ಪುತ್ತೂರು ಶಾರದೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುವ ಸಂಕಲ್ಪ

0

ಅ.24ರ ಶೋಭಯಾತ್ರೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ಉದ್ಘಾಟನೆ – ಸೀತಾರಾಮ ರೈ

ಪುತ್ತೂರು: ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರಲ್ಲಿ ನಡೆಯುವ ನವರಾತ್ರಿ ಉತ್ಸವವನ್ನು ನಾಡಹಬ್ಬದಂತೆ ಆಚರಿಸಬೇಕೆಂಬ ಸಂಕಲ್ಪವಾಗಿದೆ. ಅ.15 ರಿಂದ 24ರ ತನಕ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಅ.24ರಂದು ನಡೆಯುವ ಶೋಭಯಾತ್ರೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ ಎಂದು ಶಾರದೋತ್ಸವ ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿ ಗುತ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಅ.24ರಂದು ಸಂಜೆ ಬೊಳುವಾರಿನಲ್ಲಿ ಶೋಭಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಯಾತ್ರೆಯಲ್ಲಿ ಜನಪದ ನೃತ್ಯ, ಸ್ತಬ್ದ ಚಿತ್ರಗಳು, 80 ಭಜನಾ ತಂಡಗಳ 1300 ಭಜಕರಿಂದ ನೃತ್ಯ ಭಜನೆ, 1500 ಭಜಕರು ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪುತ್ತೂರಿನ ಇತಿಹಾಸದಲ್ಲಿ ಸಮಾಜದ ಎಲ್ಲಾ ಜಾತಿ ಬಾಂಧವರಿಂದ ಸ್ತಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಶ್ರೀ ಶಾರದೆಗೆ ಮುಡಿ ತುಂಬಾ ಮಲ್ಲಿಗೆ ಅಲಂಕಾರ ಮಾಡಲಾಗುತ್ತದೆ. ಶೋಭಾಯಾತ್ರೆಯು ಬೊಳುವಾರಿನಿಂದ ದರ್ಬೆಯ ತನಕ ತೆರಳಿ ಅಲ್ಲಿಂದ ಪರ್ಲಡ್ಕ ಮಾರ್ಗವಾಗಿ ಬರಲಿದೆ ಎಂದು ಅವರು ಹೇಳಿದರು. ಒಟ್ಟು ಕಾರ್ಯಕ್ರಮಕ್ಕೆ ಸುಮಾರು ರೂ. 25 ಲಕ್ಷ ವೆಚ್ಚ ತಗಲುವ ಸಾಧ್ಯತೆ ಇದೆ. ಸಾದ್ಯವಾದಷ್ಟು ಸಾರ್ವಜನಿಕರು ಸಹಕಾರ ನೀಡುವಂತೆ ಅವರು ವಿನಂತಿಸಿದರು.


ದರ್ಬೆಯಿಂದ ಬೊಳುವಾರು ತನಕ ರಸ್ತೆಯುದಕ್ಕೂ ದೀಪಾಲಂಕಾರ
ಪುತ್ತೂರಿನಲ್ಲಿ ಶಾರದೋತ್ಸವ ಅದ್ದೂರಿಯಾಗಿ ನಡೆಯಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಪೇಟೆಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಳಿಸಲಾಗುವುದು. ದರ್ಬೆಯಿಂದ ಬೊಳುವಾರು ತನಕ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಉತ್ಸವ ಸಮಿತಿ ಸಹ ಸಂಚಾಲಕ ನವೀನ್ ಕುಲಾಲ್, ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆ.ಸಾಯಿರಾಮ್ ರಾವ್, ಪ್ರಧಾನ ಕಾರ್ಯದರ್ಶಿ ಕೆ.ಜಯಂತ ಉರ್ಲಾಂಡಿ ಉಪಸ್ಥಿತರಿದ್ದರು.

ಸ್ತಬ್ದ ಚಿತ್ರಗಳ ನೋಂದಾವಣೆಗೆ ಅ.17 ಕೊನೆ ಅವಕಾಶ
ಈ ಹಿಂದೆ ಸ್ತಬ್ದ ಚಿತ್ರಗಳಿಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಆದರೆ ಅದಕ್ಕೆ ಯಾರೂ ಮುಂದೆ ಬಾರದ ಹಿನ್ನಲೆಯಲ್ಲಿ ಸಮಿತಿ ವತಿಯಿಂದಲೇ ಸ್ತಬ್ದ ಚಿತ್ರಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸುಮಾರು 15 ನೋಂದಾವಣೆಯಾಗಿವೆ. ಉಳಿದವರು ನೋಂದಾವಣೆ ಮಾಡಲು ಅ.17 ರ ತನಕ ಅವಕಾಶವಿದೆ ಎಂದು ಸೀತಾರಾಮ ರೈ ಕೆದಂಬಾಡಿ ಗುತ್ತು ಹೇಳಿದರು.

ಡಿಜೆಗೆ ಅವಕಾಶವಿಲ್ಲ, ಪಟಾಕಿ ನಿಷೇಧ
ಶಾರದೋತ್ಸವ ಧಾರ್ಮಿಕ ಭಾವನೆಯಲ್ಲಿ ನಡೆಯುವ ಹಿನ್ನೆಲೆಯಲ್ಲಿ ಶೋಭಯಾತ್ರೆಯಲ್ಲಿ ಡಿ.ಜೆ.ಗೆ ಅವಕಾಶವಿಲ್ಲ. ಇದರ ಜೊತೆಗೆ ಪಟಾಕಿಯನ್ನು ನಿಷೇಧಿಸಲಾಗಿದೆ. ಸ್ತಬ್ದಚಿತ್ರಗಳಲ್ಲಿ ದೈವರಾಧನೆಯನ್ನು ಬಿಂಬಿಸುವಂತಿಲ್ಲ. ಈ ಕುರಿತು ಸ್ತಬ್ದ ಚಿತ್ರಗಳ ಸಂಘಟಕರಿಗೆ ಸೂಚನೆ ನೀಡಲಾಗುತ್ತದೆ.
ಸೀತಾರಾಮ ರೈ ಕೆದಂಬಾಡಿಗುತ್ತು. ಸಂಚಾಲಕರು ಶೋಭಯಾತ್ರೆ
ಶ್ರೀ ಶಾರದೋತ್ಸವ ಸಮಿತಿ ಪುತ್ತೂರು

LEAVE A REPLY

Please enter your comment!
Please enter your name here