ಉಪ್ಪಿನಂಗಡಿ: ಹಣ ಗಳಿಸುವ ಪಾಠಕ್ಕಿಂತ ಸಮಾಜದಲ್ಲಿ ಉತ್ತಮರಾಗಿ ಬದುಕುವ ಪಾಠ ನಮಗೆ ಮುಖ್ಯ. ಅದನ್ನು ಕೊಡುವವಳು ತಾಯಿಯಾಗಿದ್ದು, ಆದ್ದರಿಂದ ಪ್ರತಿ ಮನೆಯಲ್ಲೂ ತಾಯಂದಿರು ಮಕ್ಕಳಿಗೆ ನಮ್ಮ ಧರ್ಮದ ಸಂಸ್ಕಾರ- ಸಂಸ್ಕೃತಿಯನ್ನು ಹೇಳಿಕೊಡುವ ಮೂಲಕ ಮಕ್ಕಳನ್ನು ಸುಸಂಸ್ಕೃತ ನಾಗರಿಕರನ್ನಾಗಿಸಬೇಕು ಎಂದು ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಪುತ್ತಿಲ ಪರಿವಾರದ ವತಿಯಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನ.26ರಂದು ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಎಲ್ಲರಿಗೂ ಒಳಿತನ್ನು ಬಯಸುವುದೇ ಹಿಂದೂ ಧರ್ಮದ ಶ್ರೇಷ್ಟತೆಯಾಗಿದ್ದು, ಹಿಂದೂ ಧರ್ಮದ ಸಂಸ್ಕಾರ- ಸಂಸ್ಕೃತಿಯಿಂದಾಗಿ ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಹಿಂದೂ ಧರ್ಮದ ಯೋಚನೆ, ಚಿಂತನೆ ಸದಾಕಾಲ ವೈಜ್ಞಾನಿಕವಾಗಿದ್ದು, ನಮ್ಮ ಪ್ರತಿಯೊಂದು ಆಚರಣೆಯಲ್ಲಿಯೂ ವೈಜ್ಞಾನಿಕ ಸತ್ಯ ಅಡಗಿದೆ. ಆದ್ದರಿಂದ ಮಕ್ಕಳಿಂದ ಮೊಬೈಲ್ ಹಾಗೂ ಟಿ.ವಿ. ರಿಮೋಟ್‌ಗಳನ್ನು ದೂರವಿಟ್ಟು ಅವರಿಗೆ ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳನ್ನು ಹೇಳುವ ಮೂಲಕ ಅವರಿಗೆ ಬದುಕುವ ಶಿಕ್ಷಣವನ್ನು ಮನೆಯಲ್ಲಿ ಹೇಳಿಕೊಡಬೇಕಾಗಿದೆ. ಪೃಥ್ವಿರಾಜ್ ಚೌಹ್ಹಾಣ್, ಛತ್ರಪತಿ ಶಿವಾಜಿಯಂತವರ ಪರಂಪರೆ, ಸ್ವಾಮಿ ವಿವೇಕಾನಂದ, ಸುಭಾಶ್‌ಚಂದ್ರ ಬೋಸ್‌ರಂತವರ ಆದರ್ಶಗಳನ್ನು ಮಕ್ಕಳಿಗೆ ತುಂಬುವ ಕೆಲಸವಾಗಬೇಕು. ಈ ವಿಜಯಯಾತ್ರೆಯ ಅಂತಿಮ ಗುರಿ ಹಿಂದೂ ರಾಷ್ಟ್ರದ ನಿರ್ಮಾಣವಾಗಿದ್ದು, ಹಿಂದೂಗಳ ಧ್ವನಿ ಇನ್ನಷ್ಟು ಜಾಸ್ತಿಯಾದಾಗ ಹಿಂದೂ ರಾಷ್ಟ್ರ ನಿರ್ಮಾಣ, ಅಖಂಡ ಭಾರತ ನಿರ್ಮಾಣಕ್ಕೆ ಸ್ವರ್ಣ ಸಂಧಿಕಾಲ ಬರಲಿದೆ ಎಂದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಗೋಮಾಳಗಳನ್ನು ಅತಿಕ್ರಮಣ ಮಾಡಿ ಮತಾಂಧರಿಗೆ ಮನೆ ನಿರ್ಮಾಣದಂತಹ ಕೆಲಸ ಮಾಡುತ್ತಿದೆ. ಮತಾಂಧ ಶಕ್ತಿಗಳನ್ನು ಮಟ್ಟ ಹಾಕಬೇಕಾದರೆ ನಾವೆಲ್ಲಾ ಒಗ್ಗೂಡಬೇಕಾಗಿದ್ದು, ಸರಕಾರದ ವಿರುದ್ಧ ಸಮಾಜವನ್ನು ಜಾಗೃಗೊಳಿಸುವ ಕಾರ್ಯ ಮಾಡಬೇಕು. ಹಿಂದೂ ಸಮಾಜ ಎಡವಿದ ಕಾರಣ ಇಂದು ಸರಕಾರ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುತ್ತಿದೆ. ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲು ನೋಡುತ್ತಿದೆ. ಆದರೆ ನಾವು ಪಲಾಯನವಾದಿಗಳಲ್ಲ. ಎಲ್ಲಾ ಸವಾಲುಗಳನ್ನು ಸ್ವೀಕಾರ ಮಾಡಿ ಧರ್ಮ ಧ್ವಜವನ್ನು ಮೇಲಕ್ಕೆತ್ತುತ್ತೇವೆ. ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ಹಿಂದೂ ಸಮಾಜದ ಕೆಲಸ ಕಾರ್ಯ ನಿರಂತರ ಮಾಡುತ್ತೇನೆ ಎಂದರು.
ಪೂಜಾ ಸಮಿತಿಯ ಅಧ್ಯಕ್ಷ ಮಹೇಂದ್ರವರ್ಮ ಪಡ್ಪು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಸಮಾಜವೆನ್ನುವುದು ನಿಂತ ನೀರಲ್ಲ. ಅದು ನಿರಂತರ ಚಲನಾಶೀಲವಾಗಿ ಹರಿಯುವ ನದಿ ಇದ್ದಂತೆ. ಹಿಂದೂ ಧರ್ಮದ ಆಚಾರ- ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಪೂಜಾ ಸಮಿತಿಯ ಗೌರವಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಪುತ್ತೂರು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, 34 ನೆಕ್ಕಿಲಾಡಿ ಗ್ರಾ.ಪಂ.ನ ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಜೀವನ್, ಕೋಡಿಂಬಾಡಿ ಗ್ರಾ.ಪಂ.ನ ನಿಕಟ ಪೂರ್ವ ಉಪಾಧ್ಯಕ್ಷೆ ಉಷಾ ಲಕ್ಷ್ಮಣ್ ಬೆಳ್ಳಿಪ್ಪಾಡಿ, ಶ್ರೀರಾಮ್ ಭಟ್ ಪದಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯ ಜಯಂತ ಪೊರೋಳಿ, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಕಿರಣ್ ಗೌಂಡತ್ತಿಗೆ, ಶಾಂತಾರಾಮ ಭಟ್, ಪೂಜಾ ಸಮಿತಿಯ ಕೋಶಾಧಿಕಾರಿ ಸುಚಿತ್ ಬೊಳ್ಳಾವು, ಉಪಾಧ್ಯಕ್ಷರಾದ ಹರಿಕೃಷ್ಣ ಕಾಂಚನ, ಎನ್. ರಾಜಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ರಾಜೇಶ್ ಶಾಂತಿನಗರ, ವಸಂತ ಪೆರ್ನೆ, ರವೀಂದ್ರ ರೈ, ಹರೀಶ್ ನಟ್ಟಿಬೈಲು, ಕಾರ್ಯದರ್ಶಿಗಳಾದ ಅಶೋಕ್ ಬೆದ್ರೋಡಿ, ರಾಜೇಶ್ ಕೊಡಂಗೆ, ಅಶೋಕ್ ಪಡ್ಪು, ಜಯಂತ ಪೆರ್ನೆ, ಮೋಹನ್ ಬಂಡಾಡಿ, ಗೌರವ ಸಲಹೆಗಾರರಾದ ಚಿದಾನಂದ ಪಂಚೇರು, ಸಂದೀಪ್ ಕುಪ್ಪೆಟ್ಟಿ, ದಯಾನಂದ ಆರಾಲು, ಕಾರ್ಯಕಾರಿಣಿ ಸದಸ್ಯರಾದ ಲಕ್ಷ್ಮಣ ಗೌಡ ನೆಡ್ಚಿಲು, ಮೋಹನ್‌ದಾಸ್ ಕಾಮತ್, ರಾಜೇಶ್ ಬೆದ್ರೋಡಿ, ಪ್ರವೀಣ್ ನೆಕ್ಕಿಲಾಡಿ, ಪ್ರಚಾರ ಸಮಿತಿಯ ಮೋಹನ್ ಬಂಡಾಡಿ, ದೀಕ್ಷಿತ್ ಹೆನ್ನಡ್ಕ, ರಾಜೇಶ್ ಕೊಡಂಗೆ, ಗಂಗಾಧರ ನೆಕ್ಕಿಲಾಡಿ, ಯತೀಶ ಬೆದ್ರೋಡಿ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ಸಮಿತಿಯ ಗೌರವ ಸಲಹೆಗಾರ ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಜೋಗಿ ವಂದಿಸಿದರು. ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ವೇ.ಮೂ. ಹರೀಶ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ಸುಸ್ವರ ಮೆಲೋಡಿಸ್ ಉಪ್ಪಿನಂಗಡಿ ಇವರಿಂದ ಭಕ್ತಿ- ಭಾವ ಸಂಗಮ ಕಾರ್ಯಕ್ರಮ ನಡೆಯಿತು.