ಸಾಂಪ್ರದಾಯಿಕ ಶೈಲಿಯಲ್ಲಿಯೇ ನಡೆದ ಶೋಭಾಯಾತ್ರೆ
ಪುತ್ತೂರು; ಕುಂಜಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಸೆ.19ರಂದು ನಡೆದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಸಂಜೆ ನಡೆದ ಗಣೇಶ ಶೋಭಾಯಾತ್ರೆಯಲ್ಲಿ ಡಿಜೆ ಶಬ್ದಗಳ ಅಬ್ಬರಗಳಿಲ್ಲದೆ ಬ್ಯಾಂಡ್, ವಾಲಗ, ಚೆಂಡೆಯೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ನೆರವೇರಿತು.
ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್ರವರ ನೇತೃತ್ವದಲ್ಲಿ ನಡೆದು ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣೇಶನ ವಿಗ್ರಹ ಆಗಮನದ ಬಳಿಕ ಬಿಂಬ ಶುದ್ಧಿ, ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, ಸೇವಾ ಪೂಜೆಗಳು ನೆರವೇರಿತು. ನಂತರ ಶಿವಮಣಿ ಭಜನಾ ತಂಡ ಶಿವನಗರ ಪುತ್ತೂರು ಇವರಿಂದ ಭಜನೆ ನಡೆಯಿತು.
ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ.ಮಾತನಾಡಿ, ಸನಾತನವಾದ ಹಿಂದು ಧರ್ಮದ ಆಚರಣೆ, ಸಂಪ್ರದಾಯ, ಸಂಸ್ಕಾರಗಳ ಹಿನ್ನೆಲೆ ಮಹತ್ವಗಳನ್ನು ತಿಳಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡುಯ್ಯುವಂತೆ ತಿಳಿಸಿದರು. ಸಂಘಟನೆಗಾಗಿ ಪ್ರಾರಂಭಗೊಂಡ ಗಣೇಶೋತ್ಸವವು ಇಂದು ಹಳ್ಳಿ ಹಳ್ಳಿಗಳಲ್ಲಿಯೂ ನಡೆಯುವ ಮೂಲಕ ಸಮಾಜದ ಸಂಘಟನೆಯಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ, ದೇವಸ್ಥಾನದಲ್ಲಿ ನಡೆಯಲಿರುವ ಸಹಸ್ರ ಚಂಡಿಕಾಯಾಗದ ಬಗ್ಗೆ ತಿಳಿಸಿದರು.
ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಜೋಯಿಸ ಯರ್ಮುಂಜ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಪಂಜಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಸ್ರ ಚಂಡಿಕಾ ಹೋಮದ ಆಮಂತ್ರಣ ಬಿಡುಗಡೆ:
ದೇವಸ್ಥಾನದಲ್ಲಿ ನಡೆಯಲಿರುವ ಸಹಸ್ರ ಚಂಡಿಕಾ ಹೋಮದ ಆಮಂತ್ರಣವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿತು.
ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಗ್ರಾಮಸ್ಥರಿಗೆ ನಡೆಸಲಾದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರು ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪೂವಪ್ಪ ದೇಂತಡ್ಕ ಸ್ವಾಗತಿಸಿ, ವಂದಿಸಿದರು. ಶ್ರೀಧರ ಕುಂಜಾರು ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೆಗ್ಡೆ ಇವರ ಸಾರಥ್ಯದಲ್ಲಿ ಪುನೀತ್ ಆರ್ಕೇಸ್ಟ್ರಾ ಇವರಿಂದ ಭಕ್ತ ರಸಮಂಜರಿ ನಡೆಯಿತು.
ಸಂಜೆ ಶ್ರೀ ಮಹಾಗಣಪತಿಗೆ ವಿಶೇಷ ರಂಗಪೂಜೆ, ಮಹಾಪೂಜೆ ನಡೆದ ಬಳಿಕ ಗಣೇಶ ವಿಗ್ರಹ ಶೋಭಾಯಾತ್ರೆ ನಡೆಯಿತು. ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆಯು ಮತಾವು, ಯರ್ಮುಂಜಪಳ್ಳ ಮಾರ್ಗವಾಗಿ ಕಡವ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಪಂಜಿಗುಡ್ಡೆ, ಜುಮಾದಿಪಲ್ಕೆ, ಮುಂಡಾಜೆ, ಹಾರಕರೆ, ಪಡೀಲು ತನಕ ಸಾಗಿ ಅಲ್ಲಿ ದೇವರಗುಂಡಿಯಲ್ಲಿ ಗಣೇಶನ ವಿಗ್ರಹದ ಜಲಸ್ಥಂಬನದೊಂದಿಗೆ 36ನೇ ವರ್ಷದ ಗಣೇಶೋತ್ಸವವು ಸಂಪನ್ನಗೊಂಡಿತು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು.