ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ
ಸಮೂಹ ಶಿಕ್ಷಣ ಸಂಸ್ಥೆಯ 7 ವಿದ್ಯಾ ಸಂಸ್ಥೆಗಳ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
ಕಾಲೇಜು ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ
ಪುತ್ತೂರು:ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾಗಿದ್ದ ಮಾನ್ಸಿಂಜರ್ ಆಂಟನಿ ಪತ್ರಾವೋರವರ ಸಂಸ್ಥಾಪಕರ ದಿನದ ಕ್ರೀಡಾಕೂಟವು ಅ.31ರಂದು ಕ್ರೀಡಾಕೂಟವು ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟದಿಂದ ಕಾಲೇಜಿನ ಕ್ಯಾಂಪಸ್ ಹಬ್ಬದ ವಾತಾವರಣದಲ್ಲಿ ಮೇಲೈಸುತ್ತಿದೆ.
ಕ್ರೀಡಾಕೂಟದ ಪ್ರಾರಂಭದಲ್ಲಿ ಸಂಸ್ಥಾಪಕರ ಪ್ರತಿಮೆಗೆ ಅತಿಥಿಗಳು ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಅತಿಥಿಗಳನ್ನು ಬ್ಯಾಂಡ್, ವಾಲಗ, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಕ್ರೀಡಾಂಗಣದ ವೇದಿಕೆಗೆ ಕರೆತರಲಾಯಿತು. ನಂತರ ನಡೆದ ಸಮೂಹ ಸಂಸ್ಥೆಗಳ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನದಲ್ಲಿ ಮುಖ್ಯ ಅತಿಥಿ ಮಧು ಎಸ್ ಮನೋಹರ್ ಗೌರವ ವಂದನೆ ಸ್ವೀಕರಿಸಿದರು. ರೋವರ್ ರೇಂಜರ‍್ಸ್ ಪಥ ಸಂಚಲನದ ಮುಂದಾಳತ್ವನ್ನು ವಹಿಸಿದ್ದರು. ಎನ್‌ಸಿಸಿ ಕೆಡೆಟ್‌ಗಳು, ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾ ಸಂಸ್ಥೆಗಳಾದ ಮಾಯಿದೇ ದೇವುಸ್ ಶಾಲೆ, ಸಂತ ವಿಕ್ಟರಣ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ, ಸಂತ ಫಿಲೋಮಿನಾ ಹಿ.ಪ್ರಾ ಶಾಲೆ, ಸಂತ ವಿಕ್ಟರಣ ಬಾಲಿಕ ಪ್ರೌಢಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರದಿಂದ ಶಿಸ್ತು ಬದ್ಧವಾಗಿ ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಂತರ ಬಲೂನ್ ಗೊಂಚಲುಗಳನ್ನು ಬಾನೆತ್ತರಕ್ಕೆ ಹಾರಿಸಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾ ಜ್ಯೋತಿ ಆಗಮನ, ಪ್ರತಿಜ್ಞೆ ಸ್ವೀಕಾರ:
ಕ್ರೀಡಾಕೂಟದಲ್ಲಿ ಸಂಸ್ಥೆಯ ದಿವ್ಯಜ್ಯೋತಿ ಪ್ರಾರ್ಥನಾ ಮಂದಿರದ ಬಳಿಯಿಂದ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ಆಗಮಿಸಿತು. ಎತ್ತರ ಜಿಗಿತದಲ್ಲಿ ದಕ್ಷಿಣ ಭಾರತದಲ್ಲಿ ಬೆಳ್ಳಿ ಪದಕ ವಿಜೇತ ಆದರ್ಶ ಶೆಟ್ಟಿ ಕ್ರೀಡಾಜ್ಯೋತಿ ಅತಿಥಿಗಳಿಗೆ ಹಸ್ತಾಂತರಿಸುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ಆದರ್ಶ ಶೆಟ್ಟಿ ಜ್ಯೋತಿ ಪ್ರಜ್ವಲಿಸಿದರು. ಕ್ರೀಡಾಕೂಟದಲ್ಲಿ ದಕ್ಷಿಣ ಭಾರತ ಮಟ್ಟದ ಹ್ಯಾಮರ್ ಎಸೆತದ ಬೆಳ್ಳಿ ಪದಕ ವಿಜೇತ ವರ್ಷಾ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಕ್ರೀಡಾ ಸ್ಪೂರ್ತಿ ಜೀವನದಲ್ಲಿ ನಿರಂತರವಾಗಿರಬೇಕು-ಮಧು ಎಸ್ ಮನೋಹರ್:
