ್ರಮಾಣಪತ್ರ ವಿತರಿಸಿದ ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್‌ರವರು ಸಂದರ್ಭೋಚಿತವಾಗಿ ಮಾತನಾಡಿ, ಗ್ರಾ.ಪಂ.ನಿಂದ ಸಂಸ್ಥೆಗೆ ಸಹಕಾರ ನೀಡಲಾಗುವುದು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕುಸುಮಾಧರ್ ಎಸ್.ಕೆ.ಅವರು ಮಾತನಾಡಿ, ನೆಲ್ಯಾಡಿಯಲ್ಲಿ ಅಡಿಕೆ, ರಬ್ಬರ್ ಖರೀದಿದಾರರಿದ್ದರೂ ತೆಂಗು ಖರೀದಿ ಕೇಂದ್ರವಿಲ್ಲ. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿ ಸಂಸ್ಥೆಯ ಶಾಖೆ ಆರಂಭಿಸುವಂತೆ ಸದಸ್ಯರಿಂದ ಬಂದ ಬೇಡಿಕೆಯಂತೆ ಶಾಖೆ ಆರಂಭಿಸಲಾಗಿದೆ. ಸಂಘದಲ್ಲಿ ಸಿಗುವ ಯೋಜನೆಗಳನ್ನು ತೆಂಗು ಬೆಳೆಗಾರರು ಸದುಪಯೋಗ ಪಡೆದುಕೊಳ್ಳಬೇಕು. ತೆಂಗಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ತೆಂಗು ಬೆಳೆಗಾರರು ಸಹಕಾರ ನೀಡಬೇಕು ಎಂದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2021ರ ಆ.5ರಂದು ಆರಂಭಗೊಂಡಿರುವ ಸಂಸ್ಥೆಯು ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆಯಲ್ಲಿ 14,400 ಸದಸ್ಯರಿದ್ದಾರೆ. 332 ಗ್ರಾಮಗಳ ತೆಂಗು ಬೆಳೆಗಾರರನ್ನು ಸಂಸ್ಥೆಯ ಸಿಬ್ಬಂದಿಗಳು ಸಂಪರ್ಕಿಸಿದ್ದಾರೆ. 12 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳ ನೋಂದಾವಣೆಯಾಗಿದೆ. ತೆಂಗು ಬೆಳೆಗಾರರಿಗೆ ಹೆಚ್ಚಿನ ಆದಾಯಗಳಿಸಿಕೊಡುವ ನಿಟ್ಟಿನಲ್ಲಿ ಕಲ್ಪವೃಕ್ಷ, ಕಲ್ಪರಸ, ಕಲ್ಪಸಮೃದ್ಧಿ, ಕಲ್ಪಸಂಪರ್ಕ, ಕಲ್ಪಸೇವೆ ಎಂಬ 5 ಯೋಜನೆ ಜಾರಿಗೆ ತರಲಾಗಿದೆ. ತೆಂಗಿನ ಮರ, ತೆಂಗು ಕೊಯ್ಲುಗಾರರಿಗೆ ವಿಮಾ ಸೌಲಭ್ಯವೂ ಇದ್ದು ಯೋಜನೆಯ ಸೌಲಭ್ಯ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಸಂಘದ ಉಪಾಧ್ಯಕ್ಷ ಗಿರಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು, ತೆಂಗುಬೆಳೆಗಾರರು, ವಿವಿಧ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಬ್ಬಂದಿಗಳು ಸಹಕರಿಸಿದರು. ಸಂಘದ ಸಿಬ್ಬಂದಿಗಳಾದ ನವ್ಯಾ ಸ್ವಾಗತಿಸಿ, ಅಪರ್ಣ ವಂಧಿಸಿದರು. ನಿಶ್ವಿತಾ ಪ್ರಾರ್ಥಿಸಿದರು. ಡಾ| ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

ಉಚಿತ ವಿಮಾ ಯೋಜನೆ ನೋಂದಾವಣೆ
ತೆಂಗು ಕೊಯ್ಲುಗಾರರಿಗೆ ಸಂಸ್ಥೆಯ ವತಿಯಿಂದ ಆರಂಭಿಸಿರುವ ಉಚಿತ ವಿಮಾ ಯೋಜನೆಗೆ ನೋಂದಾವಣೆಯೂ ಈ ಸಂದರ್ಭದಲ್ಲಿ ನಡೆಯಿತು.

ಷೇರು ಪ್ರಮಾಣಪತ್ರ ವಿತರಣೆ:
ಸಂಘದ ಷೇರು ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ರೈತರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಲಲಿತಾ, ಹೂವಮ್ಮ, ಡೀಕಯ್ಯ ಗೌಡ, ಯಾದವ ಅವರಿಗೆ ಷೇರು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸುಬ್ರಹ್ಮಣ್ಯ ಅವರಿಗೆ ಸುರಕ್ಷಾ ವಿಮಾ ಪತ್ರ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here