ಪುತ್ತೂರು: ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ರಾಷ್ಟ್ರೀಯ ಗಿಡಮೂಲಿಕೆ ವಿಭಾಗದಿಂದ ಕಡಬ, ಸುಳ್ಯ ತಾಲೂಕಿನಲ್ಲಿ ಅಗರ್‌ವುಡ್ ಕೃಷಿಯ ಸಸ್ಯಶಾಸ್ತ್ರೀಯ ಸಮೀಕ್ಷೆ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಭಾರತ ಸರಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯದ ಅಧೀನದ ಕೇಂದ್ರ ರಾಷ್ಟ್ರೀಯ ಗಿಡಮೂಲಿಕೆ ವಿಭಾಗದಿಂದ ಅಗರ್‌ವುಡ್ ಕೃಷಿಯ ಸಸ್ಯಶಾಸ್ತ್ರೀಯ ಸಮೀಕ್ಷೆಯು ಕಡಬ ತಾಲೂಕಿನ ಏನೆಕಲ್ಲು ಹಾಗೂ ಸುಳ್ಯ ತಾಲೂಕಿನ ಪಂಬೆತ್ತಾಡಿಯಲ್ಲಿ ನಡೆಯಿತು.
ಕೇಂದ್ರ ಸರಕಾರಕ್ಕೆ ಅಗರ್ವುಡ್ ಕೃಷಿ ಬಗ್ಗೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಸಸ್ಯಶಾಸ್ತ್ರಜ್ಞ ಹಾಗೂ ಅಗರ್‌ವುಡ್ ಸಮೀಕ್ಷಕ ಡಾ. ರಂಜಿತ್ ಲಯೋಲ ಎಂ.ಆರ್. ಕಡಬ ತಾಲೂಕಿನ ಏನೆಕಲ್ಲು ಕಾರ್ಯಪ್ಪ ಗೌಡ ಪುಂಡಿಗದ್ದೆ ಹಾಗೂ ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಅಗರ್ವುಡ್ ಕೃಷಿಕ ತೀರ್ಥಾನಂದ ಕೊಡಂಕಿರಿ ತೋಟದಲ್ಲಿ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಯನ್ನು ಅಗರ್‌ವುಡ್ ಕೃಷಿ ಕುರಿತು ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿರುವ ವನದುರ್ಗಿ ಅಗರ್ವುಡ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ನಡೆಸಲಾಯಿತು.
ಏನಿದು ಅಗರ್‌ವುಡ್ ?
ಅಗರ್‌ವುಡ್ ಅಂತ ಕರೆಸಿಕೊಳ್ಳುವ ಮರ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಔದ್ ಎಂಬ ಸುವಾಸನಾ ದ್ರವ್ಯಕ್ಕೆ ಬಳಕೆಯಾಗುವಂಥದ್ದು, ಇದರ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖವಿರುವುದು ನಮ್ಮ ವೇದಗಳಲ್ಲೇ. ಹಾಗಾಗಿ ಸಾವಿರಾರು ವರ್ಷಗಳ ಹಿಂದೆಯೇ ಇದರ ಉಪಯೋಗ ಭಾರತೀಯರಿಗೆ ತಿಳಿದಿತ್ತು. ಸಂಸ್ಕೃತದಲ್ಲಿ ಇದನ್ನು ಅಗುರು ಅನ್ನುವ ಹೆಸರಿನಿಂದ ಕರೆಯುತ್ತಾರೆ. ಕನ್ನಡದಲ್ಲೂ ಅದೇ ಹೆಸರು ಬಳಕೆಯಲ್ಲಿದೆ. ಆಕ್ವಿಲೇರಿಯಾ ಅಂತ ವೈಜ್ಞಾನಿಕವಾಗಿ ಕರೆಯಲ್ಪಡುವ ಒಂದು ಸಸ್ಯಪ್ರಭೇಧವೇ ಈ ಅಗರ್‌ವುಡ್. ಮಳೆಕಾಡುಗಳಲ್ಲಿ ಬೆಳೆಯುವ ಈ ಮರದಲ್ಲಿ ಸುಮಾರು ಹದಿನೇಳು ಉಪಜಾತಿಗಳಿವೆ.