ಕ್ರೀಡಾಕೂಟವನ್ನು ಉದ್ಘಾಟಿಸಿ, ಚಾಲನೆ ನೀಡಿದ ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರ ಹೆಜ್ಜೆಗಳು ವಿಭಿನ್ನನವಾಗಿರುತ್ತದೆ. ಪ್ರತಿಭೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅವರದ್ದೇ ಆದ ಆಲೋಚನೆಗಳಿರುತ್ತದೆ. ಅದರಲ್ಲಿ ಮುಂದುವರಿಯಲು ಕ್ರೀಡೆಯು ಒಂದು ದಾರಿ. ಚಿಕ್ಕಂದಿನಲ್ಲಿರುವ ಕ್ರೀಡಾ ಸ್ಪೂರ್ತಿಯನ್ನು ಜೀವನದಲ್ಲಿ ಯಾವುದೇ ಕಾರಣಕ್ಕೆ ಸ್ಥಗಿತಗೊಳಿಸಬಾರದು. ನಮ್ಮ ಮುಂದಿನ ಜೀವನದಲ್ಲಿಯೂ ನಿರಂತರವಾಗಿ ಅಳವಡಿಸಿಕೊಳ್ಳಬೇಕು. ಕ್ರೀಡೆ ನಮ್ಮನ್ನು ದೈಹಿಕವಾಗಿ ಕ್ರಿಯಾಶೀಲರನ್ನಾಗಿಸುತ್ತದೆ. ಕ್ರೀಡೆಯು ಎಲ್ಲರನ್ನೂ ಒಟ್ಟು ಸೇರಿಸುತ್ತದೆ. ವಿಭಜನೆ ಆಗುವುದಿಲ್ಲ. ಕ್ರೀಡೆಯಲ್ಲಿ ಸೋತವರು ಜೀನವದಲ್ಲಿ ಸೋತಂತೆ ಅಲ್ಲ. ಸೋಲಿನಿಂದ ಯಶಸ್ಸು ಕಾಣಬೇಕು. ಸೋಲು, ಗೆಲುವು ಸಾಮಾನ್ಯವಾಗಿದ್ದು ಪ್ರತಿಯೊಬ್ಬರೂ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು ಎಂದರು.
ವಿದ್ಯಾರ್ಥಿಗಳ ಪ್ರತಿಭೆ ಬೆಳಗಿ, ಜೀವನದ ಸಾಧನೆಗೆ ಕ್ರೀಡಾಕೂಟ ಅವಕಾಶ-ಲಾರೆನ್ಸ್ ಮಸ್ಕರೇನಸ್:
ಅಧ್ಯಕ್ಷತೆ ವಹಿಸಿದ್ದ ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಆರು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಸಮೂಹ ಸಂಸ್ಥೆಯ ಶಿಕ್ಷಣ ಸಂಸ್ಥೆಗಳು ಒಂದೇ ಮರದ ಕೊಂಬೆಗಳಾಗಿದೆ. ಕ್ರೀಡಾಕೂಟದ ಮೂಲಕ ಎಲ್ಲಾ ಸಂಸ್ಥೆಗಳು ಒಟ್ಟು ಸೇರಲು ಅವಕಾಶವಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆ ಅರಳಲು ಹಾಗೂ ಜೀವನದಲ್ಲಿ ಸಾಧನೆಗೆ ಮತ್ತೊಂದು ಅವಕಾಶವಾಗಿದೆ ಎಂದ ಅವರು ಆರೋಗ್ಯ ಪೂರ್ಣ ಸಮಾಜ ಕಟ್ಟುವ ಹೊಣೆ ನಮ್ಮದು. ಈ ನಿಟ್ಟಿನಲ್ಲಿ ಡ್ರಗ್ಸ್ ವಿರೋಧಿ ಜಾಗೃತಿ ಜಾಥಾವನ್ನು ನಡೆಸಲಾಗಿದೆ. ಕ್ರೀಡೆಯು ಅದಕ್ಕೆ ಪೂರಕವಾಗಿದ್ದು ಉತ್ತಮ ವ್ಯಾಯಮ ನೀಡುತ್ತದೆ. ಕ್ರೀಡಾ ಚಟುವಟಿಕೆಗಳು ದೈಹಿಕ, ಮಾನಸಿಕ ಜೀವನವನ್ನು ಉತ್ತಮವಾಗಿಸುತ್ತದೆ. ನಾವೆಲ್ಲರೂ ಕೆಡುಕುಗಳನ್ನು ದೂರಮಾಡಿ ಉತ್ತಮ ವಿಚಾರಗಳ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಜೀವನ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಹೇಳಿದರು.
