5.36 ಲಕ್ಷ ರೂ.ನಿವ್ವಳ ಲಾಭ; ಶೇ.15 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 89 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.13ರಂದು ಬೆಳಿಗ್ಗೆ ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿಯವರು ಮಾತನಾಡಿ, ಸಂಘದಲ್ಲಿ 160 ಸಕ್ರೀಯ ಸದಸ್ಯರಿದ್ದು ಪ್ರತಿದಿನ 850 ಲೀಟರ್ ಹಾಲು ಸಂಗ್ರಹವಾಗುತ್ತಿದೆ. 2022-23ನೇ ಸಾಲಿನಲ್ಲಿ 97,16,462 ರೂ.ಮೌಲ್ಯದ ಹಾಲು ಸಂಗ್ರಹವಾಗಿದೆ. 9,02,290 ರೂಪಾಯಿಯ ಪಶು ಆಹಾರ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ವರದಿ ವರ್ಷದಲ್ಲಿ ಸಂಘವು 5,36,898 ರೂ.ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತೀ ಲೀ.ಹಾಲಿಗೆ 89 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಸದಸ್ಯರು ಶುದ್ಧವಾದ ಹಾಲನ್ನೇ ಸಂಘಕ್ಕೆ ಪೂರೈಕೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸಂಘಕ್ಕೆ ಹಾಲು ಪೂರೈಸುವ ಮೂಲಕ ಸಂಘದ ಪ್ರಗತಿಗೆ ಕೈ ಜೋಡಿಸಬೇಕೆಂದು ಕೇಶವ ಗೌಡ ಅಲೆಕ್ಕಿ ಹೇಳಿದರು.
ಸಂಘದ ಉಪಾಧ್ಯಕ್ಷ ಶಾಂತಾರಾಮ, ನಿರ್ದೇಶಕರಾದ ಕೆ.ಮಹಾವೀರ ಜೈನ್, ರಾಧಾಕೃಷ್ಣ ಕೆ., ವರ್ಗೀಸ್ ಅಬ್ರಹಾಂ, ಆನಂದ ಶೆಟ್ಟಿ, ಜೋನ್ ಅಬ್ರಹಾಂ, ರಾಜಶೇಖರ ನಾಯರ್, ಅಣ್ಣಿ ನಾಯಕ್, ಕೆ.ಟಿ.ವಲ್ಸಮ್ಮ, ರೋಸಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್‌ಕುಮಾರ್ ವರದಿ ಮಂಡಿಸಿದರು. ರಾಧಾಕೃಷ್ಣ ಕೆರ್ನಡ್ಕ ಸ್ವಾಗತಿಸಿ, ರಾಜಶೇಖರ ನಾಯರ್ ಮಾನಡ್ಕ ವಂದಿಸಿದರು. ಹಾಲು ಪರೀಕ್ಷಕ ತೇಜಸ್, ಸಹಾಯಕ ತನಿಯ ಸಹಕರಿಸಿದರು.
ಬಹುಮಾನ:
ವರದಿ ವರ್ಷದಲ್ಲಿ ಸಂಘಕ್ಕೆ 7285.8 ಲೀ.ಹಾಲು ಪೂರೈಸಿದ ಕೆ.ಸಿ.ವರ್ಗೀಸ್ ನೇರ್ಲ(ಪ್ರಥಮ) ಹಾಗೂ 6128.4 ಲೀ.ಹಾಲು ಪೂರೈಸಿದ ಸತೀಶ್‌ಕುಮಾರ್ ಬಿಜೇರು(ದ್ವಿತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.