ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಪುನರುತ್ಥಾನ ಕಾರ್ಯಗಳ ಪೈಕಿ ಅನ್ನಛತ್ರ ನಿರ್ಮಾಣ, ಪುಷ್ಕರಣಿಯ ಪುನರುತ್ಥಾನ ನಿಧಿ ಸಂಚಯನ ಕುರಿತು ಅ. 15 ರಂದು ನಡೆದ ಭಕ್ತರ ಮಹಾಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು , ಪುತ್ತಿಲ ಪರಿವಾರ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ ಜೊತೆಯಾಗಿ ಕಾಣಿಸಿಕೊಂಡರು. ಅದರಲ್ಲೂ ಸಭೆಯ ಆರಂಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಅರುಣ್ ಕುಮಾರ್ ಪುತ್ತಿಲ ಮುಂಭಾಗದ ಚಯರ್ನಲ್ಲಿ ಕುಳಿತು ಕೆಲ ಕಾಲ ಮಾತುಕತೆ ನಡೆಸಿರುವುದು ದೇವಳದ ವಿಚಾರದಲ್ಲಿ ರಾಜಕೀಯ ಬದಿಗಿಟ್ಟಿರುವುದು ಎಲ್ಲರ ಗಮನ ಸೆಳೆಯಿತು.
ಸಭೆಯ ಆರಂಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಸಭೆಯ ಮುಂದಿನ ಆಸನದಲ್ಲಿ ಕುಳಿತಿದ್ದರು. ಇದೇ ವೇಳೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಮಾಜಿ ಶಾಸಕರ ಪಕ್ಕದಲ್ಲೇ ಕುಳಿತುಕೊಂಡರು. ಬಳಿಕ ಅವರಿಬ್ಬರು ಮಾತುಕತೆಯಲ್ಲಿ ತೊಡಗಿದರು. ಈ ಸಂದರ್ಭ ಕಾಂಗ್ರೆಸ್ ನಾಯಕ ಕೃಷ್ಣಪ್ರಸಾದ್ ಆಳ್ವ ಕೂಡಾ ಅವರ ಜೊತೆ ಇದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿದ ಬಳಿಕ ಮಾಜಿ ಶಾಸಕ ಸಂಜೀವ ಮಠಂದೂರು, ಪಿ.ಜಿ.ಜಗನ್ನಿವಾಸ ರಾವ್ ಮತ್ತು ದೇವದಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ದೀಪ ಪ್ರಜ್ವಲಿಸಿದರು.ಇದಾದ ಬಳಿಕ ಶಾಸಕರ ಸೂಚನೆಯಂತೆ ಅರುಣ್ ಕುಮಾರ್ ಪುತ್ತಿಲ ಮತ್ತು ಮುರಳಿಕೃಷ್ಣ ಹಸಂತಡ್ಕ ಜತೆಯಾಗಿ ದೀಪ ಪ್ರಜ್ವಲಿಸಿದರು. ಈ ಎಲ್ಲಾ ಬೆಳವಣಿಗೆಯ ಮೂಲಕ ರಾಜಕೀಯ ದೇವಸ್ಥಾನದ ಹೊರಗೆ ಮಾತ್ರ ಒಳಗೆ ಇಲ್ಲ ಎಂದು ತೋರಿಸಿಕೊಟ್ಟರು. ಇದಕ್ಕೆ ಪೂರಕ ಎನ್ನುವಂತೆ ಶಾಸಕರು ತಮ್ಮ ಭಾಷಣದಲ್ಲಿ ದೇವಸ್ಥಾನದ ಒಳಗೆ ಬರುವಾಗ ಪಾದರಕ್ಷೆಯನ್ನು ಹೊರಗೆ ಬಿಟ್ಟು ಬಂದಂತೆ ರಾಜಕೀಯವನ್ನೂ ಬಿಟ್ಟು ಬರಬೇಕೆಂದು ಹೇಳಿದರು.ಒಟ್ಟಿನಲ್ಲಿ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ನಾಯಕರುಗಳು ಒಂದಾಗಿ ನಿಂತಿರುವುದು ಭಕ್ತರ ಸಂತೋಷಕ್ಕೆ ಕಾರಣವಾಯಿತು.