ಕ್ರೀಡಾಕೂಟದಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರಲ್ಲಿ ನೈತಿಕ ಬಲ ವೃದ್ಧಿ-ಅಶೋಕ್ ರೆಯಾನ್ ಕ್ರಾಸ್ಟಾ:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಯಾನ್ ಕ್ರಾಸ್ಟಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದೂರದರ್ಶಿತ್ವದ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದು ಗುಣಮಟ್ಟದ ವಿದ್ಯಾ ಸಂಸ್ಥೆಗಳನ್ನು ಬೆಳಸಲು ಸಹಕಾರಿಯಾಗಿದೆ. ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ವಿದ್ಯಾರ್ಜನೆ ಮಾಡುತ್ತಿದ್ದು ಸಮಾಜವನ್ನು ಆರ್ಥಿಕತೆಯಿಂದ ಗಟ್ಟಿಗೊಳಿಸುವಲ್ಲಿ ಸಂಸ್ಥೆಯ ಕೊಡುಗೆ ಶ್ಲಾಘನೀಯವಾದುದು. ಸಂಸ್ಥಾಪಕರ ಸ್ಮರಣಾರ್ಥಕವಾಗಿ ಕ್ರೀಡಾ ಕೂಟವು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಲ್ಲಿ ನೈತಿಕ ಬಲ ವೃದ್ಧಿಸಿದೆ. ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿ ಪ್ರತಿಭೆಗಳನ್ನು ತೋರ್ಪಡಿಸಿ, ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಸಂತ ಫಿಲೋಮಿನಾ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋ, ಸಂತ ಫಿಲೋಮೊನಾ ಕಾಲೇಜಿನ ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೋಂತೇರೋ, ಸಂತ ಫಿಲೋಮಿನಾ ಪ್ರೌಢಶಾಲಾ ಮುಖ್ಯ ಗುರು ಮ್ಯಾಕ್ಸಿಮ್ ಡಿ ಸೋಜ, ಸಂತ ವಿಕ್ಟರಣ ಬಾಲಿಕಾ ಪ್ರೌಢಶಾಲಾ ಮುಖ್ಯಗುರು ರೋಸ್ಲಿನ್ ಲೋಬೋ, ಸಂತ ವಿಕ್ಟರ‍್ಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಹ್ಯಾರಿ ಡಿ ಸೋಜ, ಮಾದೇ ದೇವುಸ್ ಪ್ರಾಥಮಿಕ ಶಾಲಾ ಮುಖ್ಯ ಗುರು ಜೂಲಿಯಸ್ ತಾವ್ರೋ, ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಲೋರಾ ಪಾಸ್, ಹಾಸ್ಟಲ್ ವಾರ್ಡ್‌ನ್‌ಗಳಾದ ರೂಪೇಶ್ ತಾವ್ರೋ, ಲೂರ‍್ಡ್ ಮೇರಿ ಹಾಗೂ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲ ಅಶೋಕ್ ರೆಯಾನ್ ಕ್ರಾಸ್ಟಾ ಸ್ವಾಗತಿಸಿದರು. ಮಾಯಿದೇ ದೇವುಸ್ ಚರ್ಚ್‌ನ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟಾ ವಂದಿಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಕ್ರೀಡಾಕೂಟದಲ್ಲಿ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿ, ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಸುದ್ದಿ ಲೈವ್ ನಲ್ಲಿ ನೇರ ಪ್ರಸಾರ
ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟ ಸುದ್ದಿ ಲೈವ್ ನಲ್ಲಿ ನೇರ ಪ್ರಸಾರಗೊಳ್ಳುತ್ತಿದೆ.