ಈ ಮರಗಳಿಗೆ ಒಂದು ರೀತಿಯ ಶಿಲೀಂದ್ರ (ಫಂಗಸ್) ಸೋಂಕು ಉಂಟಾಗಿ ಈ ಮರಗಳ ತಿರುಳಿನ ಭಾಗದಲ್ಲಿ ದಟ್ಟ ಕಂದು – ಕಪ್ಪು ಬಣ್ಣದ ಅಂಟು ಸ್ರವಿಸುತ್ತದೆ ಮತ್ತು ಕೆಲ ವರ್ಷಗಳಲ್ಲಿ ಮರದ ತಿರುಳು ಗಟ್ಟಿಯಾಗಿ ಕಡು ಕಂದುಬಣ್ಣಕ್ಕೆ ತಿರುಗುತ್ತದೆ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು ಇದನ್ನು ಉರಿಸಿದರೆ ಆಹ್ಲಾದಕರವಾದ ಪರಿಮಳ ಬರುತ್ತದೆ. ಇದರಿಂದ ತೈಲವನ್ನೂ ತಯಾರಿಸಲಾಗುತ್ತದೆ. ಹಾಗಾಗಿ ಇದಕ್ಕೆ ಜಾಗತಿಕವಾಗಿ ಬಹಳಷ್ಟು ಬೇಡಿಕೆ ಮತ್ತು ಬಹಳ ಬೆಲೆಯೂ ಇದೆ. ಹೆಚ್ಚಾಗಿ ಯುರೋಪ್ ಮತ್ತು ಅರಬ್ ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಸುಗಂಧ ದ್ರವ್ಯ ತಯಾರಿಕಾ ಕೈಗಾರಿಕೆಗಳೂ ಇದನ್ನು ಬಳಸಿಕೊಂಡು ಅತ್ಯುಕೃಷ್ಟವಾದ ಸುಗಂಧವನ್ನು ತಯಾರಿಸುತ್ತದೆ. ಫ್ರಾನ್ಸ್ ದೇಶದ ಖ್ಯಾತ ಪರ್ಪ್ಯೂಮ್ ಕಂಪೆನಿಗಳು ಔದ್ ಹೆಸರಿನ ಅತ್ಯುಕೃಷ್ಟ ಮತ್ತು ಅತಿ ಬೆಲೆಬಾಳುವ ಸುಗಂಧವನ್ನು ತಯಾರಿಸುತ್ತವೆ. ಹೀಗಾಗಿ ಅಗರ್‌ವುಡ್ ಗೆ ಜಾಗತಿಕವಾಗಿ ಒಳ್ಳೆಯ ಬೇಡಿಕೆ ಮತ್ತು ಬೆಲೆ ಎರಡೂ ಇದೆ.
ಮಾಮೂಲಿಯಾಗಿ ದಟ್ಟ ಮಳೆಕಾಡುಗಳಲ್ಲಿ ಬೆಳೆಯುವ ಆಕ್ವಿಲೇರಿಯಾ ಪ್ರಭೇದದ ಹಲವಾರು ಉಪಜಾತಿಯ ಮರಗಳಿಗೆ ಒಂದು ನಿರ್ದಿಷ್ಟ ಶಿಲೀಂಧ್ರ ಸೋಂಕು ಉಂಟಾಗಿ ಆ ಮರದ ತಿರುಳಿನಲ್ಲಿ ಅಗರ್‌ವುಡ್ ಉತ್ಪತ್ತಿಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಆಕ್ಟಿಲೇರಿಯಾ ಜಾತಿಯ ಮರಗಳು ವಿನಾಶದ ಅಂಚಿನಲ್ಲಿದ್ದು ಕಾಡಿನಲ್ಲಿ ಸಹಜವಾಗಿ ಸಿಗುವ ಅಗರ್‌ವುಡ್ ತೀರಾ ದುರ್ಲಭವಾಗಿದೆ. ಹಾಗಾಗಿ ಅಗರ್‌ವುಡ್ ನ ಕೃಷಿ ಶುರುವಾಯಿತು. ಆಕ್ಟಿಲೇರಿಯಾ ಮರಗಳಲ್ಲಿ ಕೆಲವು ಉಪಜಾತಿಗಳನ್ನು ಗುರುತಿಸಿ ಅವುಗಳಿಗೆ ಶಿಲೀಂಧ್ರವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೃತಕವಾಗಿ ಸೋಂಕಿಗೊಳಪಡಿಸಲಾಗುತ್ತದೆ. ಹೀಗೆ ಶಿಲೀಂದ್ರ ಸೋಂಕಿಗೊಳಗಾದ ಮರಗಳ ತಿರುಳಿನಲ್ಲಿ ಆ ವಿಶಿಷ್ಟ ಪರಿಮಳದ ಅಂಟು ಉತ್ಪತ್ತಿಯಾಗಿ ಕೆಲ ವರ್ಷಗಳಲ್ಲಿ ಅದು ತಿರುಳಿನ ತುಂಬಾ ವ್ಯಾಪಿಸಿ ಗಟ್ಟಿಯಾಗುತ್ತದೆ. ಭಾರತದಲ್ಲಿ ಮೊದಲಿಗೆ ಅಸ್ಸಾಮ್ ನಲ್ಲಿ ಈ ರೀತಿ ಅಗರ್‌ವುಡ್ ನ ಕೃತಕ ಕೃಷಿ ಪ್ರಾರಂಭವಾಯಿತು. ಇದೀಗ ಈ ಕೃಷಿಯನ್ನು ಪುತ್ತೂರು, ಕಡಬ, ಸುಳ್ಯ ತಾಲೂಕಿನಲ್ಲೂ ಬೆಳೆಸಲಾಗುತ್ತಿದೆ.