ಸೆ.30: ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಣೆಮಜಲು ಸೇವಾನಿವೃತ್ತಿ

0

ಕಡಬ: ಸರಕಾರಿ ಪ್ರೌಢಶಾಲೆ ಏನೆಕಲ್ಲು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ.ಇವರು ಸೆ.30ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.
ಕಡಬ ಗ್ರಾಮದ ಪಣೆಮಜಲು ಅಚ್ಚುತ ಮಾಸ್ತರ್ ಮತ್ತು ಸೀತಮ್ಮ ದಂಪತಿಯ ಪುತ್ರರಾದ ಇವರು ಪ್ರಾಥಮಿಕ ಶಿಕ್ಷಣವನ್ನು ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ಕಡಬ ಸರಕಾರಿ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಉಡುಪಿಯ ಕುರಾಡಿಯಲ್ಲಿ ಸಿ.ಪಿ.ಎಡ್ ತರಬೇತಿ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಹಾಗೂ ಬಿ.ಪಿ.ಎಡ್ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡರು.
ಇವರು ತಮ್ಮ ವೃತ್ತಿ ಜೀವನವನ್ನು 1987ರಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರಾಗಿ ಆರಂಭಿಸಿದ್ದರು. 1988ರಲ್ಲಿ ಕಡಬ ತಾಲೂಕು ಕುಟ್ರುಪ್ಪಾಡಿ ಸರಕಾರಿ ಹಿ.ಪ್ರಾ.ಶಾಲೆ, 1990ರಲ್ಲಿ ಕಡಬದ ಸರಕಾರಿ ಪ.ಪೂ.ಕಾಲೇಜಿಗೆ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯ ನಿರ್ವಹಿಸಿದ್ದರು. 28-09-2005ರಲ್ಲಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರಾಗಿ ಪದೋನ್ನತಿ ಹೊಂದಿ ಏನೆಕಲ್ಲು ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡು ಈ ತನಕ ಸೇವೆ ಸಲ್ಲಿಸಿರುತ್ತಾರೆ. ಇವರು 37 ವರ್ಷಗಳ ಸುದೀರ್ಘ ಸೇವೆಯನ್ನು ಗ್ರಾಮೀಣ ಪ್ರದೇಶದಲ್ಲಿಯೇ ನಿರ್ವಹಿಸಿರುವುದು ವಿಶೇಷವಾಗಿದೆ.
ಏನೆಕಲ್ಲು ಸರಕಾರಿ ಪ್ರೌಢಶಾಲೆಗೆ ದಾನಿಗಳ, ಶಾಸಕರ, ಸಂಘ ಸಂಸ್ಥೆಗಳ ಸಹಕಾರ ಪಡೆದು ಶಾಲಾ ಆಟದ ಮೈದಾನ ವಿಸ್ತರಣೆ, ತೆಂಗಿನ ಸಸಿ ನಾಟಿ, ಶಾಲಾ ಮಕ್ಕಳ ಕಲಿಕೆಗಾಗಿ ಸಮವಸ್ತ್ರ, ಪುಸ್ತಕ, ಲೇಖನಿ, ಪ್ರಿಂಟರ್, ಕ್ರೀಡಾ ಸಾಮಾಗ್ರಿ ದೊರಕಿಸಿಕೊಟ್ಟಿದ್ದಾರೆ. ಇವರಿಂದ ತರಬೇತು ಪಡೆದ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಏನೆಕಲ್ಲು ಶಾಲೆಯಲ್ಲಿ ಎರಡು ಸಲ ತಾಲೂಕು ಕ್ರೀಡಾಕೂಟ, ಎರಡು ಸಲ ಜಿಲ್ಲಾಮಟ್ಟದ ಪಂದ್ಯಾಟ ನಡೆಸಿರುತ್ತಾರೆ. ಹಲವು ಸಂಘ ಸಂಸ್ಥೆಗಳಲ್ಲೂ ತೊಡಗಿಸಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಹುದ್ದೆ ಅಲಂಕರಿಸಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ. ಕಡಬ ತಾಲೂಕಿನ ಯುವ ಸಬಲೀಕರಣ ಕ್ರೀಡಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಪತ್ನಿ ಭವಾನಿ ಕಡಬ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಪುತ್ರಿ ಡಾ.ಪ್ರತ್ಯುಷ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here